ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಮಹಾಸಾಗರ–ಪೆಸಿಫಿಕ್‌ ಸಾಗರ ಪ್ರದೇಶ ಸಮೃದ್ಧವಾಗಿಸಲು ‘ಕ್ವಾಡ್‌’ ಕೂಟ ಸಿದ್ಧ

‘ಕ್ವಾಡ್‌’ ವಿಸ್ತಾರದ ಕಾರ್ಯತಂತ್ರ
Last Updated 15 ಮಾರ್ಚ್ 2021, 2:36 IST
ಅಕ್ಷರ ಗಾತ್ರ

ನವದೆಹಲಿ: ‘ಕ್ವಾಡ್‌’ನ ಐತಿಹಾಸಿಕ ಮೊದಲ ಶೃಂಗ ಸಭೆ ನಡೆದು ಎರಡು ದಿನಗಳ ಬಳಿಕ, ಈ ಕೂಟವು ಇನ್ನಷ್ಟು ವಿಸ್ತಾರವಾಗುವ ಸಾಧ್ಯತೆ ಕಾಣಿಸಿಕೊಂಡಿದೆ. ಹಿಂದೂ ಮಹಾಸಾಗರ–ಪೆಸಿಫಿಕ್‌ ಸಾಗರ ಪ್ರದೇಶವನ್ನು ಮುಕ್ತ, ಸುರಕ್ಷಿತ ಮತ್ತು ಸಮೃದ್ಧವಾಗಿಸುವುದಕ್ಕಾಗಿ ಇತರ ದೇಶಗಳನ್ನು ಜತೆಗೆ ಸೇರಿಸಿಕೊಳ್ಳಲು ಭಾರತ, ಜಪಾನ್‌, ಆಸ್ಟ್ರೇಲಿಯಾ ಮತ್ತು ಅಮೆರಿಕ ಇರುವ ‘ಕ್ವಾಡ್‌’ ಕೂಟವು ಸಿದ್ಧವಾಗಿದೆ.

‘ಕ್ವಾಡ್‌ ಎಂಬುದು ಸಮಾನ ಮನಸ್ಕ ಪಾಲುದಾರರ ಗುಂಪು. ಶಾಂತಿ ಮತ್ತು ಸಮೃದ್ಧಿಯ ಉದ್ದೇಶದ ಸಮಾನ ಮುನ್ನೋಟವನ್ನು ಮುಂದಿಡುವುದು ಈ ಕೂಟದ ಬದ್ಧತೆ. ಈ ಗುರಿಗಳನ್ನು ಇರಿಸಿಕೊಂಡಿರುವ ಎಲ್ಲ ದೇಶಗಳನ್ನು ಸ್ವಾಗತಿಸುತ್ತೇವೆ ಮತ್ತು ಅವರೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದೇವೆ’ ಎಂದು ಕ್ವಾಡ್‌ ದೇಶಗಳ ನಾಯಕರು ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯಲ್ಲಿ ಪ್ರಕಟಿಸಿದ ಲೇಖನದಲ್ಲಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌, ಜಪಾನ್‌ನ ಪ್ರಧಾನಿ ಯೊಶಿಹಿಡೆ ಸುಗಾ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಜಂಟಿಯಾಗಿ ಈ ಲೇಖನ ಬರೆದಿದ್ದಾರೆ.

ನಾಲ್ಕು ದೇಶಗಳ ಅನೌಪಚಾರಿಕ ಕೂಟದಂತೆ ಇದ್ದ ‘ಕ್ವಾಡ್‌’, ಈಗ ಪ್ರಜಾಸತ್ತಾತ್ಮಕ ದೇಶಗಳ ಮುಖ್ಯಸ್ಥರ ಸಮಿತಿಯ ಮಟ್ಟಕ್ಕೆ ಏರಿದೆ. ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್‌ನಲ್ಲಿ ಎದುರಾಗುವ ಭದ್ರತಾ ಬೆದರಿಕೆಯನ್ನು ಹಿಮ್ಮೆಟ್ಟಿಸಲು ಸಜ್ಜಾಗಿದ್ದೇವೆ ಎಂಬ ಸಂದೇಶವನ್ನು ಚೀನಾಕ್ಕೆ ಸೂಕ್ಷ್ಮವಾಗಿ ಮತ್ತು ದೃಢವಾಗಿ ರವಾನಿಸಲಾಗಿದೆ.

ಹಿಂದೂ ಮಹಾಸಾಗರ–ಪೆಸಿಫಿಕ್‌ ಪ್ರದೇಶದಲ್ಲಿ ಮಾತ್ರವಲ್ಲದೆ ಜಗತ್ತಿನ ಇತರ ಭಾಗಗಳನ್ನೂ ಈ ಕೂಟವು ಒಳಗೊಳ್ಳಲಿದೆ ಎಂಬ ಸಂದೇಶವು ಲೇಖನದಲ್ಲಿ ಸ್ಪಷ್ಟವಾಗಿದೆ.

ಎಲ್ಲರಿಗೂ ಲಸಿಕೆ

ಕೋವಿಡ್‌ ತಡೆ ಲಸಿಕೆ ರಾಜತಾಂತ್ರಿಕತೆಯೂ ಲೇಖನದಲ್ಲಿ ಉಲ್ಲೇಖವಾಗಿದೆ. ಹಿಂದೂ ಮಹಾಸಾಗರ–ಪೆಸಿಫಿಕ್‌ ಪ್ರದೇಶದ ಎಲ್ಲ ದೇಶಗಳಿಗೆ ಲಸಿಕೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಕ್ವಾಡ್‌ ನಾಯಕರ ವರ್ಚುವಲ್‌ ಸಭೆಯಲ್ಲಿ ಘೋಷಿಸಲಾಗಿತ್ತು.

‘ಭಾರತದಲ್ಲಿ ಸುರಕ್ಷಿತವಾದ, ಪರಿಣಾಮಕಾರಿಯಾದ ಮತ್ತು ಎಲ್ಲರಿಗೂ ಲಭ್ಯವಾಗುವಂತಹ ಲಸಿಕೆಗಳನ್ನು ತಯಾರಿಸಲಾಗುವುದು. ಉತ್ಪಾದನೆಯನ್ನು ಹೆಚ್ಚಿಸಲಾಗುವುದು. 2022ರೊಳಗೆ ಈ ಪ್ರದೇಶದ ಎಲ್ಲರಿಗೂ ಲಸಿಕೆ ದೊರೆಯುವಂತೆ ಮಾಡಲು ಎಲ್ಲ ಹಂತಗಳಲ್ಲಿಯೂ ಪಾಲುದಾರಿಕೆ ಇರಲಿದೆ’ ಎಂದು ಲೇಖನದಲ್ಲಿ ಭರವಸೆ ನೀಡಲಾಗಿದೆ.

ಪರಿಸರಕ್ಕೆ ಒತ್ತು

ಹವಾಮಾನ ಬದಲಾವಣೆಯ ವಿಚಾರವನ್ನೂ ಲೇಖನದಲ್ಲಿ ಚರ್ಚಿಸಲಾಗಿದೆ. ಹಿಂದೂ ಮಹಾಸಾಗರ–ಪೆಸಿಫಿಕ್‌ ಪ್ರದೇಶದಲ್ಲಿಯೂ ಹವಾಮಾನ ಬದಲಾವಣೆ ತಡೆಯುವುದು ಆದ್ಯತೆಯಾಗಬೇಕಿದೆ. ಪ್ಯಾರಿಸ್‌ ಒಪ್ಪಂದವನ್ನು ಇನ್ನಷ್ಟು ಬಲಪಡಿಸಬೇಕಿದೆ. ಎಲ್ಲ ದೇಶಗಳೂ ಹವಾಮಾನ ಬದಲಾವಣೆ ತಡೆ ಯತ್ನಗಳನ್ನು ಹೆಚ್ಚಿಸಬೇಕಿದೆ ಎಂದು ಲೇಖನದಲ್ಲಿ ಕರೆ ಕೊಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT