ಮಂಗಳವಾರ, ಜನವರಿ 25, 2022
24 °C

ಪ್ರತಿಭಟನೆ ವೇಳೆ ಮೃತಪಟ್ಟ ರೈತರ ಕುಟುಂಬಕ್ಕೆ ಪರಿಹಾರ ಒದಗಿಸಿ: ರಾಹುಲ್ ಗಾಂಧಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಗಡಿಯಲ್ಲಿ ಮೂರು ಕೃಷಿ ಕಾಯ್ದೆಗಳ ವಿರುದ್ಧ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಸಾವಿಗೀಡಾದ ರೈತರ ಕುಟುಂಬಗಳಿಗೆ ಪರಿಹಾರ ಮತ್ತು ಉದ್ಯೋಗ ಕಲ್ಪಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಲೋಕಸಭೆಯ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಪ್ರತಿಭಟನೆ ವೇಳೆ ಮೃತಪಟ್ಟ ರೈತರ ವಿವರಗಳನ್ನೊಳಗೊಂಡ ಮಾಹಿತಿ ಕಲೆಹಾಕುವಲ್ಲಿ ವಿಫಲವಾದ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ರೈತರ ಕುಟುಂಬಗಳಿಗೆ ಪಂಜಾಬ್ ಮತ್ತು ಹರಿಯಾಣದಲ್ಲಿ ಉದ್ಯೋಗ ಮತ್ತು ಪರಿಹಾರ ನೀಡಿರುವ ಪಟ್ಟಿಯನ್ನು ಮುಂದಿಟ್ಟರು.

ಈ ವಿಚಾರದ ಕುರಿತು ಕೇಂದ್ರ ಸರ್ಕಾರ ಹೇಳಿಕೆ ನೀಡಬೇಕು ಎಂದು ಆಗ್ರಹಿಸಿ ಎನ್‌ಸಿಪಿ ಮತ್ತು ಡಿಎಂಕೆ ನಾಯಕರೊಂದಿಗೆ ಕಾಂಗ್ರೆಸ್ ಸದಸ್ಯರು ಸದನದಿಂದ ಹೊರನಡೆದರು. ಈ ವೇಳೆ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

''ಪ್ರತಿಭಟನೆಯ ವೇಳೆ ಸುಮಾರು 700 ರೈತರು ಸಾವಿಗೀಡಾಗಿದ್ದಾರೆ'. ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ರೈತರ ಕ್ಷಮೆ ಕೋರಿದ್ದಾರೆ ಮತ್ತು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ. 'ಪ್ರತಿಭಟನೆ ವೇಳೆ ಎಷ್ಟು ಜನ ರೈತರು ಸಾವಿಗೀಡಾಗಿದ್ದಾರೆ ಎಂದು ನವೆಂಬರ್ 30ರಂದು ಕೃಷಿ ಸಚಿವರನ್ನು ಕೇಳಲಾಗಿತ್ತು. ಆದರೆ, ಅವರು ನನ್ನ ಬಳಿ ಮಾಹಿತಿಯಿಲ್ಲ ಎಂದು ಹೇಳಿದ್ದರು'' ಎಂದು ಕಾಂಗ್ರೆಸ್ ಹೇಳಿದೆ.

'ಪಂಜಾಬ್ ಸರ್ಕಾರವು 400ಕ್ಕೂ ಅಧಿಕ ರೈತರಿಗೆ ತಲಾ ಐದು ಲಕ್ಷ ಪರಿಹಾರ ನೀಡಿರುವ ಮಾಹಿತಿಯು ನಮಗೆ ಲಭ್ಯವಾಗಿದೆ. ಈ ಪೈಕಿ 152 ಜನರಿಗೆ ಉದ್ಯೋಗ ನೀಡಲಾಗಿದೆ. ಹರಿಯಾಣದಲ್ಲಿಯೂ 70ಕ್ಕೂ ಅಧಿಕ ರೈತರಿಗೆ ಪರಿಹಾರ ನೀಡಿರುವ ಪಟ್ಟಿ ನನ್ನ ಬಳಿಯಿದೆ' ಎಂದು ರಾಹುಲ್ ಗಾಂಧಿ ತಿಳಿಸಿದರು.

ದಾಖಲೆಗಳನ್ನು ಮುಂದಿಟ್ಟುಕೊಂಡು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, ಪ್ರತಿಭಟನೆ ವೇಳೆ ರೈತರು ಮೃತಪಟ್ಟಿಲ್ಲ ಅಥವಾ ಆ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಪ್ರತಿಭಟನೆ ವೇಳೆ ಮೃತಪಟ್ಟ ರೈತರ ವಿವರ ಇಲ್ಲಿದೆ. ರೈತರಿಗೆ ಅವರ ಹಕ್ಕುಗಳನ್ನು ನೀಡಬೇಕು. ಮೃತ ರೈತರ ಕುಟುಂಬಗಳಿಗೆ ಪರಿಹಾರ ಮತ್ತು ಉದ್ಯೋಗವನ್ನು ನೀಡಬೇಕು' ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು