ಮಂಗಳವಾರ, ಡಿಸೆಂಬರ್ 7, 2021
27 °C

ಎಂಎಸ್‌ಪಿ ಏಕೆ ಬೇಕು: ರೈತರ ವಿವರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಡುತ್ತಿದ್ದ ರೈತರು ಈಗ ಕನಿಷ್ಠ ಬೆಂಬಲ ಬೆಲೆಯ (ಎಂಎಸ್‌ಪಿ) ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ಎಂಎಸ್‌ಪಿ ಏಕೆ ಅಗತ್ಯ ಮತ್ತು ಎಂಎಸ್‌ಪಿ  ಲೆಕ್ಕಾಚಾರ  ಹೇಗಿರಬೇಕು  ಎಂಬುದನ್ನು  ವಿವರಿಸುವ ಬರಹವನ್ನು ಸಂಯುಕ್ತ ಕಿಸಾನ್ ಮೋರ್ಚಾ ಬುಧವಾರ ಬಿಡುಗಡೆ ಮಾಡಿದೆ.

ಕೃಷಿ ಕಾಯ್ದೆಗಳನ್ನು ತೆಗೆದುಹಾಕಲು, ಮಸೂದೆ ಮಂಡಿಸಲು ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದ ದಿನವೇ ಕಿಸಾನ್ ಸಂಯುಕ್ತ ಮೋರ್ಚಾ ಎಂಎಸ್‌ಪಿಯ ಅಗತ್ಯವನ್ನು ಪ್ರತಿಪಾದಿಸಿದೆ.

‘ಈ ಪ್ರತಿಭಟನೆ ಕೊನೆಯಾಗಿಲ್ಲ. ಮುಂದೆ ಏನು ಮಾಡಬೇಕು ಎಂಬುದನ್ನು ನಿರ್ಧರಿಸಲು ನಾವು ಇದೇ 27ಕ್ಕೆ ಸಭೆ ನಡೆಸಲಿದ್ದೇವೆ’ ಎಂದು ಭಾರತೀಯ ಕಿಸಾನ್ ಯೂನಿಯನ್‌ನ ನಾಯಕ ರಾಕೇಶ್ ಟಿಕಾಯತ್ ಬುಧವಾರ ಟ್ವೀಟ್ ಮಾಡಿದ್ದಾರೆ. 

‘ಕೃಷಿ ವೆಚ್ಚ ಮತ್ತು ಬೆಲೆ ಆಯೋಗವು (ಸಿಎಸಿಪಿ) ಎಲ್ಲಾ ಬೆಳೆಗಳಿಗೆ ರೈತ ಮಾಡಿದ ವೆಚ್ಚ ಮತ್ತು ಕುಟುಂಬದ ಸದಸ್ಯರ ದುಡಿಮೆಯನ್ನು ಸೇರಿಸಿ ಎಂಎಸ್‌ಪಿ ನಿಗದಿ ಮಾಡುತ್ತದೆ. ಆದರೆ ಸ್ವಾಮಿನಾಥನ್ ಆಯೋಗದ ವರದಿಯಲ್ಲಿ ಶಿಫಾರಸು ಮಾಡಲಾದ ಎಂಎಸ್‌ಪಿಯು ರೈತ ಮಾಡಿದ ವೆಚ್ಚ, ಕುಟುಂಬದ ಸದಸ್ಯರ ದುಡಿಮೆ, ಜಮೀನು ಮತ್ತು ಬಂಡವಾಳ ಹೂಡಿಕೆ ಮೇಲಿನ ಗಳಿಕೆಯನ್ನು ಒಳಗೊಂಡಿದೆ. ಸಿಎಸಿಪಿ ನಿಗದಿ ಮಾಡುವ ಎಂಎಸ್‌ಪಿಯು, ಸ್ವಾಮಿನಾಥನ್ ಆಯೋಗದಲ್ಲಿ ವಿವರಿಸಲಾದ ಎಂಎಸ್‌ಪಿಗಿಂತ ಕಡಿಮೆ’ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ವಿವರಿಸಿದೆ.

‘ಬೇರೆ–ಬೇರೆ ರಾಜ್ಯಗಳು ಎಂಎಸ್‌ಪಿಯನ್ನು ಬೇರೆ–ಬೇರೆ ರೀತಿಯಲ್ಲಿ ಲೆಕ್ಕಹಾಕುತ್ತವೆ. ಹೀಗಾಗಿ ಒಂದೇ ಬೆಳೆಗೆ ಹಲವು ರಾಜ್ಯಗಳಲ್ಲಿ ಭಿನ್ನ ಎಂಎಸ್‌ಪಿ ಇದೆ. ಈ ಕಾರಣದಿಂದಲೇ ರೈತರು ಸರಿಯಾದ ಎಂಎಸ್‌ಪಿ ಇರಬೇಕು ಎಂದು ಒತ್ತಾಯಿಸುತ್ತಿದ್ದಾರೆ’ ಎಂದು ಎಸ್‌ಕೆಎಂ ಹೇಳಿದೆ.

‘ಕೃಷಿ ಕಾಯ್ದೆಗಳಿಂದ ಬರಬಹುದಾಗಿದ್ದ ಸಮಸ್ಯೆಗಳು ಮಾತ್ರ ಈಗ ಬಗೆಹರಿದಿವೆ. ಆದರೆ ಕಡಿಮೆ ಬೆಲೆ, ಬೆಳೆನಾಶ, ಅತೀವ ಸಾಲದ ಸಮಸ್ಯೆಗಳು ಹಾಗೇ ಇವೆ. ಎಂಎಸ್‌ಪಿಯಲ್ಲಿ ಸರ್ಕಾರವು ಕೃಷಿ ಉತ್ಪನ್ನಗಳನ್ನು ಖರೀದಿಸುತ್ತದೆ ಎಂಬ ಖಾತರಿ ಸಹ ಇಲ್ಲ. ಈ ಸಮಸ್ಯೆಗಳು ಬಗೆಹರಿಯಬೇಕು ಎಂದರೆ ಸರ್ಕಾರವು  ಸರಿಯಾದ ರೀತಿಯಲ್ಲಿ ಎಂಎಸ್‌ಪಿ ನೀಡಬೇಕು’ ಎಂದು ಎಸ್‌ಕೆಎಂ ಪ್ರತಿಪಾದಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು