ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ| 'ಅಗ್ನಿಪಥ' ವಿರುದ್ಧ ಪ್ರತಿಭಟನೆ, ಹಿಂಸಾಚಾರ: ರೈಲುಗಳಿಗೆ ಬೆಂಕಿ

Last Updated 16 ಜೂನ್ 2022, 10:24 IST
ಅಕ್ಷರ ಗಾತ್ರ

ಪಟ್ನಾ: ಸೇನೆಯ ಅಲ್ಪಾವಧಿ ನೇಮಕಾತಿ ಯೋಜನೆ 'ಅಗ್ನಿಪಥ' ವಿರುದ್ಧ ಬಿಹಾರದಲ್ಲಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಹಲವೆಡೆ ಹಿಂಸಾಚಾರ ನಡೆದಿದೆ. ಹೋರಾಟಗಾರರು ರೈಲುಗಳಿಗೆ ಬೆಂಕಿ ಹಚ್ಚಿ, ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಬಿಜೆಪಿ ಶಾಸಕಿ ಮತ್ತು ಹಲವು ಪಾದಚಾರಿಗಳಿಗೆ ಗಾಯಗಳಾಗಿವೆ.

ಹೊಸ ನೇಮಕಾತಿ ಪ್ರಕ್ರಿಯೆಯ ವಿರುದ್ಧ ಹೋರಾಟಗಾರರು ರೈಲುಗಳನ್ನು ತಡೆದು, ರಸ್ತೆಗಳಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ, ಬೀದಿಯಲ್ಲೇ ಕಸರತ್ತು ಪ್ರದರ್ಶನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಅವರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು. ಕೊನೆಗೆ ಲಾಠಿ ಚಾರ್ಜ್ ಮಾಡಬೇಕಾಯಿತು.

‘ಅಗ್ನಿಪಥ’ದಡಿ ನೇಮಕಗೊಂಡ ಸಿಬ್ಬಂದಿ ಪೈಕಿ ಶೇ 75ರಷ್ಟು ಮಂದಿ ನಾಲ್ಕು ವರ್ಷಗಳ ನಂತರ ಕಡ್ಡಾಯವಾಗಿ ನಿವೃತ್ತಿಯಾಗುವುದು, ಯಾವುದೇ ಪಿಂಚಣಿ ಸೌಲಭ್ಯ ಇಲ್ಲದೇ ಇರುವುದರ ವಿರುದ್ಧ ಉದ್ಯೋಗಾಕಾಂಕ್ಷಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾಭುವಾ ಮತ್ತು ಛಾಪ್ರಾ ನಿಲ್ದಾಣಗಳಲ್ಲಿ ರೈಲ್ವೇ ಬೋಗಿಗಳಿಗೆ ಬೆಂಕಿ ಹಚ್ಚಲಾಯಿತು. ಕೆಲವೆಡೆ ರೈಲ್ವೇ ಕಂಪಾರ್ಟ್‌ಮೆಂಟ್‌ಗಳ ಕಿಟಕಿ ಗಾಜುಗಳನ್ನು ಒಡೆದು ಹಾಕಲಾಗಿದೆ. ಪ್ರತಿಭಟನಾಕಾರರನ್ನು ಚದುರಿಸಲು ಅರಾಹ್‌ನಲ್ಲಿ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಬೇಕಾಯಿತು.

ಪೂರ್ವ ಕೇಂದ್ರ ರೈಲ್ವೆ ವಲಯದಲ್ಲಿ ರೈಲು ಸಂಚಾರಕ್ಕೆ ಭಾರಿ ಅಡಚಣೆಯುಂಟಾಯಿತು. ಹೆಚ್ಚಿನ ದಟ್ಟಣೆ ಇರುವ ಪಾಟ್ನಾ-ಗಯಾ, ಬರೌನಿ-ಕತಿಹಾರ್ ಮತ್ತು ದಾನಪುರ್-ಡಿಡಿಯು ಮಾರ್ಗಗಳಲ್ಲಿ ರೈಲು ಸಂಚಾರಕ್ಕೆ ಅಡ್ಡಿಯುಂಟಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಕ್ಸಾರ್‌ನ ಸ್ಟೇಷನ್ ಮ್ಯಾನೇಜರ್ ರಾಜನ್ ಕುಮಾರ್ ಮಾತನಾಡಿ, ಹೋರಾಟಗಾರರು ಹಳಿಗಳನ್ನು ನಿರ್ಬಂಧಿಸಿರುವುದರಿಂದ ರೈಲುಗಳು ಸ್ಟೇಷನ್‌ ಹೊರಗಿನ ಸಿಗ್ನಲ್‌ನಲ್ಲೇ ನಿಲ್ಲುವಂತಾಯಿತು. ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪೊಲೀಸರು ಮತ್ತು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

ಜೆಹಾನಾಬಾದ್, ಬಕ್ಸಾರ್, ಕತಿಹಾರ್, ಸರನ್, ಭೋಜ್‌ಪುರ ಮತ್ತು ಕೈಮೂರ್‌ ಜಿಲ್ಲೆಗಳಲ್ಲಿ ರಸ್ತೆ ಸಂಚಾರವೂ ಅಸ್ತವ್ಯಸ್ತಗೊಂಡಿದೆ. ಕಲ್ಲು ತೂರಾಟದಿಂದಾಗಿ ಸ್ಥಳೀಯರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನ್ಯಾಯಾಲಯಕ್ಕೆ ತೆರಳುತ್ತಿದ್ದ ಬಿಜೆಪಿ ಶಾಸಕಿ ಅರುಣಾದೇವಿ ಅವರ ಕಾರಿನ ಮೇಲೆ ನಾವಡದಲ್ಲಿ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದು, ಶಾಸಕಿಯೂ ಸೇರಿದಂತೆ ಐವರು ಗಾಯಗೊಂಡಿದ್ದಾರೆ.

‘ನನ್ನ ಕಾರಿನ ಮೇಲೆ ಬಿಜೆಪಿ ಬಾವುಟ ಇದ್ದದ್ದನ್ನು ನೋಡಿದ ಪ್ರತಿಭಟನಾಕಾರರು ಆಕ್ರೋಶಗೊಂಡರೆಂದು ಕಾಣುತ್ತದೆ. ಅವರು ಬಾವುಟವನ್ನು ಹರಿದು ಹಾಕಿದರು. ಈ ವೇಳೆ ನನ್ನ ಚಾಲಕ, ಇಬ್ಬರು ಭದ್ರತಾ ಸಿಬ್ಬಂದಿ ಮತ್ತು ಇಬ್ಬರು ವೈಯಕ್ತಿಕ ಸಿಬ್ಬಂದಿಗೆ ಗಾಯಗಳಾಗಿವೆ’ ಎಂದು ಶಾಸಕಿ ಸುದ್ದಿಗಾರರಿಗೆ ತಿಳಿಸಿದರು.

ಪ್ರತಿಭಟನೆ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಎಷ್ಟು ಮಂದಿಯನ್ನು ಬಂಧಿಸಿದ್ದಾರೆ, ಎಷ್ಟು ಜನರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT