ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಇತಿಹಾಸದಿಂದ ನೆಹರೂ ಹೆಸರಳಿಸುವುದು ಫುಟ್ಬಾಲ್‌ನಿಂದ ರೊನಾಲ್ಡೊರನ್ನು ಕೈಬಿಟ್ಟಂತೆ'

ಇತಿಹಾಸದಿಂದ ನೆಹರೂ ಹೆಸರಳಿಸುವುದು ಫುಟ್ಬಾಲ್‌ನಿಂದ ರೊನಾಲ್ಡೊರನ್ನು ಕೈಬಿಟ್ಟಂತೆ
Last Updated 5 ಸೆಪ್ಟೆಂಬರ್ 2021, 7:30 IST
ಅಕ್ಷರ ಗಾತ್ರ

ಪಣಜಿ: ಭಾರತದ ಇತಿಹಾಸದಿಂದ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಹೆಸರನ್ನು ಅಳಿಸಿಹಾಕುವುದು ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಫುಟ್ಬಾಲ್ ಇತಿಹಾಸದಿಂದ ಅಥವಾ ರೈಟ್ ಸಹೋದರರನ್ನು ವಾಯುಯಾನ ಇತಿಹಾಸದಿಂದ ಕೈಬಿಟ್ಟಂತೆ ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಶನಿವಾರ ಹೇಳಿದ್ದಾರೆ.

ದಕ್ಷಿಣ ಗೋವಾದ ಮಾರ್ಗೋ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಏಕರೂಪಗೊಳಿಸುವ ಪ್ರಯತ್ನಗಳು 'ಭಾರತದ ಅತಿದೊಡ್ಡ ಶತ್ರು' ಎಂದು ಹೇಳಿದರು.

'ಫುಟ್ಬಾಲ್ ಇತಿಹಾಸವನ್ನು ಬರೆದರೆ ಅದರಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಇಲ್ಲದಿದ್ದರೆ? ಮೋಟಾರ್ ಕಾರಿನ ಇತಿಹಾಸ ಬರೆದರೆ, ಹೆನ್ರಿ ಫೋರ್ಡ್ ಇಲ್ಲದಿದ್ದರೆ? ವಿಮಾನದ ಇತಿಹಾಸ ಬರೆಯುವಾಗ ರೈಟ್ ಸಹೋದರರು ಅದರಲ್ಲಿ ಇಲ್ಲದಿದ್ದರೆ? ಏನಾಗುತ್ತದೆ ಎಂಬುದನ್ನು ಊಹಿಸಿ. ಇತಿಹಾಸವನ್ನು ಪುನಃ ಬರೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ನಾವು ಇದರ ವಿರುದ್ಧ ನಿಲ್ಲಬೇಕು ಮತ್ತು ಇದರ ವಿರುದ್ಧ ನಿಲ್ಲುವ ಪಕ್ಷವೆಂದರೆ ಅದು ಕಾಂಗ್ರೆಸ್ ಮಾತ್ರ ಎಂದು ಚಿದಂಬರಂ ಹೇಳಿದರು.

ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಐತಿಹಾಸಿಕ ಸಂಶೋಧನೆಗಾಗಿ ಭಾರತೀಯ ಕೌನ್ಸಿಲ್ ಬಿಡುಗಡೆ ಮಾಡಿದ ಪೋಸ್ಟರ್ ಅನ್ನು ಉಲ್ಲೇಖಿಸಿದ ಅವರು, ಇದರಲ್ಲಿ ನೆಹರು ಕಾಣೆಯಾಗಿದ್ದಾರೆ ಎಂದು ಹೇಳಿದರು.

'ನಾನು ನಿಮಗೆ ಎಚ್ಚರಿಕೆ ನೀಡುತ್ತೇನೆ. ಬಿಜೆಪಿಯವರಿಗೆ ಈ ಪ್ರವೃತ್ತಿಯನ್ನು ಮುಂದುವರಿಸಲು ನೀವು ಅನುಮತಿ ನೀಡಿದರೆ, ಅವರು ಜವಾಹರಲಾಲ್ ನೆಹರು ಅಧ್ಯಾಯಗಳನ್ನು ಇತಿಹಾಸ ಪುಸ್ತಕಗಳಿಂದಲೇ ತೆಗೆದುಹಾಕುತ್ತಾರೆ. ಹೌದು, ಸರ್ದಾರ್ ಪಟೇಲ್ ಇದ್ದಾರೆ ಮತ್ತು ನಾವು ಅದಕ್ಕಾಗಿ ಸಂತೋಷವಾಗಿದ್ದೇವೆ. ಮೌಲಾನಾ ಅಬುಲ್ ಕಲಾಂ ಆಜಾದ್ ಇದ್ದಾರೆ ಅದಕ್ಕೂ ನಾವು ಸಂತೋಷವಾಗಿದ್ದೇವೆ. ಆದರೆ ಜವಾಹರಲಾಲ್ ನೆಹರು ಏಕೆ ಇಲ್ಲ' ಎಂದು ಪ್ರಶ್ನಿಸಿದರು.

2022 ಗೋವಾ ವಿಧಾನಸಭೆ ಚುನಾವಣೆಯ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಹಿರಿಯ ವೀಕ್ಷಕರಾಗಿ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಸದ್ಯ ಮೂರು ದಿನಗಳ ಗೋವಾ ಪ್ರವಾಸದಲ್ಲಿದ್ದಾರೆ.

'ದೇಶದಲ್ಲಿ ಏಕರೂಪದ ಸಂಸ್ಕೃತಿಯನ್ನು ಸೃಷ್ಟಿಸುವ ಪ್ರಯತ್ನಗಳು' ಭಾರತ ಎದುರಿಸುತ್ತಿರುವ ದೊಡ್ಡ ಬೆದರಿಕೆಗಳಲ್ಲಿ ಒಂದು. ಈ ದೇಶದಲ್ಲಿ ಭಾರತವನ್ನು ಏಕರೂಪಗೊಳಿಸಲು ಬಯಸುವ ಶಕ್ತಿಗಳಿವೆ. ಒಂದು ಭಾಷೆ, ಒಂದು ಧರ್ಮ, ಒಂದು ಸಂಸ್ಕೃತಿ, ಒಂದು ಆಹಾರ ಪದ್ಧತಿ. ನಾವಿದನ್ನು ಹೇಗೆ ಒಪ್ಪಿಕೊಳ್ಳಬಹುದು? ನಾವು ಅದನ್ನು ಹೇಗೆ ಸ್ವೀಕರಿಸಬೇಕು. ಯಾಕೆ ಸ್ವೀಕರಿಸಬೇಕು? ಪ್ರತಿಯೊಂದು ರಾಜ್ಯವು ತನ್ನದೇ ಆದ ಭಾಷೆ, ಸಂಸ್ಕೃತಿ, ಜೀವನ ವಿಧಾನ, ಅಭ್ಯಾಸ, ಉಡುಗೆ-ತೊಡುಗೆ, ಕೌಟುಂಬಿಕ ಜೀವನ, ಇತರ ಜನರೊಂದಿಗೆ ಒಟ್ಟಾಗಿ ಬದುಕುವ ರೀತಿ ಇತ್ಯಾದಿಗಳನ್ನು ಹೊಂದಿದೆ ಎಂದು ಹೇಳಿದರು.

'ಭಾರತವು ಒಂದೇ ದೇಶ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಒಂದು ದೇಶವು ಹಲವಾರು ರಾಜ್ಯಗಳು, ಹಲವಾರು ಸಂಸ್ಕೃತಿಗಳು, ವಿಭಿನ್ನ ಜೀವನಶೈಲಿ, ಹಲವು ಭಾಷೆಗಳು, ಅನೇಕ ಧರ್ಮಗಳು, ಹಲವು ಆಹಾರ ಪದ್ಧತಿಗಳಿಂದ ಕೂಡಿದೆ ಮತ್ತು ನಮ್ಮಲ್ಲಿರುವುದರ ಬಗ್ಗೆ ಪ್ರತಿಯೊಬ್ಬರೂ ಹೆಮ್ಮೆ ಪಡುತ್ತಾರೆ. ಆದರೆ, ಏಕರೂಪಗೊಳಿಸುವುದು ಸಂಭವಿಸಬಹುದಾದ ಕೆಟ್ಟ ವಿಷಯವಾಗಿದೆ. ಧರ್ಮ ಮತ್ತು ಆಹಾರ ಪದ್ದತಿಗಳ ಮೇಲೆ ನಿರ್ದಿಷ್ಟ ಸಮುದಾಯಗಳ ವ್ಯಕ್ತಿಗಳನ್ನು ಹತ್ಯೆ ಮಾಡುವುದು ಏಕರೂಪೀಕರಣದ ಫಲವಾಗಿರುತ್ತದೆ' ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT