ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಕಾರ್ಯಸೂಚಿ: ಎಎಪಿಯ ‘ಪಂಜಾಬ್‌ ಮಾದರಿ’ ಘೋಷಣೆ

Last Updated 13 ಜನವರಿ 2022, 1:42 IST
ಅಕ್ಷರ ಗಾತ್ರ

ಚಂಡೀಗಡ: ಪಂಜಾಬ್‌ ಗದ್ದುಗೆ ಮೇಲೆ ಕಣ್ಣಿಟ್ಟಿರುವ ಆಮ್‌ ಆದ್ಮಿ ಪಕ್ಷ(ಎಎಪಿ) ತನ್ನ ‘ಪಂಜಾಬ್‌ ಮಾದರಿ’ ಚುನಾವಣಾ ಕಾರ್ಯಸೂಚಿಯನ್ನು ಬುಧವಾರ ಬಿಡುಗಡೆ ಮಾಡಿತು. ಎಎಪಿ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಪಂಜಾಬ್‌ ಮಾದರಿ ಕಾರ್ಯಸೂಚಿಯನ್ನು ಬಿಡುಗಡೆ ಮಾಡಿದರು.

‘ಸಿಖ್ಖರ ಧಾರ್ಮಿಕ ಗ್ರಂಥ ಅಪವಿತ್ರಗೊಳಿಸಿದ ಪ್ರಕರಣದಲ್ಲಿ ನ್ಯಾಯ ಕೊಡಿಸಲಾಗುವುದು. ಪ್ರತೀ ಮನೆಗೂ 300 ಯುನಿಟ್‌ವರೆಗೆ ಉಚಿತ ವಿದ್ಯುತ್‌, ಮಾದಕ ವಸ್ತು ಪೂರೈಕೆಗೆ ಕಡಿವಾಣ ಹಾಕಲಾಗುತ್ತದೆ’ ಎಂದು ಕಾರ್ಯಸೂಚಿಯಲ್ಲಿ ವಿವರಿಸಲಾಗಿದೆ. ಒಟ್ಟು 10 ಅಂಶಗಳನ್ನು ಈಕಾರ್ಯಸೂಚಿಯಲ್ಲಿ ಸೇರಿಸಲಾಗಿದೆ ಎಂದು ಕೇಜ್ರಿವಾಲ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣೆ ಘೋಷಣೆ ಆದಾಗಿನಿಂದ ಪಂಜಾಬ್‌ ಜನರು ಸಂತೋಷದಿಂದ ಇದ್ದಾರೆ. ಬದಲಾವಣೆ ತರಲು ಒಂದು ಅವಕಾಶ ದೊರೆತಿದೆ ಎಂದು ಅವರು ಭಾವಿಸಿದ್ದಾರೆ. 1966ರಲ್ಲಿ ಪಂಜಾಬ್‌ ಪ್ರತ್ಯೇಕ ರಾಜ್ಯವಾಯಿತು. ಅಲ್ಲಿಂದ ಇಲ್ಲಿಯವರೆಗೆಪಂಜಾಬ್‌ನಲ್ಲಿ 25 ವರ್ಷಗಳ ಕಾಲ ಕಾಂಗ್ರೆಸ್‌ ಮತ್ತು 19 ವರ್ಷಗಳ ಕಾಲ ಬಾದಲ್‌ ಕುಟುಂಬ ಆಡಳಿತ ನಡೆಸಿವೆ. ಪಾಲುದಾರಿಕೆ ಆಧಾರದಲ್ಲಿ ಈ ಎರಡೂ ಪಕ್ಷಗಳು ಪಂಜಾಬನ್ನು ಆಳಿವೆ. ಕಾಂಗ್ರೆಸ್‌ ಅಥವಾ ಬಾದಲ್‌ ಅವರ ಪಕ್ಷ (ಶಿರೋಮಣಿ ಅಕಾಲಿ ದಳ) ಎರಡರಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಸರ್ಕಾರವನ್ನು ಅವರು ಸಹಭಾಗಿತ್ವದಲ್ಲೇ ನಡೆಸುವುದು. ಯಾವುದೇ ವಿಷಯದಲ್ಲೂ ಒಬ್ಬರ ವಿರುದ್ಧ ಒಬ್ಬರು ಕ್ರಮ ಕೈಗೊಳ್ಳುವುದಿಲ್ಲ’ ಎಂದು ಅವರು
ಆರೋಪಿಸಿದ್ದಾರೆ.

ಕಾಂಗ್ರೆಸ್‌ ಮತ್ತು ಬಾದಲ್‌ ಕುಟುಂಬ ಪಂಜಾಬನ್ನು ಲೂಟಿ ಮಾಡುತ್ತಿವೆ ಎಂದು ಆರೋಪಿಸಿದ ಅವರು, ‘ಈ ಸಹಭಾಗಿತ್ವವನ್ನು ಕೊನೆಗಾಣಿಸಿ ಪಂಜಾಬ್‌ನಲ್ಲಿ ಸಾಮಾನ್ಯ ಜನರ, ಸಾಮಾನ್ಯ ಪಂಜಾಬಿಗಳ ಸರ್ಕಾರವನ್ನು ತರಲು ಜನರು ಈ ಬಾರಿ ನಿರ್ಧರಿಸಿದ್ದಾರೆ. ಅದಕ್ಕಾಗಿ ಎಎಪಿಗೆ ಒಂದು ಅವಕಾಶವನ್ನು ನೀಡಲು ಜನರು ಮನಸ್ಸು ಮಾಡಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಎಎಪಿ ಪಂಜಾಬ್‌ ಘಟಕದ ಮುಖ್ಯಸ್ಥ ಭಗವಂತ್‌ ಮಾನ್‌ ಮತ್ತು ಇತರ ನಾಯಕರು ಕೆಲವು ವಾರಗಳಿಂದ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಜನರನ್ನು ಭೇಟಿ ಆಗಿ ಚರ್ಚೆ ನಡೆಸುತ್ತಿದ್ದಾರೆ. ಹಲವಾರು ವರ್ಗಗಳ ಜನರಿಂದ ದೊರೆತ ಸಲಹೆಗಳ ಆಧಾರದಲ್ಲಿ ಪಕ್ಷವು ಪಂಜಾಬ್ ಮಾದರಿ ಕಾರ್ಯಸೂಚಿಯನ್ನು ರೂಪಿಸಿದೆ. ಎಎಪಿಯು ಸರ್ಕಾರ ರಚಿಸಿದರೆ ನಾವು ಪಂಜಾಬ್‌ಅನ್ನು ಸಂಮೃದ್ಧವಾದ ಮತ್ತು ಅಭಿವೃದ್ಧಿ ಹೊಂದಿದ ಹೊಸ ಪಂಜಾಬ್‌ ಆಗಿ ರೂಪಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.

‘ಉದ್ಯೋಗ ಸೃಷ್ಟಿ ಮಾಡುವಂಥ ಮಾರ್ಗಗಳನ್ನು ಹುಟ್ಟುಹಾಕಲಾಗುವುದು. ಉದ್ಯೋಗ ಅರಸಿ ಕೆನಡಾ ಸೇರಿ ಹಲವಾರು ದೇಶಗಳಿಗೆ ತೆರಳಿರುವ ಯುವಕರು ಪಂಜಾಬ್‌ಗೆ ಮರಳಿ ಇಲ್ಲಿಯೇ ಉದ್ಯೋಗದಲ್ಲಿ ತೊಡಗುವಂತೆ ಮಾಡಲಾಗುವುದು. ಇಲ್ಲಿಯ ಸರ್ಕಾರಗಳಿಂದ ಸಿಗುತ್ತಿರುವ ಪ್ರೋತ್ಸಾಹದ ಕಾರಣ ಡ್ರಗ್‌ ಮಾಫಿಯಾ ಈಗಲೂ ಮೊದಲಿನಂತೆಯೇ ಭದ್ರವಾಗಿದೆ. ಎಎಪಿ ಡ್ರಗ್‌ ಮಾಫಿಯಾವನ್ನು ನಿಯಂತ್ರಿಸಲಿದೆ’ ಎಂದು ಅವರು ಹೇಳಿದ್ದಾರೆ.

‘ಪಂಜಾಬ್‌ ಅನ್ನು ಭ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿ ಮಾಡುತ್ತೇವೆ. ಲಂಚ ನೀಡಿ ತಮ್ಮ ಕೆಲಸ ಮಾಡಸಿಕೊಳ್ಳುವಂಥ ಸ್ಥಿತಿ ಇನ್ನು ಮುಂದೆ ಸಾಮಾಜ್ಯ ಜನರಿಗೆ ಬರುವುದಿಲ್ಲ. ಸರ್ಕಾರಿ ಶಾಲೆಗಳು ಮತ್ತು ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಲಾಗುವುದು. 1,600 ಮೊಹ‌ಲ್ಲಾ ಕ್ಲಿನಿಕ್‌ಗಳನ್ನು ತೆರೆಯಲಾಗುವುದು. 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮಾಸಿಕ ₹1,000 ಗೌರವಧನ ನೀಡುತ್ತೇವೆ’ ಎಂದು ಅವರು
ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT