ಮಂಗಳವಾರ, ಮೇ 24, 2022
25 °C
ಭಾರತೀಯ ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ಪತ್ತೆ

ಯುರೋಪ್‌, ಉತ್ತರ ಅಮೆರಿಕ ಜನರಲ್ಲಿ ರೂಪಾಂತರಿ ಕೊರೊನಾ ಹರಡುವಿಕೆ ಹೆಚ್ಚು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಶ್ವಾಸಕೋಶವನ್ನು ರಕ್ಷಿಸುವ ಪ್ರೋಟೀನ್‌ನ ಕೊರತೆಯು ಏಷ್ಯಾದವರಿಗೆ ಹೋಲಿಸಿದರೆ ಯುರೋಪ್ ಮತ್ತು ಉತ್ತರ ಅಮೆರಿಕದವರಲ್ಲಿ ಹೆಚ್ಚಿದ್ದು, ಈ ಎರಡೂ ಖಂಡಗಳ ಜನರಲ್ಲಿ ರೂಪಾಂತರಿ ಕೊರೊನಾ ಹೆಚ್ಚು ವೇಗವಾಗಿ ಹರಡುತ್ತಿರುವುದು ಭಾರತೀಯ ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ಕಂಡುಬಂದಿದೆ. ರೂಪಾಂತರಿ ವೈರಸ್‌ ಹೊಸ ಬಗೆಯಲ್ಲಿ ಯಾವ ರೀತಿ ಹರಡುತ್ತಿದೆ ಎನ್ನುವುದರ ಮೇಲೂ ಈ ಅಧ್ಯಯನ ಬೆಳಕು ಚೆಲ್ಲಿದೆ.

ಈ ಅಧ್ಯಯನ ವರದಿ ಜೆನೆಟಿಕ್ಸ್ ಮತ್ತು ಎವಲ್ಯೂಷನ್ ನಿಯತಕಾಲಿಕದಲ್ಲಿ ಪ್ರಕಟವಾಗಿದೆ. ಡಿ614ಜಿ ರೂಪಾಂತರಿ ಕೊರೊನಾ ವೈರಸ್ ಜಾಗತಿಕಮಟ್ಟದಲ್ಲಿ ಯಾವ ಪ್ರಮಾಣದಲ್ಲಿ ಹರಡುತ್ತಿದೆ ಎನ್ನುವುದನ್ನು ಅಂದಾಜಿಸಿದೆ. ಈ ರೂಪಾಂತರಿ ವೈರಸ್‌ ಉತ್ತರ ಅಮೆರಿಕ ಮತ್ತು ಯುರೋಪಿಯನ್ ಜನಸಂಖ್ಯೆಗೆ ಹೆಚ್ಚಿನ ಪ್ರಮಾಣದಲ್ಲಿ ತಗುಲುವ ಸೋಂಕು ಎಂದು ಹೇಳಲಾಗಿದೆ.

ವಿಜ್ಞಾನಿಗಳ ಪ್ರಕಾರ, ಏಷ್ಯಾದ ಜನರಿಗೆ ಹೋಲಿಸಿದರೆ ಯುರೋಪ್ ಮತ್ತು ಉತ್ತರ ಅಮೆರಿಕದ ಜನರಲ್ಲಿ ಆಲ್ಫಾ-ಆಂಟಿ-ಟ್ರಿಪ್ಸಿನ್ (ಎಎಟಿ) ಎಂಬ ಪ್ರೋಟೀನ್‌ ಕೊರತೆಯು ಹೆಚ್ಚಿದ್ದು, ಎರಡು ಖಂಡಗಳಲ್ಲಿ ಈ ರೂಪಾಂತರಿ ವೈರಸ್‌ ವೇಗವಾಗಿ ಹರಡುತ್ತಿದೆ.

ಕೊರೊನಾ ವೈರಸ್‌ ಹರಡುವಿಕೆ 2020ರ ಜನವರಿಯಲ್ಲಿ ಶೇ 1.95ರಷ್ಟು ಇದ್ದದ್ದು ಕೇವಲ 10 ವಾರಗಳು ಕಳೆಯುವುದರೊಳಗೆ ಅಂದರೆ ಫೆಬ್ರುವರಿ ಮತ್ತು ಮಾರ್ಚ್‌ ನಡುವೆ ಕ್ಷಪ್ರಗತಿಯಲ್ಲಿ ಹರಡಿತು, ಜಾಗತಿಕವಾಗಿ ಶೇ 64.11ಕ್ಕೆ ಏರಿತು.

ಈ ಸೋಂಕು ಪೂರ್ವ ಏಷ್ಯಾದಲ್ಲಿ ಶೇ. 50ರಷ್ಟು ಹರಡುವಿಕೆಗೆ 5.5 ತಿಂಗಳ ಅವಧಿ ತೆಗೆದುಕೊಂಡರೆ, ಯುರೋಪ್‌ನಲ್ಲಿ 2.15 ತಿಂಗಳು ಹಾಗೂ ಉತ್ತರ ಅಮೆರಿಕದಲ್ಲಿ 2.83 ತಿಂಗಳಿಗೆ ಶೇ 50 ತಲುಪಿದೆ ಎಂದು ಪಶ್ಚಿಮ ಬಂಗಾಳದ ಕಲ್ಯಾಣಿಯಲ್ಲಿರುವ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಬಯೋಮೆಡಿಕಲ್‌ ಜೆನೊಮಿಕ್ಸ್‌ (ಎನ್‌ಐಬಿಎಂಜಿ) ಜತೆಗೆ ಅಧ್ಯಯನ ನಡೆಸುತ್ತಿರುವ ಸಂಶೋಧಕರು ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು