ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web exclusive | ಪ್ರತಿರೋಧ ‘ದೇಶದ್ರೋಹ’ವೇ...?

ಹೋರಾಟದ ದಿಕ್ಕು ತಪ್ಪಿಸಲು ‘ನುಡಿಗಟ್ಟು’ ಬಳಸುವ ಆಳುವ ವರ್ಗ
Last Updated 6 ಡಿಸೆಂಬರ್ 2020, 8:29 IST
ಅಕ್ಷರ ಗಾತ್ರ

ಎದುರಾಳಿಗಳನ್ನು ಗೆಲ್ಲಲು ಎರಡು ಮಾರ್ಗಗಳಿವೆ. ಒಂದು ನೇರವಾಗಿ ಮಣಿಸುವುದು, ಇನ್ನೊಂದು ಅವರ ವಿರುದ್ಧ ಅಪಪ್ರಚಾರ/ಅವಹೇಳನ ಮಾಡಿ ಹತ್ತಿಕ್ಕುವುದು. ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿದಾಗಿನಿಂದ ತನ್ನ ವಿರುದ್ದ ವ್ಯಕ್ತವಾಗುವ ಪ್ರತಿರೋಧವನ್ನು ಎದುರಿಸಲು ಬಹುತೇಕ ಆಯ್ದುಕೊಂಡಿದ್ದು ಎರಡನೇ ಮಾರ್ಗವನ್ನೇ.

ಕೇಂದ್ರ ಸರ್ಕಾರದ ಮೂರು ಕೃಷಿ ಸುಧಾರಣಾ ಕಾಯ್ದೆಗಳ ವಿರುದ್ಧ ದೇಶದ ರೈತರು ಸಿಡಿದಿದ್ದೆದ್ದಾರೆ. ಅದರಲ್ಲೂ ಪಂಜಾಬ್ ಮತ್ತು ಹರಿಯಾಣದ ರೈತರ ಪ್ರತಿಭಟನಾ ರ‍್ಯಾಲಿ ದೇಶದ ರಾಜಧಾನಿ ದೆಹಲಿಯ ಗಡಿಯಲ್ಲಿ ಠಿಕಾಣಿ ಹೂಡಿದೆ. ರೈತರ ಬೇಡಿಕೆ ಆಲಿಸದ ಸರ್ಕಾರ, ಪ್ರತಿಭಟನೆಯನ್ನು ಎಲ್ಲಾ ರೀತಿಯಿಂದಲೂ ಹತ್ತಿಕ್ಕಲು ಯತ್ನಿಸಿ ವಿಫಲವಾಯಿತು. ಸರ್ಕಾರದ ಈ ನಡೆ, ದೇಶದಾದ್ಯಂತಪ್ರತಿಭಟನೆ ವ್ಯಾಪಿಸಲು ಒಂದು ರೀತಿಯಲ್ಲಿ ಕಾರಣವಾಯಿತು. ಆಗ ಆಳುವ ಪಕ್ಷ ಪ್ರತಿಭಟನೆಯ ವಿರುದ್ಧ ಪ್ರಯೋಗಿಸಿದ್ದು, ಎರಡನೇ ಮಾರ್ಗವನ್ನು.

ಪ್ರತಿಭಟನೆಯಲ್ಲಿ ಸಿಖ್ ಸಮುದಾಯದ ರೈತರೇ ಹೆಚ್ಚಾಗಿದ್ದರಿಂದ ಅವರನ್ನು ‘ಖಲಿಸ್ತಾನಿಗಳು’, ‘ದೇಶದ್ರೋಹಿಗಳು’ ಎಂದು ಬಿಜೆಪಿ ಕರೆಯಿತು. ಅದಕ್ಕೆ ಪೂರಕವಾಗಿ ಹಳೆಯ ವಿಡಿಯೊವನ್ನು ಶೇರ್‌ ಮಾಡಿ, ಇಡೀ ಹೋರಾಟವನ್ನು ದಿಕ್ಕು ತಪ್ಪಿಸಲು ಯತ್ನಿಸಿತು.ಅರವತ್ತರ ಸನಿಹವಿರುವ ವೃದ್ಧರು ಹಾಗೂ ವೃದ್ಧೆಯರೂ ಇರುವ ಈ ಪ್ರತಿಭಟನೆ ಭದ್ರತೆಗೆ ಬೆದರಿಕೆಯಾಗಿ ಸರ್ಕಾರಕ್ಕೆ ಕಾಣಿಸಿತು. ಪ್ರತಿಭಟನೆಯನ್ನು ಕೆಲವರು ಹೈಜಾಕ್ ಮಾಡಿದ್ದಾರೆ ಎಂದು ವಿರೋಧ ಪಕ್ಷಗಳ ವಿರುದ್ಧವೂ ಬೊಬ್ಬೆ ಹಾಕಿತು. ಸಾಮಾಜಿಕ ಜಾಲತಾಣಗಳಲ್ಲೂ ಇದು ಖಲಿಸ್ತಾನಿಗಳ ಪ್ರತಿಭಟನೆ ಎಂಬಂತೆ ಬಿಂಬಿತವಾಯಿತು. ಇದರಲ್ಲಿ ಬಿಜೆಪಿಯ ಐಟಿ ಸೆಲ್ ಕೊಡುಗೆ ಮಹತ್ವದ್ದು. ಇದನ್ನು ಕೆಲ ಜಾಲತಾಣಗಳು ತಮ್ಮ ಫ್ಯಾಕ್ಟ್ ಚೆಕ್‌ಗಳ ಮೂಲಕ ಬಹಿರಂಗಪಡಿಸಿವೆ.

ಕೆಲ ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಾಧ್ಯಮಗಳಲ್ಲಿಯೂ ಅನುರಣಿಸಿದ ರೈತರ ವಿರುದ್ಧದ ‘ಖಲಿಸ್ತಾನಿಗಳು’ ಪದ ಪ್ರಯೋಗ, ಪ್ರತಿಭಟನೆಯನ್ನು ಅಂತರರಾಷ್ಟ್ರೀಯ ಸುದ್ದಿಯಾಗಿಸಿತು. ತಳಬುಡವಿಲ್ಲದೆ ದಿನವಿಡೀ ಇದೇ ಪದದ ಸುತ್ತ ಗಿರಕಿ ಹೊಡೆದ ಕೆಲ ಸುದ್ದಿವಾಹಿನಿಗಳು ತಮ್ಮ ವಿಶ್ವಾಸಾರ್ಹತೆಯನ್ನು ತಾವೇ ಓರೆಗೆ ಹಚ್ಚಿಕೊಂಡರು. ಮಾಧ್ಯಮಗಳ ಈ ನಡೆ ವಿರುದ್ಧ ಭಾರೀ ಅಸಮಾಧಾನ ವ್ಯಕ್ತವಾದ ಬೆನ್ನಲ್ಲೇ, ‘‌ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ‘ಖಲಿಸ್ತಾನಿಗಳು’ ಮತ್ತು ‘ದೇಶದ್ರೋಹಿಗಳು’ ಎಂಬ ಹಣೆಪಟ್ಟಿ ಹಚ್ಚಬಾರದು. ಭಿನ್ನಾಭಿಪ್ರಾಯವನ್ನು ಅವಹೇಳನ ಮಾಡುವಂತಹ ಕಾರ್ಯಗಳಲ್ಲಿ ಮಾಧ್ಯಮಗಳು ತಮ್ಮನ್ನು ತೊಡಗಿಸಿಕೊಳ್ಳಬಾರದು’ ಎಂದು ಭಾರತೀಯ ಸಂಪಾದಕರ ಕೂಟವು ಮಾಧ್ಯಮಗಳಿಗೆ ಸಲಹೆ ನೀಡಿತು.

ತನ್ನ ವಿರುದ್ಧದ ಪ್ರತಿರೋಧವನ್ನು ನ್ಯಾಯಯುತ ಮಾರ್ಗದಲ್ಲಿ ಎದುರಿಸಲಾಗದ ಕೇಂದ್ರ ಸರ್ಕಾರ, ವಾಮಮಾರ್ಗದಿಂದ ಅದನ್ನು ಹತ್ತಿಕ್ಕುತ್ತಾ ಬಂದಿರುವುದು ಹೊಸತೇನಿಲ್ಲ. ಇದಕ್ಕೆ ಅದು ಮೊದಲು ಬಳಸುವುದು ‘ದೇಶದ್ರೋಹ’ ಮತ್ತು ‘ದೇಶದ್ರೋಹಿಗಳು’ ಎಂಬ ನುಡಿಗಟ್ಟನ್ನು. ವ್ಯಕ್ತಿ ಅಥವಾ ಉತ್ಪನ್ನಗಳ ಮೂಲಕ ವಿರೋಧ ವ್ಯಕ್ತವಾದರೆ ‘ನಿಷೇಧ’ ಅಭಿಯಾನ ಶುರುವಾಗುತ್ತದೆ. ಪ್ರತಿಭಟನಾಕಾರರ ಅಥವಾ ಪ್ರತಿಭಟನೆ ವಿರುದ್ಧ ಬಿಜೆಪಿ ಬಳಕೆಯಾಗುವ ಕೆಲ ನುಡಿಗಟ್ಟುಗಳು ಕೆಲವೊಮ್ಮೆ ಶಬ್ದಕೋಶಕ್ಕೆ ಹೊಸ ಸೇರ್ಪಡೆ!

ಬಲಪಂಥೀಯ ವಿಚಾರಧಾರೆ ವಿರೋಧಿಸಿದವರ ಹತ್ಯೆ ಹಾಗೂ ಹೆಚ್ಚತೊಡಗಿದ ಕೋಮು ದ್ವೇಷ ಭಾವನೆ ವಿರುದ್ಧ 2018ರಲ್ಲಿ ಪ್ರಗತಿಪರರು, ಚಿಂತಕರು, ಸಾಹಿತಿಗಳು ಹಾಗೂ ಕಲಾವಿದರು ಬೀದಿಗಿಳಿದಿದ್ದರು. ಆಗ ಬಿಜೆಪಿ ಅವರನ್ನು ‘ನಗರ ನಕ್ಸಲರು’ ಎಂದು ಜರಿದಿತ್ತು. 2019ರಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಪ್ರತಿಭಟಿಸಿದ್ದ ದೆಹಲಿಯ ಜವಾಹರಲಾಲ್ ನೆಹರೂ ಮತ್ತು ಜಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ‘ತುಕ್ಡೆ ತುಕ್ಡೆ ಗ್ಯಾಂಗ್’ ಎಂದು ಕರೆದಿತ್ತು.

ಪ್ರತಿರೋಧ ತೋರುವವರೆಲ್ಲರೂ ‘ದೇಶದ್ರೋಹಿಗಳು’ ಎಂದು ಬಿಂಬಿಸಿ, ಪ್ರತಿಭಟನಾಕಾರರನ್ನು ಈ ದೇಶದ ವಿಲನ್‌ಗಳು ಎಂದು ಬಿಂಬಿಸುವುದು ಬಿಜೆಪಿಯ ತಂತ್ರ. ಶಕ್ತಿಶಾಲಿ ಐಟಿ ಸೆಲ್‌ ಮತ್ತು ತನ್ನನ್ನು ಓಲೈಸುವ ಮಾಧ್ಯಮಗಳಿಂದಾಗಿ ಈ ತಂತ್ರಗಳು ಹೆಚ್ಚು ಫಲ ಕೊಡುತ್ತಾ ಬಂದಿವೆ. ಇತ್ತೀಚೆಗೆ ಈ ತಂತ್ರಕ್ಕೆ ಪ್ರತಿತಂತ್ರ ಹೆಣೆಯುವವರು ಹೆಚ್ಚಾಗಿದ್ದಾರೆ. ಇದರಿಂದಾಗಿ, ತಳಬುಡವಿಲ್ಲದ ಆರೋಪಗಳು ಮತ್ತು ಅವಹೇಳನಗಳಿಂದ ಕೆಲವೊಮ್ಮೆ ಮುಖಭಂಗ ಅನುಭವಿಸಿರುವುದುಂಟು.

ಜನಸಂಘದ ರೂಪಾಂತರವಾದ ಬಿಜೆಪಿಯ ಹೆಜ್ಜೆ ಗುರುತುಗಳಲ್ಲಿ ಹೆಚ್ಚಾಗಿರುವುದು ಹೋರಾಟ. 70ರ ದಶಕದಲ್ಲಿ ಜಯಪ್ರಕಾಶ ನಾರಾಯಣ್ ಕರೆ ಕೊಟ್ಟಿದ್ದ ‘ಸಂಪೂರ್ಣ ಕ್ರಾಂತಿ’ ಮತ್ತು ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಜನಸಂಘ ಸಕ್ರಿಯವಾಗಿಸಿತ್ತು. ನಂತರವೂ, ಅಧಿಕಾರದ ಹಾದಿಗೆ ಪೂರಕವಾಗಿ ಒಂದಲ್ಲ ಒಂದು ರೀತಿಯ ಹೋರಾಟಗಳನ್ನು ಮಾಡುತ್ತಲೇ ಬಂದಿದೆ. 2014ರಲ್ಲಿ ಸ್ವತಂತ್ರವಾಗಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲು, ಆಗ ಉತ್ತುಂಗದಲ್ಲಿದ್ದ ಭ್ರಷ್ಟಾಚಾರ ವಿರೋಧಿ ಹೋರಾಟದ ಕಾಣಿಕೆಯೂ ಹೆಚ್ಚಾಗಿದೆ.

ಹಿಂದೆ ಬಿಜೆಪಿ ನಡೆಸುತ್ತಿದ್ದ ರೈತ ಹಾಗೂ ವಿದ್ಯಾರ್ಥಿ ಹೋರಾಟಗಳು, ಆಗಿನ ಸರ್ಕಾರ ಅಥವಾ ಆಡಳಿತಾರೂಢ ಪಕ್ಷಗಳಿಗೆ ‘ದೇಶದ್ರೋಹ’ವಾಗಿ ಕಾಣಲಿಲ್ಲ. ಹೋರಾಟಗಾರರು ‘ದೇಶದ್ರೋಹಿ’ಗಳು ಎನಿಸಲಿಲ್ಲ. ಕಾಲಚಕ್ರ ಈಗ ತಿರುಗಿದೆ. ಬಿಜೆಪಿ ಅಧಿಕಾರದ ಗದ್ದಗೆ ಏರಿದೆ. ಆದರೆ, ಸರ್ಕಾರದ ನೀತಿ ಹಾಗೂ ನಡೆಗಳ ವಿರುದ್ಧದ ಪ್ರತಿರೋಧ ‘ದೇಶದ್ರೋಹ’ವಾಗಿ, ಹೋರಾಟಗಾರರು ‘ದೇಶದ್ರೋಹಿ’ಗಳಾಗಿ ಕಾಣುತ್ತಿದ್ದಾರೆ. ಇದು ಈ ಕಾಲದ ರಾಜಕೀಯದ ದೊಡ್ಡ ವ್ಯಂಗ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT