ಶುಕ್ರವಾರ, ಸೆಪ್ಟೆಂಬರ್ 24, 2021
26 °C

ರಾಹುಲ್ ಭಾರತದ ‘ರಾಜಕೀಯ ಕೋಗಿಲೆ’: ಬಿಜೆಪಿ ಬಣ್ಣನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ‘ಭಾರತದ ರಾಜಕಾರಣದ ರಾಜಕೀಯ ಕೋಗಿಲೆ’ ಎಂದು ಬಿಜೆಪಿ ಬಣ್ಣಿಸಿದೆ.

ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ‘ರಾಹುಲ್ ತಳಮಟ್ಟದಲ್ಲಿ ಕೆಲಸ ಮಾಡುವುದಿಲ್ಲ. ಅವರು ತಮ್ಮ ರಾಜಕೀಯ ಕಾರ್ಯಸೂಚಿಗಾಗಿ ಮತ್ತೊಬ್ಬರ ಹೆಗಲನ್ನು ಬಳಸುತ್ತಾರೆ. ಉತ್ತರಪ್ರದೇಶದಲ್ಲಿನ ರೈತರ ಮಹಾಪಂಚಾಯತ್ ಅನ್ನು ಉಲ್ಲೇಖಿಸುವಾಗ ರಾಹುಲ್ ಹಳೆಯ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ಕ್ರಮವು ಗೊಂದಲ ಮತ್ತು ಸುಳ್ಳುಗಳನ್ನು ಹರಡುವ ಅವರ ರಾಜಕಾರಣದ ಕ್ರಮವಾಗಿದೆ’ ಎಂದು ಆರೋಪಿಸಿದ್ದಾರೆ.

‘ಹೇಗೆ ಕೋಗಿಲೆ ತನ್ನ ಸ್ವಂತ ಗೂಡು ಕಟ್ಟಿಕೊಳ್ಳದೇ ಮತ್ತೊಬ್ಬರ ಗೂಡನ್ನು ಆಶ್ರಯಿಸುತ್ತದೋ, ಅಂತೆಯೇ ರಾಹುಲ್ ಕೂಡಾ ಕಷ್ಟಪಟ್ಟು ಕೆಲಸ ಮಾಡುವುದಿಲ್ಲ. ಅದಕ್ಕಾಗಿ ಮತ್ತೊಬ್ಬರ ಹೆಗಲನ್ನು ಆಶ್ರಯಿಸುತ್ತಾರೆ. ರಾಹುಲ್ ಒಂದು ರೀತಿಯಲ್ಲಿ ಭಾರತದ ರಾಜಕೀಯ ಕೋಗಿಲೆ ಇದ್ದಂತೆ. ಕಾಂಗ್ರೆಸ್‌ಗೆ ಕಾಯಂ ಅಧ್ಯಕ್ಷರಿಲ್ಲ. ಸೋನಿಯಾ ಗಾಂಧಿ ಪಕ್ಷದ ಹಂಗಾಮಿ ಅಧ್ಯಕ್ಷೆಯಾಗಿದ್ದಾರೆ. ಹಾಗಾಗಿ, ಕಾಂಗ್ರೆಸ್‌ ನೆಲಮಟ್ಟದ ಸಮಸ್ಯೆಗಳನ್ನು ಪ್ರಶ್ನಿಸುವಲ್ಲಿ ವಿಫಲವಾಗಿದೆ. ಸೋನಿಯಾ ಅವರು ಇತರ ಪಕ್ಷಗಳೊಂದಿಗೆ ವರ್ಚುವಲ್ ಸಭೆ ನಡೆಸುತ್ತಾರೆ’ ಎಂದಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿರುವ ರೈತ ಒಕ್ಕೂಟಗಳ ಕುರಿತು ಪ್ರತಿಕ್ರಿಯಿಸಿದ ಸಂಬಿತ್, ‘ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆ ರೈತರಿಗೆ ಸಮರ್ಪಿತವಾಗಿದೆ. ಮುಂದೆಯೂ ಅವರು ಹಾಗೇ ಇರುತ್ತಾರೆ. ಕೇಂದ್ರ ₹1.5 ಲಕ್ಷ ಕೋಟ ಹಣವನ್ನು ರೈತರ ಖಾತೆಗಳಿಗೆ ಜಮಾ ಮಾಡಿದೆ’ ಎಂದು ವಿವರಿಸಿದರು.

‘ರಾಜಸ್ಥಾನದಲ್ಲಿ ಅಪ್ರಾಪ್ತೆ ಮೇಲಿನ ಅತ್ಯಾಚಾರ ಕುರಿತಾಗಲೀ, ಚತ್ತೀಸ್‌ಗಡದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ತಂದೆ ನಿರ್ದಿಷ್ಟ ಸಮುದಾಯವೊಂದರ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆ ಕುರಿತು ದಾಖಲಾಗಿರುವ ಎಫ್‌ಐಆರ್ ಬಗ್ಗೆಯಾಗಲೀ ಕಾಂಗ್ರೆಸ್ ನಾಯಕರು ಏಕೆ ಮಾತನಾಡುವುದಿಲ್ಲ’ ಎಂದೂ ಅವರು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು