ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌ ಚುನಾವಣಾ ಕಣಕ್ಕೆ ಸೋನು ಸೂದ್‌ ಸೋದರಿ; ಎಎಪಿ, ಕಾಂಗ್ರೆಸ್‌ ಕಡೆಗೆ ಒಲವು

Last Updated 14 ನವೆಂಬರ್ 2021, 8:27 IST
ಅಕ್ಷರ ಗಾತ್ರ

ಚಂಡೀಗಡ: ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಹಲವು ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಈ ನಡುವೆ ಚುನಾವಣಾ ಕಣಕ್ಕೆ ಇಳಿಯುವ ಸ್ಟಾರ್‌ಗಳ ಬಗೆಗೂ ಚರ್ಚೆ ನಡೆಯುತ್ತಿದ್ದು, ಬಾಲಿವುಡ್‌ ನಟ ಸೋನು ಸೂದ್‌ ಯಾವುದೇ ರಾಜಕೀಯ ಪಕ್ಷ ಸೇರುವುದನ್ನು ಅಲ್ಲಗಳೆದಿದ್ದಾರೆ.

ಸೋನು ಸೂದ್‌ ಅವರ ಸೋದರಿ ಮಾಳವಿಕಾ ಸೂದ್‌ ರಾಜಕೀಯ ಪ್ರವೇಶಿಸುವ ನಿರ್ಧಾರವನ್ನು ಪ್ರಕಟಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ. ಆದರೆ, ಯಾವ ಪಕ್ಷಕ್ಕೆ ಸೇರಲಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಕುಟುಂಬ ಆಸಕ್ತಿ ಹೊಂದಿರುವುದಾಗಿ ಸೋನು ಸೂದ್‌ ಹೇಳಿದ್ದು, ತಾವು ರಾಜಕೀಯ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಪಂಜಾಬ್‌ ಜನತೆಗೆ ಸೇವೆ ಸಲ್ಲಿಸುವ ಇಚ್ಛೆ ಇರುವುದಾಗಿಯೂ ಹೇಳಿದ್ದಾರೆ.

'ಎಲ್ಲಿ ಕಾಲೆಳೆಯುವುದು ಇಲ್ಲವೋ ಹಾಗೂ ಕಾರ್ಯಾಚರಣೆಗೆ ಸ್ವತಂತ್ರವಿದೆಯೋ ಅಂಥ ಯಾವುದೇ ವೇದಿಕೆಗೆ ನಾನು ಸೇರುತ್ತೇನೆ. ಅದು ರಾಜಕೀಯ ವೇದಿಕೆಯೇ ಆಗಿರಬಹುದು ಅಥವಾ ರಾಜಕಿಯೇತರ' ಎಂದು ಸೋನು ಸೂದ್‌ ಅಭಿಪ್ರಾಯ ಪಟ್ಟಿದ್ದಾರೆ.

ಸೋದರಿ ಮಾಳವಿಕಾ ಸೇರುತ್ತಿರುವ ಪಕ್ಷದ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, 'ಮುಖ್ಯವಾದುದು ಪಕ್ಷವಲ್ಲ ನೀತಿ. ನನ್ನ ಸೋದರಿ ಜನರು ಮತ್ತು ಸಮಾಜ ಸೇವೆಗೆ ಶ್ರಮಿಸಲಿದ್ದಾರೆ' ಎಂದಿದ್ದಾರೆ.

ಹಾಗೇ 'ಎಎಪಿ ಮತ್ತು ಕಾಂಗ್ರೆಸ್‌ ಎರಡೂ ಒಳ್ಳೆಯ ಪಕ್ಷಗಳು' ಎಂದು ಹೇಳಿದ್ದಾರೆ.

ಸೋನು ಸೂದ್‌ ಅವರು ದೆಹಲಿಯ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮತ್ತು ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರನ್ನು ಈಗಾಗಲೇ ಭೇಟಿಯಾಗಿದ್ದಾರೆ. ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್ಬಿಂದರ್‌ ಸಿಂಗ್‌ ಬಾದಲ್‌ ಅವರನ್ನೂ ಭೇಟಿಯಾಗುವುದಾಗಿ ತಿಳಿಸಿದ್ದಾರೆ.

ಅವರ ಆಸ್ತಿಯ ಕುರಿತು ಐಟಿ ಇಲಾಖೆ ಪರಿಶೀಲನೆ ನಡೆಸಿದ್ದು, ಅದನ್ನು 'ಪರೀಕ್ಷೆಯ ಕಾಲ' ಎಂದು ಕರೆದಿದ್ದಾರೆ. ಅದರಿಂದ ನಾನು ಜನರಿಗೆ ಮಾಡುವ ಸೇವೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.

ರೈತರಿಗೆ ಬೆಂಬಲ ಸೂಚಿಸಿರುವ ಸೋನು ಸೂದ್‌, 'ನಾನು ರೈತರನ್ನು ಬೆಂಬಲಿಸುತ್ತೇನೆ. ಅವರಿಗೆ ಅವರ ಹಕ್ಕುಗಳನ್ನು ನೀಡಬೇಕು. ಅವರಿಂದಾಗಿ ನಾವು ಹಸಿವು ನೀಗಿಸಿಕೊಳ್ಳುವುದು ಸಾಧ್ಯವಾಗಿದೆ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT