ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಂಗೆ ಭದ್ರತೆ ನೀಡಲಾಗದ ಸಿಎಂ ಚನ್ನಿ ಪಂಜಾಬ್‌ಗೆ ಸುರಕ್ಷತೆ ನೀಡುವರೇ: ಅಮಿತ್ ಶಾ

Last Updated 13 ಫೆಬ್ರುವರಿ 2022, 14:54 IST
ಅಕ್ಷರ ಗಾತ್ರ

ಲೂಧಿಯಾನ: ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ಗೆ ಭೇಟಿ ನೀಡಿದ್ದಾಗ ಸೂಕ್ತ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ವಿಫಲವಾಗಿದ್ದನ್ನು ಪ್ರಸ್ತಾಪಿಸಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಪ್ರಧಾನಿಗೆ ಸುರಕ್ಷಿತ ಮಾರ್ಗ ಒದಗಿಸಲು ಸಾಧ್ಯವಾಗದ ಮುಖ್ಯಮಂತ್ರಿ ರಾಜ್ಯವನ್ನು ಸುರಕ್ಷಿತವಾಗಿಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

'ಪಂಜಾಬ್‌ನಲ್ಲಿ ಮತ್ತೆ ಕಾಂಗ್ರೆಸ್‌ ಸರ್ಕಾರ ರಚಿಸಲು ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಕನಸು ಕಾಣುತ್ತಿದ್ದಾರೆ. ಭಾರತದ ಪ್ರಧಾನಿಗೆ ಸುರಕ್ಷಿತ ಮಾರ್ಗವನ್ನು ಒದಗಿಸಲು ಸಾಧ್ಯವಾಗದ ಮುಖ್ಯಮಂತ್ರಿಯೊಬ್ಬರು ಪಂಜಾಬ್‌ಗೆ ಭದ್ರತೆ ನೀಡಲು ಸಾಧ್ಯವೇ?' ಎಂದು ಲೂಧಿಯಾನದಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಅಮಿತ್‌ ಶಾ ಪ್ರಶ್ನಿಸಿದರು.

ಜನವರಿ 5ರಂದು ಪಂಜಾಬ್‌ನ ಫಿರೋಜ್‌ಪುರದ ಮೇಲ್ಸೇತುವೆಯ ಮೇಲೆ ಪ್ರಧಾನಿ ಮೋದಿ ಸುಮಾರು 20 ನಿಮಿಷ ಸಿಲುಕಿದ್ದರು.

'ರಾಜ್ಯವನ್ನು ಸುರಕ್ಷಿತವಾಗಿಡಲು ಸಾಧ್ಯವಿರದ ಚನ್ನಿ ಎರಡನೇ ಅವಧಿಗೆ ಆಡಳಿತ ನಡೆಸಲು ಯಾವುದೇ ನೈತಿಕ ಅಧಿಕಾರವನ್ನು ಹೊಂದಿಲ್ಲ' ಎಂದರು.

ಪಾಕಿಸ್ತಾನದೊಂದಿಗೆ 553 ಕಿ.ಮೀ ಗಡಿ ಹಂಚಿಕೊಂಡಿರುವ ಪಂಜಾಬ್‌ನ ಅಂತರರಾಷ್ಟ್ರೀಯ ಗಡಿ ಭಾಗಗಳಲ್ಲಿ ಹೆರಾಯಿನ್‌ ಕಳ್ಳಸಾಗಾಣಿಕೆ ಅಧಿಕವಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎಗೆ ಮತ ನೀಡಿ ರಾಜ್ಯದಲ್ಲಿ ಅಧಿಕಾರಕ್ಕೆ ತಂದರೆ, ನಾಲ್ಕು ಜಿಲ್ಲೆಗಳಲ್ಲಿ ಮಾದಕ ವಸ್ತುಗಳ ನಿಯಂತ್ರಣ ಮಂಡಳಿಯ (ಎನ್‌ಸಿಬಿ) ಕಚೇರಿಗಳನ್ನು ತೆರೆಯುವುದಾಗಿ ಅಮಿತ್‌ ಶಾ ಭರವಸೆ ನೀಡಿದರು.

ಎಲ್ಲ ಜಿಲ್ಲೆಗಳಲ್ಲೂ ಮಾದಕ ವಸ್ತು ನಿಯಂತ್ರಣ ಕಾರ್ಯಪಡೆಯನ್ನು ರಚಿಸುವುದಾಗಿಯೂ ಹೇಳಿದರು.

ಎಎಪಿಯ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಟೀಕಿಸಿದ ಅಮಿತ್‌ ಶಾ, 'ಪಂಜಾಬ್‌ ಸುರಕ್ಷತೆಯನ್ನು ಕೇವಲ ಎನ್‌ಡಿಎ ಮಾತ್ರ ಮಾಡಲು ಸಾಧ್ಯವಿದೆ. ಕೇಜ್ರಿವಾಲ್‌ ಅವರಿಂದ ಪಂಜಾಬ್‌ನ ಸುರಕ್ಷತೆ ಸಾಧ್ಯವಿಲ್ಲ' ಎಂದರು.

ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಅಮಿತ್‌ ಶಾ, '1984ರ ಸಿಖ್‌ ವಿರೋಧಿ ದಂಗೆಯನ್ನು ಯಾರೊಬ್ಬರಿಂದಲೂ ಮರೆಯಲು ಸಾಧ್ಯವಿಲ್ಲ. ಈಗಲೂ ಆ ಘಟನೆಯು ಕಣ್ಣಲ್ಲಿ ನೀರು ತರಿಸುತ್ತದೆ. ಕಾಂಗ್ರೆಸ್‌ ನಡೆಸಿದ ಪಾಪ ಕೃತ್ಯದ ಕುರಿತು ಚನ್ನಿ ವಿವರಣೆ ನೀಡಬೇಕು' ಎಂದು ಒತ್ತಾಯಿಸಿದರು.

ಪಂಜಾಬ್‌ನಲ್ಲಿ ಸಿಖ್‌ ಮತ್ತು ಹಿಂದೂಗಳ ಮತಾಂತರವು ಪ್ರಮುಖ ವಿಚಾರವಾಗಿದೆ. ಚನ್ನಿ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಥವಾ ಎಎಪಿಯಿಂದ ಈ ಮತಾಂತರಗಳನ್ನು ತಡೆಯಲು ಸಾಧ್ಯವಿಲ್ಲ. ಬಿಜೆಪಿಯಿಂದ ಮಾತ್ರವೇ ಅದನ್ನು ತಡೆಯಲು ಆಗುವುದು ಎಂದ ಅವರು ಪಕ್ಷಕ್ಕೆ ಮತ ನೀಡುವಂತೆ ಕೋರಿದರು.

117 ಸ್ಥಾನಗಳ ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌, ಎಎಪಿ, ಶಿರೋಮಣಿ ಅಕಾಲಿ ದಳ ಮತ್ತು ಬಿಎಸ್‌ಪಿ ಮೈತ್ರಿ ಹಾಗೂ ಬಿಜೆಪಿ ಮತ್ತು ಪಂಜಾಬ್‌ ಲೋಕ ಕಾಂಗ್ರೆಸ್‌ ಮೈತ್ರಿಕೂಟಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಫೆಬ್ರುವರಿ 20ರಂದು ಪಂಜಾಬ್‌ನಲ್ಲಿ ಮತದಾನ ನಡೆಯಲಿದೆ.

1997ರಿಂದಲೂ ಶಿರೋಮಣಿ ಅಕಾಲಿ ದಳವು ಎಲ್ಲ ಚುನಾವಣೆಗಳನ್ನು ಬಿಜೆಪಿ ಮೈತ್ರಿಯೊಂದಿಗೆ ಸ್ಪರ್ಧಿಸಿ ಗೆಲುವು ಸಾಧಿಸಿತ್ತು. ಕೇಂದ್ರ ಸರ್ಕಾರವು ಕೃಷಿ ಕಾಯ್ದೆಗಳನ್ನು ಜಾರಿಗೆ ತರುತ್ತಿದ್ದಂತೆ ಅದನ್ನು ವಿರೋಧಿಸಿ 2020ರ ಸೆಪ್ಟೆಂಬರ್‌ ನಂತರದಲ್ಲಿ ಎನ್‌ಡಿಎ ಮೈತ್ರಿಕೂಟದಿಂದ ಶಿರೋಮಣಿ ಅಕಾಲಿ ದಳವು ಹೊರ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT