ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ ವಿ.ವಿ: 10 ವಿದ್ಯಾರ್ಥಿಗಳ ಅಮಾನತು

ಪ್ರಧಾನಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ
Last Updated 29 ಜನವರಿ 2023, 14:35 IST
ಅಕ್ಷರ ಗಾತ್ರ

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಕುರಿತು ಬಿಬಿಸಿ ನಿರ್ಮಿಸಿರುವ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್‌’ ಸಾಕ್ಷ್ಯಚಿತ್ರ ಪ್ರದರ್ಶಿಸಿದ್ದಕ್ಕಾಗಿ ರಾಜಸ್ಥಾನದ ಕೇಂದ್ರೀಯ ವಿಶ್ವವಿದ್ಯಾಲಯದ ಆಡಳಿತವು 10 ವಿದ್ಯಾರ್ಥಿಗಳನ್ನು ಎರಡು ವಾರಗಳವರೆಗೆ ಅಮಾನತು ಮಾಡಿದೆ’ ಎಂದು ದಿ ಪೀಪಲ್ಸ್‌ ಯೂನಿಯನ್‌ ಫಾರ್‌ ಸಿವಿಲ್‌ ಲಿಬರ್ಟಿಸ್‌ (ಪಿಯುಸಿಎಲ್‌) ಹೆಸರಿನ ಸ್ವಯಂ ಸೇವಾ ಸಂಸ್ಥೆಯು (ಎನ್‌ಜಿಒ) ಭಾನುವಾರ ತಿಳಿಸಿದೆ.

‘ಮುಸ್ಲಿಂ ಸಮುದಾಯಕ್ಕೆ ಸೇರಿದ ಎಂಟು ಮಂದಿ ಹಾಗೂ ಕ್ರಿಶ್ಚಿಯನ್‌ ಮತ್ತು ಹಿಂದೂ ಸಮುದಾಯದ ತಲಾ ಒಬ್ಬ ವಿದ್ಯಾರ್ಥಿಯನ್ನು ವಿಶ್ವವಿದ್ಯಾಲಯ ಹಾಗೂ ವಸತಿ ನಿಲಯದಿಂದ ಅಮಾನತುಗೊಳಿಸಲಾಗಿದೆ. ಇವರು ಇದೇ 26ರಂದು ತಮ್ಮ ಮೊಬೈಲ್‌ ಹಾಗೂ ಲ್ಯಾಪ್‌ಟಾಪ್‌ಗಳಲ್ಲಿ ನಿಷೇಧಿತ ಸಾಕ್ಷ್ಯಚಿತ್ರ ವೀಕ್ಷಿಸಿದ್ದರು’ ಎಂದು ಪಿಯುಸಿಎಲ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸಂಬಂಧ ವಿಶ್ವವಿದ್ಯಾಲಯದ ಕುಲಪತಿ ಆನಂದ್‌ ಭಾಲೆರಾವ್‌ ಅವರಿಗೆ ಪತ್ರ ಬರೆದಿರುವ ಪಿಯುಸಿಎಲ್‌, ‘ವಿದ್ಯಾರ್ಥಿಗಳನ್ನು ವಿಚಾರಣೆಗೆ ಒಳಪಡಿಸಿಲ್ಲ. ಶೋಕಾಸ್‌ ನೋಟಿಸ್‌ ಕೂಡ ನೀಡದೆ ಅವರನ್ನು 15 ದಿನಗಳವರೆಗೆ ಅಮಾನತು ಮಾಡಲಾಗಿದೆ’ ಎಂದು ಹೇಳಿದೆ.‌

ವಿಶ್ವವಿದ್ಯಾಲಯದ ಎಬಿವಿಪಿ ಘಟಕದ ಅಧ್ಯಕ್ಷ ವಿಕಾಸ್ ಪಾಠಕ್‌, ‘ಸ್ಟೂಡೆಂಟ್ಸ್‌ ಫೆಡರೇಷನ್‌ ಆಫ್‌ ಇಂಡಿಯಾ (ಎಸ್‌ಎಫ್‌ಐ) ಹಾಗೂ ಎನ್‌ಎಸ್‌ಯುಐ ಸಂಘಟನೆಗಳಿಗೆ ಸೇರಿದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಕ್ಯಾಂಟಿನ್‌ ಬಳಿ ಸಾಕ್ಷ್ಯಚಿತ್ರ ಪ್ರದರ್ಶಿಸುವ ಕುರಿತ ಆಹ್ವಾನ ಪತ್ರಿಕೆಗಳನ್ನು ಹಂಚಿದ್ದರು. ಹೀಗಾಗಿ ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

‘ಇದೇ 26ರಂದು ಸುಮಾರು 40 ರಿಂದ 50 ವಿದ್ಯಾರ್ಥಿಗಳು ಮೊಬೈಲ್‌ ಹಾಗೂ ಲ್ಯಾಪ್‌ಟಾಪ್‌ಗಳಲ್ಲಿ ಸಾಕ್ಷ್ಯಚಿತ್ರ ವೀಕ್ಷಿಸಿದ್ದರು. ವಿಷಯ ತಿಳಿದ ಕೂಡಲೇ ವಿಶ್ವವಿದ್ಯಾಲಯದ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಆಗ ವಿದ್ಯಾರ್ಥಿಗಳು ಸಾಕ್ಷ್ಯಚಿತ್ರ ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಘೋಷಣೆ ಕೂಗಿದ್ದರು’ ಎಂದು ಮಾಹಿತಿ ನೀಡಿದ್ದಾರೆ.

‘ಸಾಕ್ಷ್ಯಚಿತ್ರ ವೀಕ್ಷಿಸಿದ್ದಕ್ಕಾಗಿ ವಿದ್ಯಾರ್ಥಿಗಳನ್ನು ಅಮಾನತು ಮಾಡಿಲ್ಲ. ವಿಶ್ವವಿದ್ಯಾಲಯದ ಆಡಳಿತ ನೀಡಿರುವ ಸೂಚನೆ ಪಾಲಿಸದಿರುವುದಕ್ಕೆ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಇದೊಂದು ಸಹಜ ಪ್ರಕ್ರಿಯೆ’ ಎಂದು ವಿಶ್ವವಿದ್ಯಾಲಯದ ಆಡಳಿತವು ಸ್ಪಷ್ಟಪಡಿಸಿದೆ.

‘ವಿಶ್ವವಿದ್ಯಾಲಯದ ಆವರಣದಲ್ಲಿ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ’ ಎಂದೂ ಇದೇ 27ರಂದು ಆದೇಶ ಹೊರಡಿಸಿದೆ.

**

ಬಿಬಿಸಿ ಕಚೇರಿ ಹೊರಭಾಗದಲ್ಲಿ ಭಿತ್ತಿಪತ್ರ

ನವದೆಹಲಿ : ‘ಮೋದಿ ಕುರಿತು ಸಾಕ್ಷ್ಯಚಿತ್ರ ನಿರ್ಮಿಸಿರುವ ಬಿಬಿಸಿ ಕ್ರಮ ವಿರೋಧಿಸಿ ಹಿಂದೂ ಸೇನಾ ಕಾರ್ಯಕರ್ತರು ಭಾನುವಾರ ಇಲ್ಲಿನ ಕಸ್ತೂರಬಾ ಗಾಂಧಿ ಮಾರ್ಗದಲ್ಲಿರುವ ಬಿಬಿಸಿ ಕಚೇರಿ ಹೊರಭಾಗದಲ್ಲಿ ಬಿಬಿಸಿ ವಿರೋಧಿ ಭಿತ್ತಿಪತ್ರಗಳನ್ನು ಅಂಟಿಸಿದ್ದಾರೆ.

‘ಬಿಬಿಸಿಯು ಭಾರತದ ಏಕತೆ ಹಾಗೂ ಸಮಗ್ರತೆಗೆ ಧಕ್ಕೆಯುಂಟು ಮಾಡಲಿದೆ. ಹೀಗಾಗಿ ಅದನ್ನು ನಿಷೇಧಿಸಬೇಕು’ ಎಂದು ಹಿಂದೂ ಸೇನಾ ಮುಖ್ಯಸ್ಥ ವಿಷ್ಣು ಗುಪ್ತಾ ಆಗ್ರಹಿಸಿದ್ದಾರೆ.

‘ಇಂಧಿರಾ ಗಾಂಧಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಬಿಬಿಸಿಯನ್ನು ನಿಷೇಧಿಸಲಾಗಿತ್ತು. ಸಂಸ್ಥೆಯು ಕ್ಷಮಾಪಣೆ ಪತ್ರ ಸಲ್ಲಿಸಿದ ಬಳಿಕ ನಿಷೇಧ ತೆರವುಗೊಳಿಸಲಾಗಿತ್ತು’ ಎಂದಿದ್ದಾರೆ.

‘ಬಿಬಿಸಿ ಕಚೇರಿ ಹೊರ ಭಾಗದಲ್ಲಿ ಭಿತ್ತಿಪತ್ರ ಅಂಟಿಸಿರುವುದು ಗಸ್ತು ಸಿಬ್ಬಂದಿ ಗಮನಕ್ಕೆ ಬಂದಿತ್ತು. ಅದನ್ನು ಅವರು ತೆರವುಗೊಳಿಸಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

**

ಬಿಜೆಪಿ ಮೇಲೆ ವಾಗ್ದಾಳಿ ನಡೆಸಲು ಡಿಎಂಕೆ ತಂತ್ರ

ಚೆನ್ನೈ : ಸಂಸತ್ತಿನ ಬಜೆಟ್‌ ಅಧಿವೇಶನದ ವೇಳೆ ಬಿಬಿಸಿ ಸಾಕ್ಷ್ಯಚಿತ್ರ ಹಾಗೂ ಅದಾನಿ ಸಮೂಹವು ಲೆಕ್ಕಪತ್ರಗಳ ವಂಚನೆಯಲ್ಲಿ ತೊಡಗಿರುವ ಸಂಬಂಧ ಅಮೆರಿಕದ ‘ಹಿಂಡನ್‌ಬರ್ಗ್‌ ರಿಸರ್ಚ್‌’ ಬಹಿರಂಗಪಡಿಸಿರುವ ವರದಿ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಲು ತಮಿಳುನಾಡಿನ ಆಡಳಿತಾರೂಢ ಡಿಎಂಕೆ, ತಂತ್ರ ರೂಪಿಸಿದೆ.

ಪಕ್ಷದ ಸಂಸದರೊಂದಿಗೆ ಭಾನುವಾರ ಸಭೆ ನಡೆಸಿದ ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌, ರಾಜ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತೂ ಗಮನ ಸೆಳೆಯುವಂತೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT