ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ರೈತರಿಗೆ ಕೃಷಿ ಕಾಯ್ದೆ ಅರ್ಥವಾದರೆ ದೇಶವ್ಯಾಪಿ ಬೆಂಕಿ: ರಾಹುಲ್ ಗಾಂಧಿ

Last Updated 28 ಜನವರಿ 2021, 7:21 IST
ಅಕ್ಷರ ಗಾತ್ರ

ತಿರುವನಂತಪುರಂ: ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಗಳ ಬಗ್ಗೆ ಹೆಚ್ಚಿನ ರೈತರು ಅರಿತುಕೊಂಡರೆ ದೇಶವ್ಯಾಪಿ ಬೆಂಕಿ ಹೊತ್ತಿಕೊಳ್ಳಲಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಕೇರಳದ ವಯನಾಡಿನಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಗುರುವಾರ ಮಾತನಾಡಿರುವ ಅವರು, 'ಕೇಂದ್ರದ ಮೂರು ಕೃಷಿ ಕಾಯ್ದೆಗಳ ಬಗೆಗಿನ ವಿವರಗಳು ಹೆಚ್ಚಿನ ರೈತರಿಗೆ ಅರ್ಥವಾಗುತ್ತಿಲ್ಲ. ಒಂದು ವೇಳೆ ಅವರಿಗೆ ಅರ್ಥವಾದರೆ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ಆರಂಭಗೊಳ್ಳುತ್ತವೆ. ದೇಶದಾದ್ಯಂತ ಬೆಂಕಿ ಹೊತ್ತಿಕೊಳ್ಳಲಿದೆ' ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

'ಕೆಲ ವರ್ಷಗಳ ಹಿಂದೆ ರೈತರ ಮೇಲೆ ದಾಳಿ ನಡೆದಿರುವುದನ್ನು ನಾನು ಗಮನಿಸಿದೆ. ಅವರಿಗೆ ಸಂಬಂಧಿಸಿದ ಭೂಮಿಯನ್ನು ವಶಪಡಿಸಿಕೊಳ್ಳುವ ಹುನ್ನಾರ ನಡೆದಿತ್ತು. ಅದೊಂದು ದೊಡ್ಡ ಸಮಸ್ಯೆ ಎಂದು ನಾನು ಅರಿತುಕೊಂಡೆ. ಆ ವಿಚಾರವಾಗಿ ನಾನು ಕಾಂಗ್ರೆಸ್ ಪಕ್ಷದೊಳಗೆ ಚರ್ಚೆಗಳನ್ನು ಪ್ರಾರಂಭಿಸಿದೆ. ಅದರ ಫಲಿತಾಂಶವೇ ಹೊಸ ಭೂಸ್ವಾಧೀನ ಮಸೂದೆ' ಎಂದು ರಾಹುಲ್‌ ತಿಳಿಸಿದರು.

'ಹಳೆಯ ಬ್ರಿಟಿಷ್‌ ಕಾಯ್ದೆಯನ್ನು ನಾವು ಕಿತ್ತುಹಾಕಿದೆವು. ನಮ್ಮ ರೈತರಿಗೆ ಪರಿಹಾರ ಮತ್ತು ರಕ್ಷಣೆಯನ್ನು ಖಾತರಿಪಡಿಸುವ ಹೊಸ ಕಾಯ್ದೆಯನ್ನು ಜಾರಿಗೆ ತಂದೆವು. ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಈ ಕಾಯ್ದೆಯನ್ನು ನಾಶಮಾಡಲು ಪ್ರಯತ್ನಿಸಿದರು. ನಾವು ಈ ಬಗ್ಗೆ ಸಂಸತ್ತಿನಲ್ಲಿ ಹೋರಾಟ ನಡೆಸಿದ್ದೇವೆ' ಎಂದು ಅವರು ತಿಳಿಸಿದರು.

'ದೇಶದ ಇಂದಿನ ಪರಿಸ್ಥಿತಿಯ ಬಗ್ಗೆ ಎಲ್ಲರಿಗೂ ತಿಳಿಯುತ್ತಿದೆ. ಏನು ನಡೆಯುತ್ತಿದೆ ಎಂಬುದನ್ನು ಎಲ್ಲರೂ ಸ್ಪಷ್ಟವಾಗಿ ಗಮನಿಸುತ್ತಿದ್ದಾರೆ. ಕೇವಲ ಇಬ್ಬರಿಂದ ಮೂವರು ಉದ್ಯಮಿಗಳ ಹಿತ ಕಾಪಾಡುವುದಕ್ಕೋಸ್ಕರ ಪ್ರಧಾನಿ ಮೋದಿ ದೇಶವನ್ನು ನಡೆಸುತ್ತಿದ್ದಾರೆ' ಎಂದು ರಾಹುಲ್‌ ಟೀಕಾಪ್ರಹಾರ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT