ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುದುಚೇರಿ ಸಚಿವರಿಗೆ ಖಾತೆ ಹಂಚಿಕೆ: ಸಿಎಂ ರಂಗಸ್ವಾಮಿ ಬಳಿ 13 ಖಾತೆಗಳು

ಅಕ್ಷರ ಗಾತ್ರ

ಪುದುಚೇರಿ: ಮುಖ್ಯಮಂತ್ರಿ ಎನ್‌.ರಂಗಸ್ವಾಮಿ ನೇತೃತ್ವದ ಸರ್ಕಾರದಲ್ಲಿ ಭಾನುವಾರ ಸಚಿವರಿಗೆ ಖಾತೆಗಳ ಹಂಚಿಕೆಯಾಗಿದೆ. ರಂಗಸ್ವಾಮಿ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸೇರಿದಂತೆ ಒಟ್ಟು 13 ಖಾತೆಗಳ ಹೊಣೆ ಹೊತ್ತಿದ್ದಾರೆ.

ಆಲ್‌ ಇಂಡಿಯಾ ಎನ್‌ಆರ್‌ ಕಾಂಗ್ರೆಸ್‌ (ಎಐಎನ್‌ಆರ್‌ಸಿ) ಮತ್ತು ಬಿಜೆಪಿ ಮೈತ್ರಿಕೂಟವು ಪುದುಚೇರಿಯಲ್ಲಿ ಸರ್ಕಾರ ರಚಿಸಿದೆ. ಪುದುಚೇರಿ ಸರ್ಕಾರವು ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ಸಚಿವರು ಮತ್ತು ಅವರಿಗೆ ಹಂಚಿಕೆಯಾಗಿರುವ ಖಾತೆಗಳ ಕುರಿತು ತಿಳಿಸಲಾಗಿದೆ.

ಮುಖ್ಯಮಂತ್ರಿ ರಂಗಸ್ವಾಮಿ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ; ಕಂದಾಯ ಮತ್ತು ಅಬಕಾರಿ; ಸಹಕಾರ; ಸಾರ್ವಜನಿಕ ಆಡಳಿತ; ಹಿಂದೂ ಧಾರ್ಮಿಕ ಸಂಸ್ಥೆಗಳು; ವಕ್ಫ್‌ ಬೋರ್ಡ್‌; ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ; ನಗರ ಯೋಜನಾ ಖಾತೆ ಸೇರಿ ಒಟ್ಟು 13 ಖಾತೆಗಳನ್ನು ಹೊಂದಿದ್ದಾರೆ. ಉಳಿದ ಎಲ್ಲ ಸಚಿವರಿಗೆ ತಲಾ ಆರು ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.

ಬಿಜೆಪಿಯ ಎ.ನಮಶಿವಾಯಂ ಅವರಿಗೆ ಗೃಹ ಖಾತೆ ನೀಡಲಾಗಿದೆ. ಅದರೊಂದಿಗೆ ಇಂಧನ, ಕೈಗಾರಿಕೆ, ವಾಣಿಜ್ಯ, ಶಿಕ್ಷಣ, ಕ್ರೀಡೆ ಮತ್ತು ಯುವಜನ ಹಾಗೂ ಸೈನಿಕ ಕಲ್ಯಾಣ ಖಾತೆಗಳ ಜವಾಬ್ದಾರಿ ವಹಿಸಲಾಗಿದೆ. ಬಿಜೆಪಿಯ ಸಾಯಿ ಸರವಣನ್‌ ಕುಮಾರ್‌, ಎಐಎನ್‌ಆರ್‌ಸಿಯ ಕೆ.ಲಕ್ಷ್ಮಿನಾರಾಯಣನ್‌, ಸಿ.ಡಿಜೀಕೌಮರ್ ಅವರಿಗೂ ತಲಾ 6 ಖಾತೆಗಳು ಹಂಚಿಕೆಯಾಗಿವೆ.

ಪುದುಚೇರಿ ಕೇಂದ್ರಾಡಳಿತ ಪ್ರದೇಶದ ಮೊದಲ ಮಹಿಳಾ ಸಚಿವೆ ಚಂದಿರಾ ಪ್ರಿಯಾಂಕ ಅವರಿಗೆ ಸಾರಿಗೆ ಹೊಣೆ ನೀಡಲಾಗಿದೆ. ಅದರೊಂದಿಗೆ ಆದಿ ದ್ರಾವಿಡ ಕಲ್ಯಾಣಾಭಿವೃದ್ಧಿ, ವಸತಿ, ಕಾರ್ಮಿಕ ಮತ್ತು ಉದ್ಯೋಗ, ಕಲೆ ಮತ್ತು ಸಂಸ್ಕೃತಿ ಹಾಗೂ ಆರ್ಥಿಕತೆ ಮತ್ತು ಸಾಂಖ್ಯಿಕ ಖಾತೆಗಳನ್ನು ನಿರ್ವಹಿಸಲಿದ್ದಾರೆ.

ಪುದುಚೇರಿ ವಿಧಾನಸಭೆಗೆ ಏಪ್ರಿಲ್‌ 6ರಂದು ಚುನಾವಣೆ ನಡೆದು ಮೇ 2ರಂದು ಫಲಿತಾಂಶ ಹೊರ ಬಂದಿತು. ಮೇ 7ರಂದು ರಂಗಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ, ಕೋವಿಡ್‌ ಚಿಕಿತ್ಸೆಗಾಗಿ ಅವರು ಆಸ್ಪತ್ರೆಗೆ ದಾಖಲಾದರು ಹಾಗೂ ಇತರೆ ಕಾರಣಗಳಿಂದ ಸಚಿವ ಸಂಪುಟ ರಚನೆ ವಿಳಂಬವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT