ಬುಧವಾರ, ಸೆಪ್ಟೆಂಬರ್ 30, 2020
21 °C

ರೈಲ್ವೆ ಇಲಾಖೆ; ಬಂಗ್ಲೆ ಪಿಯೋನ್ ಹುದ್ದೆ ನೇಮಕಾತಿ ಸ್ಥಗಿತ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳ ಮನೆಗಳಲ್ಲಿ ’ಮನೆ ಕೆಲಸದ ಸಹಾಯಕರ’ನ್ನಾಗಿ ನಿಯೋಜಿಸಲಾಗುತ್ತಿದ್ದ ’ಬಂಗ್ಲೆ ಪಿಯೋನ್’ ಹುದ್ದೆಯ ನೇಮಕಾತಿಯನ್ನು ರದ್ದುಗೊಳಿಸಲು ರೈಲ್ವೆ ಇಲಾಖೆ ಸಿದ್ಧತೆ ನಡೆಸಿದೆ.

ಪುರಾತನ ಕಾಲದಿಂದ ರೈಲ್ವೆ ಇಲಾಖೆಯಲ್ಲಿ ಜಾರಿಯಲ್ಲಿದ್ದ ’ಟೆಲಿಫೋನ್ ಅಟೆಂಡೆಂಟ್‌ ಕಮ್ ಡಾಕ್ ಖಲಾಸಿ' (ಟಿಎಡಿಕೆ) ಹೆಸರಿನಲ್ಲಿ ಮನೆಕೆಲಸದ ಸಹಾಯಕರ ಹುದ್ದೆಯ ನೇಮಕಾತಿಯನ್ನು ರದ್ದುಗೊಳಿಸುವ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಆಗಸ್ಟ್ 6 ರಂದು ರೈಲ್ವೆ ಇಲಾಖೆ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿದೆ. 

ರೈಲ್ವೆ ಮಂಡಳಿಯಲ್ಲಿ ಟಿಎಡಿಕೆ ನೇಮಕಾತಿ ವಿಚಾರ ಪರಿಶೀಲನೆ ಹಂತದಲ್ಲಿದೆ. ಹಾಗಾಗಿ ತಕ್ಷಣದಿಂದಲೇ ಟಿಎಡಿಕೆ ಅಡಿಯಲ್ಲಿ ಯಾವುದೇ ನೇಮಕಾತಿಯನ್ನು ಮಾಡಿಕೊಳ್ಳಬಾರದು. ಹಾಗೆಯೇ, ನೇಮಕ ಪ್ರಕ್ರಿಯೆ ನಡೆಯುತ್ತಿದ್ದರೆ, ಅದನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. 

’ಜುಲೈ 1, 2020ರಿಂದ ಈಚೆಗೆ ಅನುಮೋದನೆ ಪಡೆದಿರುವ ಇಂಥ ಎಲ್ಲ ನೇಮಕಾತಿಗಳು ರೈಲ್ವೆ ಮಂಡಳಿಯಲ್ಲಿ ಪರಿಶೀಲನೆಗೆ ಒಳಪಡುವ ಸಾಧ್ಯತೆ ಇದೆ. ಹಾಗಾಗಿ ಈ ನಿಮಯವನ್ನು ರೈಲ್ವೆ ಇಲಾಖೆಯ ಎಲ್ಲ ವಿಭಾಗಗಳಲ್ಲೂ ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. 

ತಾತ್ಕಾಲಿಕ ಸಿಬ್ಬಂದಿಯಾಗಿ ರೈಲ್ವೆ ಇಲಾಖೆ ಸೇರಿದವರನ್ನು, ಸುಮಾರು ಮೂರು ವರ್ಷಗಳ ನಂತರ ಸ್ಕ್ರೀನಿಂಗ್ ಮಾಡಿ, ಗ್ರೂಪ್ ಡಿ ಸಿಬ್ಬಂದಿಯಾಗಿ ನೇಮಿಸಿಕೊಳ್ಳಲಾಗುತ್ತಿತ್ತು. ಮುಂದೆ ಈ ಹುದ್ದೆಯಲ್ಲಿದ್ದವರು ಟಿಕೆಟ್ ಪರೀಕ್ಷಕರು, ಪೋರ್ಟರ್‌ಗಳು, ಹವಾನಿಯಂತ್ರಿತ ಬೋಗಿಗಳಲ್ಲಿ ಎಸಿ ರಿಪೇರಿ ಮಾಡುವ ಮೆಕಾನಿಕ್‌ಗಳನ್ನಾಗಿ ಮತ್ತು ಅಡುಗೆ ಕೆಲಸಗಳಲ್ಲಿ ಮುಂದುವರಿಯುತ್ತಿದ್ದರು. 

8 ನೇ ತರಗತಿಯವರೆಗೆ ಕನಿಷ್ಠ ಶೈಕ್ಷಣಿಕ ಅರ್ಹತೆ ಹೊಂದಿರುತ್ತಿದ್ದ ಟಿಎಡಿಕೆ ಸಿಬ್ಬಂದಿಗೆ ತಿಂಗಳಿಗೆ  ₹ 20 ಸಾವಿರದಿಂದ 22 ಸಾವಿರದವರೆಗೆ ವೇತನ ನೀಡಲಾಗುತ್ತಿದೆ. ಹಾಗೆಯೇ, ರೈಲ್ವೆಯ ಗ್ರೂಪ್ ಡಿ ಸಿಬ್ಬಂದಿಗೆ ಸಮಾನವಾದ ಪ್ರಯೋಜನಗಳನ್ನು ನೀಡಲಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು