ಪಂಜಾಬ್: ಪ್ರತ್ಯೇಕತಾವಾದಿ ಅಮೃತ್‌ಪಾಲ್ ಬಂಧನಕ್ಕೆ ಕಸರತ್ತು, ಪೊಲೀಸ್ ಸರ್ಪಗಾವಲು

ಚಂಡೀಗಡ: ಕೋಮು ಸಂಘರ್ಷ ಹರಡಲು ಯತ್ನಿಸಿದ ಆರೋಪದಲ್ಲಿ, ಖಾಲಿಸ್ತಾನ್ ಪರ ಸಹಾನುಭೂತಿ ಹೊಂದಿರುವ ಸಿಖ್ ಮೂಲಭೂತವಾದಿ ಧರ್ಮ ಪ್ರಚಾರಕ ಅಮೃತ್‌ಪಾಲ್ ಸಿಂಗ್ ವಿರುದ್ಧ ಪಂಜಾಬ್ ಪೊಲೀಸರು ಭಾನುವಾರವೂ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಅಮೃತಸರದ ಜಲ್ಲುಪುರ್ ಖೇರಾ ಗ್ರಾಮದಲ್ಲಿರುವ ಅಮೃತಪಾಲ್ ಸಿಂಗ್ ಅವರ ನಿವಾಸದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜಲಂಧರ್ ಜಿಲ್ಲೆಯಾದ್ಯಂತ ಪೊಲೀಸ್ ಬಿಗಿ ಭದ್ರತೆ ಕಲ್ಪಸಲಾಗಿದೆ.
ಅಮೃತ್‌ಪಾಲ್ ಬಂಧನಕ್ಕೆ ಹುಡುಕಾಟ ನಡೆಸಿದ್ದು, ಅವರ 78 ಬೆಂಬಲಿಗರನ್ನು ಬಂಧಿಸಲಾಗಿದೆ. ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ರೈಫಲ್, ರಿವಾಲ್ವರ್, ಸಜೀವ ಗುಂಡುಗಳನ್ನು ಜಪ್ತಿ ಮಾಡಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ರಾಜ್ಯದಾದ್ಯಂತ ಭಾನುವಾರ ಮಧ್ಯಾಹ್ನ 12 ಗಂಟೆವರೆಗೆ ಇಂಟರ್‌ನೆಟ್ ಹಾಗೂ ಎಸ್‌ಎಂಎಸ್ ಸೇವೆ ಸ್ಥಗಿತಗೊಳಿಸಿ ರಾಜ್ಯ ಗೃಹ ಇಲಾಖೆ ಆದೇಶಿಸಿದೆ.
ಸಿಂಗ್ ಅವರನ್ನು ಪತ್ತೆಹಚ್ಚುವ ಕಾರ್ಯಾಚರಣೆ ನಡೆಯುತ್ತಿದೆ. ಜಲಂಧರ್ ಜಿಲ್ಲೆಯ ಮೆಹತ್‌ಪುರ ಗ್ರಾಮದಲ್ಲಿ ಅಮೃತ್ ಪಾಲ್ ಹಾಗೂ ಅವರ ಬೆಂಬಲಿಗರು ಇರುವ ವಾಹನವನ್ನು ಪೊಲೀಸರು ಬೆನ್ನತ್ತಿದ್ದರು. ಪೊಲೀಸರ ಕೈಗೆ ಇನ್ನೇನು ಸಿಕ್ಕೇಬಿಟ್ಟರು ಎನ್ನುವಷ್ಟರಲ್ಲಿ ತಪ್ಪಿಸಿಕೊಂಡರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಶಾಂತಿ ಕಾಪಾಡಲು ಮನವಿ: ಶಾಂತಿಯಿಂದ ಇರುವಂತೆ ಪಂಜಾಬ್ ಜನರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಇಂಟರ್‌ನೆಟ್ ಬಂದ್ ಮಾಡಲಾಗಿದ್ದು, ಜನರು ಭೀತಿಗೆ ಒಳಗಾಗಬಾರದು ಎಂದು ಹೇಳಿದ್ದಾರೆ.
ಅಮೃತ್‌ಪಾಲ್ ವಿರುದ್ಧ ಹಲವು ಪ್ರಕರಣ
ಅಮೃತ್‌ಪಾಲ್ ಹಾಗೂ ಸಹಚರರ ವಿರುದ್ಧ ಪಂಜಾಬ್‌ನಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ದ್ವೇಷ ಭಾಷಣ ಮಾಡಿದ ಆರೋಪದಲ್ಲಿ ಅಜನಾಲದಲ್ಲಿ ಪೊಲೀಸರು ಕಳೆದ ವಾರ ಪ್ರಕರಣ ದಾಖಲಿಸಿಕೊಂಡಿದ್ದರು.
ಅಮೃತ್‌ಪಾಲ್ ಹಾಗೂ ಬೆಂಬಲಿಗರು ತನ್ನನ್ನು ಅಪಹರಿಸಿ, ಥಳಿಸಿದ್ದಾರೆ ಎಂದು ಆರೋಪಿಸಿದ್ದ ವ್ಯಕ್ತಿಯೊಬ್ಬರು ಅಜನಾಲ ಪೊಲೀಸ್ ಠಾಣೆಗೆ ಕಳೆದ ತಿಂಗಳು ದೂರು ನೀಡಿದ್ದರು. ಈ ದೂರಿನನ್ವಯ, ಅಮೃತ್‌ಪಾಲ್ ಹಾಗೂ ಆರು ಸಹಚರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ವಿಚಾರವಾಗಿ ಲವ್‌ಪ್ರೀತ್ ಸಿಂಗ್ ತೂಫಾನ್ ಎಂಬ ಬೆಂಬಲಿಗನನ್ನು ಬಂಧಿಸಿದ್ದರು.
ಇದರಿಂದ ಕೆರಳಿದ್ದ ಸಿಂಗ್ ಹಾಗೂ ಬೆಂಬಲಿಗರು ತಮ್ಮ ವಿರುದ್ಧದ ಪ್ರಕರಣ ವಾಪಸ್ ಪಡೆಯುವಂತೆ ಪೊಲೀಸರಿಗೆ ಬೆದರಿಕೆ ಹಾಕಿದ್ದರು. ನೂರಾರು ಬೆಂಬಲಿಗರು ಬ್ಯಾರಿಕೇಡ್ ಮುರಿದು, ಚೂಪಾದ ಆಯುಧಗಳು ಹಾಗೂ ಸ್ವಯಂಚಾಲಿತ ಬಂದೂಕುಗಳೊಂದಿಗೆ ಅಜನಾಲ ಪೊಲೀಸ್ ಠಾಣೆಗೆ ನುಗ್ಗಿದ್ದರು. ಈ ಘಟನೆಯಲ್ಲಿ ಆರು ಪೊಲೀಸರು ಗಾಯಗೊಂಡಿದ್ದರು.
Punjab Police personnel deployed outside ‘Waris Punjab De’ chief Amritpal Singh's residence in Jallupur Khera village, Amritsar
Amritpal Singh is on the run & a massive manhunt has been launched by Punjab police to nab him. pic.twitter.com/e9LC383hhJ
— ANI (@ANI) March 19, 2023
Punjab | Security enhanced across the state as searches continue to nab Khalistani sympathiser ‘Waris Punjab De’ chief Amritpal Singh who is currently on the run.
Visuals from Jalandhar- Moga Road where checking of vehicles being done by police. pic.twitter.com/DMYHeCOoa6
— ANI (@ANI) March 19, 2023
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.