ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಲ್ವಾಮ ದಾಳಿ: ಹುತಾತ್ಮ ಯೋಧರಿಗೆ ನಮನ

Last Updated 14 ಫೆಬ್ರುವರಿ 2022, 12:46 IST
ಅಕ್ಷರ ಗಾತ್ರ

ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ 2019ರಲ್ಲಿ ನಡೆದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್‌ಪಿಎಫ್‌ ಯೋಧರಿಗೆ ಇಲ್ಲಿನ ಲೆಥ್‌ಪೋರಾ ಶಿಬಿರದಲ್ಲಿ ಸೋಮವಾರ ಗೌರವನಮನ ಸಲ್ಲಿಸಲಾಯಿತು.

ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಹಮ್ಮಿಕೊಂಡಿದ್ದ ಮೂರನೇ ವರ್ಷದ ಗೌರವ ಸಮರ್ಪಣೆ ಸಮಾರಂಭದಲ್ಲಿ ಸಿಆರ್‌ಪಿಎಫ್‌ನ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ದಲ್‌ಜಿತ್‌ ಸಿಂಗ್‌ ಚೌಧರಿ ಸೇರಿದಂತೆ ಅಧಿಕಾರಿಗಳು ಹಾಗೂ ಯೋಧರು ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.

ನಂತರ ಮಾತನಾಡಿದ ದಲ್‌ಜಿತ್‌ ಸಿಂಗ್‌, ‘2019ರ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ 40 ವೀರ ಯೋಧರನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ಫೆ.14ರಂದು ನಾವು ಇಲ್ಲಿ ಸೇರಿ ಹುತಾತ್ಮ ಯೋಧರ ತ್ಯಾಗ ಹಾಗೂ ಬಲಿದಾನವನ್ನು ಹೃದಯಾಂತರಾಳದಿಂದ ಸ್ಮರಿಸುತ್ತೇವೆ’ ಎಂದು ಹೇಳಿದರು.

ಸಿಆರ್‌ಪಿಎಫ್ ಯೋಧ ಎಸ್‌ಎನ್‌ಎಸ್ ಮುಂಡಾ ಮಾತನಾಡಿ, ’ನಮ್ಮೆಲ್ಲರಿಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದವರನ್ನು ನಾವು ಸದಾ ಸ್ಮರಿಸುತ್ತೇವೆ. ಹುತಾತ್ಮರಾದ ನಮ್ಮ ಸಹೋದ್ಯೋಗಿಗಳ ತ್ಯಾಗವನ್ನು ವ್ಯರ್ಥವಾಗಲು ಬಿಡುವುದಿಲ್ಲ’ ಎಂದು ಹೇಳಿದರು.

2019ರ ಫೆ.14ರಂದು ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಜೈಶ್-ಎ-ಮೊಹಮ್ಮದ್ (ಜೆಇಎಂ) ಉಗ್ರ ಆದಿಲ್ ಅಹ್ಮದ್ ದಾರ್ ಸುಧಾರಿತ ಸ್ಫೋಟಕ ಸಾಮಗ್ರಿ ತುಂಬಿದ ಕಾರನ್ನು ಸಿಆರ್‌ಪಿಎಫ್‌ ಯೋಧರನ್ನು ಕರೆದೊಯ್ಯುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆಸಿ ತನ್ನನ್ನು ತಾನು ಸ್ಪೋಟಿಸಿಕೊಂಡಿದ್ದ. ಈ ಭೀಕರ ಸ್ಪೋಟದಲ್ಲಿ 40 ಸಿಆರ್‌ಪಿಎಫ್‌ ಯೋಧರು ಹುತಾತ್ಮರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT