ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಅಮೇಥಿಯಲ್ಲಿ ಸೋಲಿಸಿದಾಗಿನಿಂದಲೂ ರಾಹುಲ್ ಓಡುತ್ತಿದ್ದಾರೆ: ಇರಾನಿ ವ್ಯಂಗ್ಯ

Last Updated 8 ನವೆಂಬರ್ 2022, 4:22 IST
ಅಕ್ಷರ ಗಾತ್ರ

ಶಿಮ್ಲಾ (ಹಿಮಾಚಲ ಪ್ರದೇಶ):ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷ ದೇಶದಾದ್ಯಂತ ನಡೆಸುತ್ತಿರುವ 'ಭಾರತ್‌ ಜೋಡೊ ಯಾತ್ರೆ'ಯ ಬಗ್ಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಿಡಿಕಾರಿದ್ದಾರೆ. ರಾಹುಲ್ ಗಾಂಧಿ ಅವರು ಅಮೇಥಿ ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದಾಗಿನಿಂದಲೂ ದೇಶದಾದ್ಯಂತ ಓಡುತ್ತಲೇ ಇದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ರಾಹುಲ್‌ ಗಾಂಧಿ ಅವರು ತಮ್ಮ ಭದ್ರಕೋಟೆಯಾದ ಅಮೇಥಿಯಲ್ಲಿ ನಡೆದ 2019ರ ಲೋಕಸಭೆ ಚುನಾವಣೆಯಲ್ಲಿ ಇರಾನಿ ಎದುರು ಪರಾಭವಗೊಂಡಿದ್ದರು.

ಇರಾನಿ ಅವರುಹಿಮಾಚಲ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ರೇಣುಕಾಜಿ ವಿಧಾನಸಭೆ ಕ್ಷೇತ್ರದಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಸೋಮವಾರ ಮಾತನಾಡಿದ್ದಾರೆ.

ರಾಹುಲ್‌ ಗಾಂಧಿ ನಡೆಸುತ್ತಿರುವ ಭಾರತ್‌ ಜೋಡೊ ಯಾತ್ರೆ ಕುರಿತು ಹೇಳಿಕೆ ನೀಡಿರುವ ಅವರು, 'ರಾಹುಲ್ ಗಾಂಧಿ ಹೋದ ಕಡೆಯೆಲ್ಲಾ ಪರಿಸ್ಥಿತಿ ಏನಾಗಿದೆ? ಅಲ್ಲೆಲ್ಲ ಕಾಂಗ್ರೆಸ್‌ ಸೋಲುತ್ತಲೇ ಬರುತ್ತಿದೆ' ಎಂದಿದ್ದಾರೆ.

ಯಾತ್ರೆಯಲ್ಲಿ ರಾಹುಲ್‌ ಅವರೊಂದಿಗೆ ಭಾಗಿಯಾದವರ ವಿರುದ್ಧವೂ ಗುಡುಗಿದ್ದಾರೆ.

ಭಾರತದಕೊಳಕುನೆಲದ ಮೇಲೆ ಕಾಲಿಡಬೇಡಿ ಎಂದುಕಾಂಗ್ರೆಸ್‌ ನಾಯಕರ ಸಮ್ಮುಖದಲ್ಲೇ ಕರೆ ನೀಡಿದ್ದ ವ್ಯಕ್ತಿಯೊಂದಿಗೆ ರಾಹುಲ್‌ ತಮಿಳುನಾಡಿನಲ್ಲಿ ಯಾತ್ರೆ ನಡೆಸಿದ್ದಾರೆ. ಗೋ ಹತ್ಯೆ ಮಾಡಿದವರೊಂದಿಗೆ ಕೇರಳದಲ್ಲಿ ಯಾತ್ರೆ ಕೈಗೊಂಡಿದ್ದಾರೆ. ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವ ನಿರ್ಣಯದೊಂದಿಗೆ ಕಾಂಗ್ರೆಸ್ಸಿಗರು ಯಾತ್ರೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

'ನಿಮ್ಮ ನಾಯಕರು ಭಾರತವನ್ನು ವಿಭಜಿಸಲು ಬಯಸುವವರನ್ನು ಬೆಂಬಲಿಸಿದಾಗ ನಿಮ್ಮ ರಕ್ತ ಕುದಿಯುವುದಿಲ್ಲವೇ?, ನಿಮ್ಮ ನಾಯಕರು ಗೋ ಹತ್ಯೆ ಮಾಡುವವರ ಬೆನ್ನು ತಟ್ಟಿದಾಗ ನಿಮ್ಮ ರಕ್ತ ಕುದಿಯುವುದಿಲ್ಲವೇ?' ಎಂದು ಕಾಂಗ್ರೆಸ್‌ ನಾಯಕರನ್ನು ಉದ್ದೇಶಿಸಿ ಕೇಳಿದ್ದಾರೆ.

68 ಸದಸ್ಯ ಬಲದ ಹಿಮಾಚಲ ಪ್ರದೇಶ ವಿಧಾನಸಭೆಗೆ ನವೆಂಬರ್ 12ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 8ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT