ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ, ಕಾಯ್ದೆಗೆ ಪೂರಕವಾಗಿ ಬಡ್ತಿ ಮೀಸಲಾತಿ: ‘ಸುಪ್ರೀಂ’ಗೆ ಕೇಂದ್ರದ ಮಾಹಿತಿ

Last Updated 1 ಏಪ್ರಿಲ್ 2022, 12:53 IST
ಅಕ್ಷರ ಗಾತ್ರ

ನವದೆಹಲಿ: ಪರಿಶಿಷ್ಟ ಜಾತಿ, ಪಂಗಡದ ಉದ್ಯೋಗಿಗಳಿಗೆ ಬಡ್ತಿಯಲ್ಲಿ ಮೀಸಲಾತಿ ನೀತಿ ರದ್ದುಪಡಿಸುವುದು ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು, ಇದರ ವಿರುದ್ಧ ಹಲವು ಮೇಲ್ಮನವಿಗಳೂ ದಾಖಲಾಗಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರರಾವ್ ಮತ್ತು ಬಿ.ಆರ್.ಗವಾಯಿ ಅವರಿದ್ದ ಪೀಠಕ್ಕೆ ಸರ್ಕಾರ ಈ ಪ್ರಮಾಣಪತ್ರ ಸಲ್ಲಿಸಿದೆ. ಬಡ್ತಿ ನೀತಿಯು ಸಂವಿಧಾನ ಮತ್ತು ಕೋರ್ಟ್ ರೂಪಿಸಿದ ಕಾಯ್ದೆಗಳ ಪರಿಮಿತಿಯಲ್ಲಿಯೇ ಇದೆ ಎಂದು ಸಮರ್ಥಿಸಿಕೊಂಡಿದೆ.

ಬಡ್ತಿಯಲ್ಲಿ ಮೀಸಲಾತಿಗೆ ಅವಕಾಶ ಇಲ್ಲವಾದರೆ, ಪರಿಶಿಷ್ಟ ಜಾತಿ, ಪಂಗಡದ ಉದ್ಯೋಗಿಗಳಿಗೆ ನೀಡಿರುವ ಬಡ್ತಿ ಸೌಲಭ್ಯಗಳನ್ನು ಹಿಂಪಡೆಯಬೇಕಾಗುತ್ತದೆ. ಹಿಂದಿನ ಹುದ್ದೆಗೆ ವಾಪಸಾತಿ, ವೇತನ ಅಥವಾ ಪಿಂಚಣಿಯ ಮರು ಪರಿಷ್ಕರಣೆ, ನಿವೃತ್ತಿಯಾಗಿರುವ ಪ್ರಕರಣಗಳಲ್ಲಿ ಉದ್ಯೋಗಿಗಳಿಗೆ ಹೆಚ್ಚುವರಿಯಾಗಿ ಪಾವತಿಯಾದ ಮೊತ್ತದ ವಸೂಲಾತಿ ಕ್ರಮಗಳು ಆಗಬೇಕಿದೆ ಎಂದು ತಿಳಿಸಿದೆ.

ಬಡ್ತಿ ಮೀಸಲಾತಿ ನೀತಿಯನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರ, ಸರ್ಕಾರಿ ನೌಕರಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪ್ರಾತಿನಿಧ್ಯ ಸಮರ್ಪಕವಾಗಿಲ್ಲ. ಬಡ್ತಿ ಮೀಸಲಾತಿಯಿಂದ ಆಡಳಿತದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದೆ.

ಆಡಳಿತದ ದಕ್ಷತೆಯನ್ನು ಉದ್ಯೋಗಿಳ ವಾರ್ಷಿಕ ಸಾಧನೆಯ ಮೌಲ್ಯಮಾಪನ ವರದಿ ಆಧರಿಸಿ ನಿರ್ಧರಿಸಲಾಗುತ್ತದೆ. ಉದ್ಯೋಗಿಯ ಸೇವೆ, ವೈಯಕ್ತಿಕ ಕೊಡುಗೆ, ಕಾರ್ಯದಕ್ಷತೆಯನ್ನು ಈ ವರದಿಯು ಒಳಗೊಂಡಿರುತ್ತದೆ ಎಂದು ಸರ್ಕಾರ ತಿಳಿಸಿದೆ.

ಸುಪ್ರೀಂ ಕೋರ್ಟ್‌ ಜ.28ರಂದು ಪರಿಶಿಷ್ಟ ಜಾತಿ, ಪಂಗಡದ ಉದ್ಯೋಗಿಗಳಿಗೆ ಬಡ್ತಿಯಲ್ಲಿ ಮೀಸಲಾತಿ ಕುರಿತು ‘ನಿರ್ದಿಷ್ಟ ಮಾನದಂಡ ನಿಗದಿಪಡಿಸಲು’ ನಿರಾಕರಿಸಿತ್ತು. ಸೂಕ್ತ ಪ್ರಾತಿನಿಧ್ಯ ಇರುವಂತೆ ನೋಡಿಕೊಳ್ಳುವುದು ಸರ್ಕಾರದ ವಿವೇಚನೆಗೆ ಸೇರಿದೆ ಎಂದು ಹೇಳಿತ್ತು.

ಸಂವಿಧಾನದ ಅನುಸಾರ ಇದಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ನಿರ್ದಿಷ್ಟವಾಗಿ ಸೂಚನೆಯನ್ನು ನೀಡುವುದು ನ್ಯಾಯಸಮ್ಮತವೂ ಅಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು.

ಕೇಂದ್ರ ಸರ್ಕಾರಿ ನೌಕರರುಯಾರು, ಎಷ್ಟು?
ಕೇಂದ್ರ ಸರ್ಕಾರದ ವಿವಿಧ 75 ಸಚಿವಾಲಯಗಳು, ಇಲಾಖೆಗಳ ವ್ಯಾಪ್ತಿಯಲ್ಲಿನ ಒಟ್ಟು ಉದ್ಯೋಗಿಗಳ ಸಂಖ್ಯೆ 27,55,430. ಇವರಲ್ಲಿ ಪರಿಶಿಷ್ಟ ಜಾತಿಯ 4,79,301, ಪರಿಶಿಷ್ಟ ಪಂಗಡದ 2,14,738, ಒಬಿಸಿಯ 4,57,148 ನೌಕರರು ಇದ್ದಾರೆ.

ಸುಪ್ರೀಂ ಕೋರ್ಟ್‌ನ ನ್ಯಾಯಪೀಠಕ್ಕೆ ಶುಕ್ರವಾರ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಸರ್ಕಾರ ಈ ಮಾಹಿತಿಯನ್ನು ಒದಗಿಸಿದೆ.

ಸರ್ಕಾರಿ ಉದ್ಯೋಗದಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ಒದಗಿಸುವ ಕುರಿತ ನಿಲುವು ಮತ್ತು ಅಂಕಿ ಅಂಶ ಒಳಗೊಂಡ ಸಮಕಾಲೀನ ವರದಿ ಸಲ್ಲಿಸಬೇಕು ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT