ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಜೊತೆಗೆ ಪಂಜಾಬ್ ಅಧಿಕಾರಿಗಳ ಸಭೆ: ಮಾನ್ ಸಮರ್ಥನೆ

Last Updated 14 ಏಪ್ರಿಲ್ 2022, 11:36 IST
ಅಕ್ಷರ ಗಾತ್ರ

ಚಂಡೀಗಡ: ಎಎಪಿಯ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಜತೆಗೆ ರಾಜ್ಯದ ಅಧಿಕಾರಿಗಳು ಸಭೆ ನಡೆಸಿದ್ದನ್ನು ಪಂಜಾಬ್ ಮುಖ್ಯಮಂತ್ರಿ ಭಗವಾನ್ ಮಾನ್ ಅವರು ಗುರುವಾರ ಸಮರ್ಥಿಸಿಕೊಂಡಿದ್ದು, ದೆಹಲಿಯ ‘ರಿಮೋಟ್ ಕಂಟ್ರೋಲ್’ ಮೂಲಕ ಸರ್ಕಾರವನ್ನು ನಡೆಸಲಾಗುತ್ತಿದೆ ಎನ್ನುವ ಆರೋಪವನ್ನು ತಳ್ಳಿಹಾಕಿದ್ದಾರೆ.

ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿಯಾಗುವಂತೆ ತಮ್ಮ ಸರ್ಕಾರದ ಅಧಿಕಾರಿಗಳನ್ನು ತಾವೇ ಕಳುಹಿಸಿದ್ದಾಗಿ ಹೇಳಿರುವ ಮಾನ್, ಇತರ ರಾಜ್ಯಗಳಿಂದ ತಮ್ಮ ರಾಜ್ಯಕ್ಕೆ ಅಳವಡಿಸಬಹುದಾದ ಅಂಶಗಳನ್ನು ಕಲಿಯಲು ಅಧಿಕಾರಿಗಳನ್ನು ಇತರ ರಾಜ್ಯಗಳಿಗೂ ಕಳುಹಿಸುವುದಾಗಿಯೂ ಹೇಳಿದ್ದಾರೆ.

ಕೇಜ್ರಿವಾಲ್ ಜೊತೆಗಿನ ಅಧಿಕಾರಿಗಳ ಸಭೆಯನ್ನು ರಾಜ್ಯದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಹಾಗೂ ಒಕ್ಕೂಟದ ಉಲ್ಲಂಘನೆ ಎಂದು ಪಂಜಾಬ್‌ನ ನೂತನ ಎಎಪಿ ಸರ್ಕಾರದ ವಿರುದ್ಧ ವಿರೋಧಪಕ್ಷಗಳು ಟೀಕೆ ವ್ಯಕ್ತಪಡಿಸಿವೆ.

ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ‘ರಬ್ಬರ್ ಸ್ಟ್ಯಾಂಪ್’ ಎಂದೂ ವ್ಯಂಗ್ಯವಾಡಿದ್ದಾರೆ. ಆದರೆ, ಇದಕ್ಕೆ ತಿರುಗೇಟು ನೀಡಿರುವ ಮಾನ್ ಅವರು, ‘ಎಲ್ಲಾ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳುತ್ತಿದ್ದೇನೆ’ ಎಂದು ಜಲಂಧರ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ದೆಹಲಿಯಲ್ಲಿ ಕೇಜ್ರಿವಾಲ್ ಜತೆಗೆ ರಾಜ್ಯದ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ನೀವು ಇರಲಿಲ್ಲವಲ್ಲ’ ಎನ್ನುವ ಸುದ್ದಿಗಾರರ ಪ್ರಶ್ನೆಗೆ, ‘ನಾನು ಅಧಿಕಾರಿಗಳನ್ನು ತರಬೇತಿಗಾಗಿ ದೆಹಲಿಗೆ ಕಳುಹಿಸಿದ್ದೆ. ಅದೇ ಅಧಿಕಾರಿಗಳು ಗುಜರಾತ್‌ ಮತ್ತು ತಮಿಳುನಾಡಿಗೂ ಹೋಗಿದ್ದರು. ಪಂಜಾಬಿನ ಅನುಕೂಲಕ್ಕಾಗಿ ಅವರನ್ನು ಇಸ್ರೇಲ್‌ಗೆ ಕಳುಹಿಸಬೇಕು ಅನಿಸಿದಲ್ಲಿ ನಾನು ಅವರನ್ನು ಅಲ್ಲಿಗೂ ಕಳುಹಿಸುತ್ತೇನೆ. ಮುಂದಿನ ದಿನಗಳಲ್ಲಿ ನಾನು ಅಧಿಕಾರಿಗಳನ್ನು ಆಂಧ್ರಪ್ರದೇಶಕ್ಕೂ ಕಳುಹಿಸುತ್ತೇನೆ’ ಎಂದು ಮಾನ್ ಉತ್ತರಿಸಿದ್ದಾರೆ.

‘ಪಶ್ಚಿಮ ಬಂಗಾಳದಲ್ಲಿ ನನಗೆ ಏನಾದರೂ ಒಳ್ಳೆಯದು ಕಂಡು ಬಂದರೆ ನಾನು ಅಲ್ಲಿಗೂ ಅಧಿಕಾರಿಗಳನ್ನು ಕಳುಹಿಸುವೆ’ ಎಂದ ಮಾನ್, ಈ ಹಿಂದೆ ತಾವು ಸೂಚಿಸಿದಂತೆ ‘ಒಳ್ಳೆಯ ಸುದ್ದಿಯೊಂದನ್ನು’ ಏಪ್ರಿಲ್ 16ಕ್ಕೆ ಪ್ರಕಟಿಸುವುದಾಗಿಯೂ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT