ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ಕ್ಷಮೆ ಯಾಚನೆಗಾಗಿ ಪಟ್ಟು: ಸಂಸತ್‌ನಲ್ಲಿ ಕೋಲಾಹಲ

ಲೋಕಸಭೆ, ರಾಜ್ಯಸಭೆ ಕಲಾಪಗಳು ದಿನ ಮಟ್ಟಿಗೆ ಮುಂದೂಡಿಕೆ
Last Updated 14 ಮಾರ್ಚ್ 2023, 6:22 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಬ್ರಿಟನ್‌ ಪ್ರವಾಸದಲ್ಲಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಮಾಡಿರುವ ಟೀಕೆಯು ಸಂಸತ್ತಿನಲ್ಲಿ ಸೋಮವಾರ ತೀವ್ರ ಕೋಲಾಹಲ ಎಬ್ಬಿಸಿತು.

ಬಜೆಟ್‌ ಅಧಿವೇಶನದ ಎರಡನೇ ಹಂತದ ಚರ್ಚೆ ಆರಂಭವಾದಾಗ ರಾಹುಲ್‌ ಅವರ ಇತ್ತೀಚಿನ ಲಂಡನ್‌ ಭಾಷಣವು ಎರಡೂ ಸದನಗಳಲ್ಲಿ ಕೇಂದ್ರ ಸರ್ಕಾರ ಮತ್ತು ವಿಪಕ್ಷಗಳ ನಡುವೆ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ನಾಂದಿಯಾಯಿತು.

ದೇಶದ ಪ್ರಜಾಪ್ರಭುತ್ವವನ್ನು ವಿದೇಶಿ ನೆಲದಲ್ಲಿ ಅವಹೇಳನ ಮಾಡಿರುವ ರಾಹುಲ್‌ ಗಾಂಧಿ ದೇಶದ ಕ್ಷಮೆಯಾಚಿಸಬೇಕೆಂದು ಸರ್ಕಾರದ ಪ್ರತಿನಿಧಿಗಳು ಪಟ್ಟುಹಿಡಿದರೆ, ವಿದೇಶಗಳ ಪ್ರವಾಸದ ವೇಳೆ ಪ್ರಧಾನಿ ಮೋದಿ ಅವರು ಈ ಹಿಂದೆ ನೀಡಿರುವ ನಿರ್ದಿಷ್ಟ ಹೇಳಿಕೆಗಳನ್ನು ಪ್ರತಿಪಕ್ಷಗಳು ಗುರಾಣಿಯಾಗಿ ಉಲ್ಲೇಖಿಸಿ, ಸರ್ಕಾರದ ವಿರುದ್ಧ ಪ್ರತಿದಾಳಿ ನಡೆಸಿದವು.

ಲೋಕಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದಲ್ಲಿ ಮತ್ತು ರಾಜ್ಯಸಭೆಯಲ್ಲಿ ನಾಯಕ ಪೀಯೂಷ್ ಗೋಯೆಲ್‌ ನೇತೃತ್ವದಲ್ಲಿ ಬಿಜೆಪಿ ಸದಸ್ಯರು, ರಾಹುಲ್‌ ಅವರು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿ ಘೋಷಣೆ ಕೂಗಿದರು. ವಿಪಕ್ಷಗಳ ಸದಸ್ಯರೂ ಆಡಳಿತರೂಢ ಎನ್‌ಡಿಎ ಸಂಸದರಿಗೆ ಸರಿಸಮಾನವಾಗಿಯೇ ಪ್ರತಿ ಘೋಷಣೆ ಹಾಕಿದರು.

ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ನಂತರ ವಿಷಯ ಪ್ರಸ್ತಾಪಿಸಿದ ರಾಜನಾಥ್‌ ಸಿಂಗ್‌, ಪ್ರಜಾಪ್ರಭುತ್ವ ಕುಸಿಯುತ್ತಿದೆ ಎಂದು ಹೇಳುವ ಮೂಲಕ ರಾಹುಲ್‌ ದೇಶದ ಅವಹೇಳನ ಮಾಡಿದ್ದಾರೆ. ವಿದೇಶಿ ಶಕ್ತಿಗಳು ಭಾರತದ ಪ್ರಜಾಪ್ರಭುತ್ವ ಉಳಿಸಲು ಮಧ್ಯಪ್ರವೇಶಿಸಬೇಕೆಂದು ಬಯಸುವ ಮೂಲಕ ದೇಶದ ಗೌರವ ಮತ್ತು ಪ್ರತಿಷ್ಠೆಗೆ ಚ್ಯುತಿ ತಂದಿದ್ದಾರೆ. ಅವರ ಟೀಕೆಗಳನ್ನು ಸದನ ಖಂಡಿಸಬೇಕೆಂದು ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಮನವಿ ಮಾಡಿದರು.

ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು, ಇಂದಿರಾ ಗಾಂಧಿ ಆಡಳಿತದಲ್ಲಿ ತುರ್ತುಪರಿಸ್ಥಿತಿ ಹೇರಿ, ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಾಗ ಪ್ರಜಾಪ್ರಭುತ್ವ ಎಲ್ಲಿತ್ತು? ಶಿಕ್ಷೆಗೆ ಗುರಿಯಾದ ರಾಜಕಾರಣಿಗಳನ್ನು ಅನರ್ಹತೆಯಿಂದ ರಕ್ಷಿಸಲು ತಂದ ಸುಗ್ರೀವಾಜ್ಞೆ ಪ್ರತಿಯನ್ನು ‘ಸಂಪೂರ್ಣ ಅಸಂಬದ್ಧ’ವೆಂದು ರಾಹುಲ್‌ ಹರಿದು ಬಿಸಾಡಿದಾಗ ಪ್ರಜಾಪ್ರಭುತ್ವ ಎಲ್ಲಿತ್ತು? ಎಂದು ಪ್ರಶ್ನಿಸಿದರು.

ಆರೋಪ– ಪ್ರತ್ಯಾರೋಪಗಳಿಂದ ಗದ್ದಲ ಮುಂದುವರಿದಾಗ ಸ್ಪೀಕರ್‌, ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು. ಮತ್ತೆ ಸದನ ಸೇರಿದಾಗಲೂ ಅದೇ ಸ್ಥಿತಿ ಕಾಣಿಸಿದಾಗ ಸದನವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

ರಾಜ್ಯಸಭೆಯಲ್ಲೂ ಇದೇ ವಿಷಯ ಪ್ರಸ್ತಾಪಿಸಿದ ಪೀಯೂಷ್‌ ಗೋಯೆಲ್‌ ‘ವಿಪಕ್ಷದ ನಾಯಕ ದೇಶದ ಪ್ರಜಾಪ್ರಭುತ್ವದ ಬಗ್ಗೆ ವಿದೇಶದಲ್ಲಿ ಅಸಂಬದ್ಧವಾಗಿ ಮಾತನಾಡಿರುವುದು ನಾಚಿಕೆಗೇಡು. ಭಾರತೀಯ ಪತ್ರಿಕಾರಂಗ, ನ್ಯಾಯಾಂಗ, ಚುನಾವಣಾ ಆಯೋಗ ಮತ್ತು ಸೇನೆ ವಿರುದ್ಧವೂ ಆರೋಪಿಸಿರುವ ಅವರು ಕ್ಷಮೆಯಾಚಿಸಬೇಕು’ ಎಂದು ಒತ್ತಾಯಿಸಿದರು.

ಆರೆಸ್ಸೆಸ್ ಹೆಸರು ನೇರವಾಗಿ ಹೆಸರಿಸದೇ, ‘ಸಾಮಾಜಿಕ ಕಲ್ಯಾಣ ಸಂಸ್ಥೆಯ ಬಗ್ಗೆ ರಾಹುಲ್ ಅವಹೇಳನಕಾರಿ ಟೀಕೆ ಮಾಡಿದ್ದಾರೆ’ ಎಂದೂ ಗೋಯೆಲ್‌ ಆರೋಪಿಸಿದರು.

ಗೋಯೆಲ್‌ ಅವರ ಹೇಳಿಕೆಗೆ ಪ್ರತ್ಯುತ್ತರ ನೀಡಿದ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ನಿಯಮಕ್ಕೆ ವಿರುದ್ಧವಾಗಿ, ರಾಜ್ಯಸಭೆಯಲ್ಲಿ ಲೋಕಸಭಾ ಸದಸ್ಯರಿಗೆ ಸಂಬಂಧಿಸಿದ ವಿಷಯ ಪ್ರಸ್ತಾಪಿಸಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಗದ್ದಲ ಉಂಟಾಯಿತು. ಸಭಾಪತಿ ಜಗದೀಪ್‌ ಧನಕರ್‌, ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು. ಸದನ ಮತ್ತೆ ಸೇರಿದಾಗ, ಸದನಕ್ಕೆ ಸಂಬಂಧಿಸದ ಸದಸ್ಯರ ಮೇಲೆ ಗೋಯೆಲ್‌ ಮಾಡಿದ ಆರೋಪದ ಬಗ್ಗೆ ಖರ್ಗೆ ಅವರು ಕ್ರಿಯಾಲೋಪ ಎತ್ತಿದರು. ಆದರೆ, ಗೋಯೆಲ್‌ ಅವರು, ಸದಸ್ಯರ ಹೆಸರು ಉಲ್ಲೇಖಿಸಿಲ್ಲವೆಂದು ಸಮಜಾಯಿಷಿ ನೀಡಿದರು.

ಈ ವಿಚಾರದಲ್ಲಿ ವಿರೋಧ ಪಕ್ಷ ಮತ್ತು ಆಡಳಿತ ಪಕ್ಷ ಎರಡೂ ಕಡೆಗಳಲ್ಲಿ ಪ್ರತಿಭಟನೆ ಮುಂದುವರಿದ ಕಾರಣ ಸಭಾಪತಿ, ಮಂಗಳವಾರ ಬೆಳಿಗ್ಗೆ 11ಕ್ಕೆ ಸದನ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT