ಶನಿವಾರ, ಅಕ್ಟೋಬರ್ 16, 2021
29 °C

ಬಡ್ತಿಯಲ್ಲಿ ಮೀಸಲು: ಕೇಂದ್ರದಿಂದ ವಿವರ ಕೋರಿದ ’ಸುಪ್ರೀಂ‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪರಿಶಿಷ್ಟ ಜಾತಿ, ಪಂಗಡದ ನೌಕರರಿಗೆ ಬಡ್ತಿಯಲ್ಲಿ ಮೀಸಲು ನೀಡುವುದಕ್ಕೆ ಸಂಬಂಧಿಸಿದಂತೆ 2006ರಲ್ಲಿ ನಾಗರಾಜ್‌ ಪ್ರಕರಣದ ಸಂಬಂಧ ಸಂವಿಧಾನ ಪೀಠ ನೀಡಿದ್ದ ಆದೇಶಕ್ಕೆ ಸಂಬಂಧಿಸಿ ಕ್ರಮ ಕೈಗೊಂಡಿರುವುದರ ವಿವರ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿತು.

ಈ ಸಂಬಂಧಿತ ವಿವಿಧ ಅರ್ಜಿಗಳ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಎಲ್.ನಾಗೇಶ್ವರರಾವ್‌ ನೇತೃತ್ವದ ಪೀಠವು, ಮೀಸಲಾತಿ ಪ್ರಮಾಣವು ಅನುಪಾತಕ್ಕೆ ಅನುಗುಣವಾಗಿರಬೇಕೋ ಅಥವಾ ನಾಗರಾಜ್‌ ಪ್ರಕರಣದಲ್ಲಿ ಉಲ್ಲೇಖವಾದಂತೆ ಪ್ರಾತಿನಿಧ್ಯಕ್ಕೆ ಅನುಗುಣವಾಗಿ ಇರಬೇಕೋ ಬಳಿಕ ನಿರ್ಧರಿಸಲಾಗುವುದು ಎಂದು ತಿಳಿಸಿತು.

‘ಪ್ರಾತಿನಿಧ್ಯದ ಸ್ವರೂಪವನ್ನು ತಿಳಿಯಲು ಕೇಂದ್ರ ಸರ್ಕಾರ ಏನು ಕ್ರಮವಹಿಸಿದೆ ಎಂಬುದನ್ನು ತಿಳಿಯಲು ನಾವು ಬಯಸುತ್ತೇವೆ. ಮೀಸಲಾತಿ ಪ್ರಮಾಣವನ್ನು ನಿಗದಿಪಡಿಸಲು ಜನಸಂಖ್ಯೆಯನ್ನೇ ಆಧರಿಸುವುದಾದರೆ ಅದು ನ್ಯೂನತೆಯಾಗಲಿದೆ. ಸಮರ್ಪಕತೆ ಅರ್ಥ ಏನೆಂಬುದರ ಬಗ್ಗೆ ಕೇಂದ್ರ ಚಿಂತನೆ ನಡೆಸಬೇಕಿತ್ತು’ ಎಂದು ಹೇಳಿತು.

ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಬಲಬೀರ್‌ ಸಿಂಗ್‌ ಅವರು, ‘ಅದೇ  ಕಾರಣಕ್ಕಾಗಿ ಅನುಪಾತ ಕುರಿತ ಚಿಂತನೆಯನ್ನು ಅಳವಡಿಸಿಲ್ಲ. ನಾಗರಾಜ್‌ ಪ್ರಕರಣದ ತೀರ್ಪಿನಲ್ಲಿ ಸಮರ್ಪಕ ಪ್ರಾತಿನಿಧ್ಯದ ಉಲ್ಲೇಖವಿದೆ ಎಂದು ತಿಳಿಸಿದರು. ನಾಗರಾಜ್‌ ಪ್ರಕರಣದ ತೀರ್ಪು ಪರಿಗಣಿಸುವುದಾದರೆ, ಕೇಂದ್ರ ಸರ್ಕಾರ ಆಯಾ ಹಂತದಲ್ಲಿ ಅಗತ್ಯ ಮೀಸಲಾತಿ ನೀಡಬೇಕಾದ ಬಾಧ್ಯತೆಗೆ ಒಳಪಟ್ಟಿದೆ’ ಎಂದು ಹೇಳಿದರು.

‘ಆಯಾ ಹುದ್ದೆಗಳಿಗೆ ಅನುಸಾರವಾಗಿ ರೋಸ್ಟರ್‌ ಪದ್ಧತಿಯನ್ನು ನಿಗದಿಪಡಿಸಬೇಕು. ಅದೇ ಮಾನದಂಡವಾಗಬೇಕು. ದುರದೃಷ್ಟವಶಾತ್, ನೀವು ಯಾವುದೇ ಹಂತದಲ್ಲಿ ಅಂಕಿ ಅಂಶಗಳನ್ನು ಒದಗಿಸಿಲ್ಲ. ಮೀಸಲಾತಿ ಮಂದುವರಿಸಲು ನೀವು ನೀಡುತ್ತಿರುವ ಸಮರ್ಥನೆಯಾದರೂ ಏನು?’ ಎಂದು ಪೀಠವು ಪ್ರಶ್ನಿಸಿತು.

ಬಡ್ತಿಯಲ್ಲಿ ಮೀಸಲಾತಿಯನ್ನು ಮುಂದುವರಿಸುವುದಕ್ಕೆ ಸಮರ್ಥನೆಯಾಗಿ ಪೂರಕವಾದ ಅಂಕಿ ಅಂಶಗಳನ್ನು ಒದಗಿಸಲಾಗುವುದು ಎಂದು ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಅವರು ಪೀಠಕ್ಕೆ ತಿಳಿಸಿದರು.

ಕೆಲ ಅರ್ಜಿದಾರರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲರಾದ ರಾಜೀವ್‌ ಧವನ್‌ ಹಾಗೂ ವಕೀಲ ಕುಮಾರ್‌ ಪರಿಮಳ್ ಅವರು, ‘ಸಮರ್ಪಕ ಪ್ರಾತಿನಿಧ್ಯ ನೀಡುವುದರ ಉದ್ದೇಶವು ಈಡೇರಿದ ನಂತರವೂ ಅನಿರ್ದಿಷ್ಟಾವಧಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವುದನ್ನು ಮುಂದುವರಿಸಲಾಗದು ಎಂದು ವಾದಿಸಿದರು.

ಈ ಕುರಿತು ರಾಜ್ಯವಾರು ಪ್ರಕರಣಗಳನ್ನು ಪ್ರತ್ಯೇಕವಾಗಿ ನಂತರ ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದು ಪೀಠವು ತಿಳಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು