ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಾಸಮತ ಯಾಚನೆ: ಸಿಎಂ ಅಶೋಕ್‌ ಗೆಹ್ಲೋಟ್‌ ನೇತೃತ್ವದ ಸರ್ಕಾರದ ಗೆಲುವಿನ ನಗೆ

ರಾಜಸ್ಥಾನ ವಿಧಾನಸಭೆ
Last Updated 14 ಆಗಸ್ಟ್ 2020, 22:00 IST
ಅಕ್ಷರ ಗಾತ್ರ

ಜೈಪುರ: ಶಾಸಕರ ಬಂಡಾಯದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಅಶೋಕ್ ಗೆಹ್ಲೋಟ್‌ ನೇತೃತ್ವದ ರಾಜಸ್ಥಾನದ ಕಾಂಗ್ರೆಸ್‌ ಸರ್ಕಾರ ಶುಕ್ರವಾರ ವಿಶ್ವಾಸ ಮತದಲ್ಲಿ ಗೆಲುವು ಪಡೆದಿದೆ.

ಕಾಂಗ್ರೆಸ್‌ ಬಂಡಾಯ ಶಾಸಕರ ನಾಯಕತ್ವ ವಹಿಸಿದ್ದ ಸಚಿನ್‌ ಪೈಲಟ್‌ ಗುರುವಾರ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರ ನಿವಾಸದಲ್ಲಿ ನಡೆದ ಪಕ್ಷದ ಶಾಸಕಾಂಗ ಸಭೆಯಲ್ಲಿ ಭಾಗಿಯಾಗಿದ್ದರು. ಅನಂತರ ಶಾಸಕರು ಒಗ್ಗಟ್ಟಾಗಿರುವುದಾಗಿ ಸಾರಲಾಯಿತು. ತಡ ಮಾಡದೆ ಸಿಎಂ ಗೆಹ್ಲೋಟ್‌ ವಿಧಾನಸಭೆ ಅಧಿವೇಶದಲ್ಲಿ ವಿಶ್ವಾಸ ಮತ ಯಾಚನೆಗೆ ಮುಂದಾಗಿ ಗೆಲುವಿನೊಂದಿಗೆ ನಿರಾಳರಾದರು.

ಬಂಡಾಯ ಶಾಸಕರಿಂದಾಗಿ ಪಕ್ಷದಲ್ಲಿ ಉಂಟಾಗಿರುವ ಬಿರುಕುಗಳನ್ನು ಸರಿಪಡಿಸಲು ಹಾಗೂ ಒಗ್ಗಟ್ಟು ಗಟ್ಟಿಗೊಳಿಸಲು ಮುಖ್ಯಮಂತ್ರಿ ಗೆಹ್ಲೋಟ್‌ ಅವರಿಗೆ ಆರು ತಿಂಗಳ ಅವಕಾಶವಿದೆ.

'ರಾಜಸ್ಥಾನ ವಿಧಾನಸಭೆಯಲ್ಲಿ ಇಂದು ನಡೆಸಲಾದ ವಿಶ್ವಾಸಮತ ಯಾಚನೆಯಲ್ಲಿ ಸರ್ಕಾರ ಬಹುಮತ ಪಡೆಯುವುದರಿಂದ ಗೆಲುವು ಪಡೆಯಿತು. ವಿರೋಧ ಪಕ್ಷಗಳ ಹಲವು ಪ್ರಯತ್ನಗಳ ನಡುವೆಯೂ ಸರ್ಕಾರದ ಪರವಾಗಿಯೇ ಫಲಿತಾಂಶ ಸಿಕ್ಕಿತು' ಎಂದು ಶಾಸಕ ಸಚಿನ್‌ ಪೈಲಟ್‌ ಹೇಳಿದರು.

'ಮೊದಲು ಕುಳಿತುಕೊಳ್ಳುತ್ತಿದ್ದ ಸ್ಥಾನದಲ್ಲಿ ನಾನು ಸುರಕ್ಷಿತವಾಗಿದ್ದೆ. ಅನಂತರ ನಾನು ಯೋಚಿಸಿದೆ ನನಗೆ ಬೇರೊಂದು ಸ್ಥಾನವನ್ನೇಕೆ ನೀಡಲಾಯಿತೆಂದು. ಇದು ಗಡಿ ಪ್ರದೇಶವೆಂಬುದನ್ನು ನಾನು ಅರಿತೆ– ಆಡಳಿತಾರೂಢ ಪಕ್ಷ ಒಂದು ಕಡೆ ಹಾಗೂ ವಿರೋಧ ಪಕ್ಷ ಮತ್ತೊಂದು ಕಡೆ. ಗಡಿ ಭಾಗಕ್ಕೆ ಯಾರನ್ನು ಕಳುಹಿಸುತ್ತಾರೆ? ಬಲಿಷ್ಠ ಯೋಧರನ್ನು...' ಎಂದು ಕಾಂಗ್ರೆಸ್ ಶಾಸಕ ಸಚಿನ್‌ ಪೈಲಟ್‌ ಅಧಿವೇಶನದಲ್ಲಿ ಹೇಳಿದರು.

ನಾನಾಗಲಿ ಅಥವಾ ನನ್ನ ಯಾವುದೇ ಸ್ನೇಹಿತರಾಗಲಿ, ನಾವು 'ವೈದ್ಯರನ್ನು' ಭೇಟಿಯಾದೆವು ಹಾಗೂ 'ಚಿಕಿತ್ಸೆಯ' ಬಳಿಕ ಎಲ್ಲ 125 ಜನರೂ ವಿಧಾನಸಭೆಯಲ್ಲಿ ಹಾಜರಿದ್ದೇವೆ...ಈ ಗಡಿ ಭಾಗದಲ್ಲಿ ಸ್ಫೋಟಗಳು ನಡೆಯುತ್ತಿರಬಹುದು, ಆದರೆ ನಾವು ರಕ್ಷಾಕವಚವಾಗಿ ಎಲ್ಲವನ್ನೂ ಸುರಕ್ಷಿತವಾಗಿರುವಂತೆ ಗಮನಿಸುತ್ತೇವೆ ಎಂದಿದ್ದಾರೆ.

ವಿಶ್ವಾಸಮತ ಯಾಚನೆ ಚರ್ಚೆಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ರಾಜೇಂದ್ರ ರಾಥೋಡ್, 'ರಾಜಸ್ಥಾನದಲ್ಲಿ ಕಳೆದ ಒಂದು ತಿಂಗಳಿನಿಂದ ಅನಾವರಣಗೊಂಡಿರುವ ನಾಟಕವನ್ನು ಸಾರ್ವಜನಿಕರು ನೋಡುತ್ತಿದ್ದಾರೆ. ನಟರು, ನಾಯಕರು, ಖಳನಾಯಕರು ಎಲ್ಲರೂ ಒಂದೇ ಪಕ್ಷದವರು' ಎಂದು ವ್ಯಂಗ್ಯವಾಡಿದರು.

ಉಪಮುಖ್ಯಮಂತ್ರಿಯಾಗಿದ್ದ ಸಚಿನ್ ಪೈಲಟ್ ನೇತೃತ್ವದಲ್ಲಿ 19 ಶಾಸಕರು ಸರ್ಕಾರದ ವಿರುದ್ಧ ಬಂಡಾಯ ಎದ್ದಿದ್ದು, ಹಿರಿಯ ನಾಯಕರ ಮಧ್ಯಪ್ರವೇಶದಿಂದ ಶಮನಗೊಂಡಿದೆ. ಬಂಡಾಯದ ಹಿಂದೆಯೇ ಪಕ್ಷದ ತೀರ್ಮಾನದಂತೆ ಗೆಹ್ಲೋಟ್ ಅವರು ಸಚಿನ್ ಅವರನ್ನು ಉಪ ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಿದ್ದರು. ಅಲ್ಲದೆ, ನಿಷ್ಪ್ರಯೋಜಕ ಎಂದೂ ಟೀಕಿಸಿದ್ದರು. ಸುಮಾರು ಒಂದು ತಿಂಗಳು ನಡೆದ ರಾಜಕೀಯ ಬೆಳವಣಿಗೆಗಳ ಬೆನ್ನಲ್ಲೇ ಅಧಿವೇಶನ ನಡೆಯುತ್ತಿದೆ.

ಬಲಿಷ್ಠ ಯೋಧ: ಪೈಲಟ್‌
ಶುಕ್ರವಾರ ಆರಂಭವಾದ ಅಧಿವೇಶನದಲ್ಲಿ ಶಾಸಕರ ಆಸನ ವ್ಯವಸ್ಥೆಯನ್ನು ಬದಲಿಸಲಾಗಿತ್ತು. ಸಚಿನ್‌ ಪೈಲಟ್‌ ಅವರಿಗೆ ವಿರೋಧಪಕ್ಷಗಳ ಹತ್ತಿರದ ಸ್ಥಾನವನ್ನು ನೀಡಲಾಗಿತ್ತು. ಇದನ್ನು ಉಲ್ಲೇಖಿಸಿ ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದರು.

ಅದಕ್ಕೆ ಪ್ರತಿಕ್ರಿಯೆ ನೀಡಿದ ಸಚಿನ್‌, ‘ನಾನು ಆಡಳಿತ ಪಕ್ಷ ಮತ್ತು ವಿಪಕ್ಷಗಳ ಗಡಿಯಲ್ಲಿದ್ದೇನೆ. ಯಾವತ್ತೂ ಅತ್ಯಂತ ಶಕ್ತಿಶಾಲಿ ಯೋಧರನ್ನೇ ಗಡಿಗೆ ಕಳುಹಿಸಲಾಗುತ್ತದೆ’ ಎಂದರು. ಆ ಮೂಲಕ ಅವರು ಹೈಕಮಾಂಡ್‌ ಜತೆ ತನ್ನ ಸಂಪರ್ಕವನ್ನು ಸಹ ಪರೋಕ್ಷವಾಗಿ ಉಲ್ಲೇಖಿಸಿದರು.

‘ನಮ್ಮ ಸಮಸ್ಯೆಗಳೇನು ಎಂಬುದನ್ನು ನಾನು ಮತ್ತು ನನ್ನ ಬೆಂಗಲಿಗರು ನಮ್ಮ ವೈದ್ಯರ ಮುಂದೆ ಹೇಳಿಕೊಂಡಿದ್ದೇವೆ. ಚಿಕಿತ್ಸೆ ಲಭಿಸಿದೆ. ಈಗ ಎಲ್ಲಾ ಶಾಸಕರು ಜೊತೆಯಾಗಿದ್ದೇವೆ’ ಎಂದರು.

ವಿಲೀನ: ತೀರ್ಪು ಸೋಮವಾರ
ಬಿಎಸ್‌ಪಿಯ ಆರು ಮಂದಿ ಶಾಸಕರು ಕಾಂಗ್ರೆಸ್‌ನಲ್ಲಿ ವಿಲೀನವಾಗಿರುವುದನ್ನು ಪ್ರಶ್ನಿಸಿ, ಬಿಜೆಪಿ ಶಾಸಕ ಮದನ್‌ ದಿಲಾವರ್‌ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್‌ ತೀರ್ಪನ್ನು ಸೋಮವಾರ ಪ್ರಕಟಿಸುವುದಾಗಿ ಹೇಳಿದೆ.

ನ್ಯಾಯಮೂರ್ತಿ ಮಹೇಂದ್ರಕುಮಾರ್‌ ಅವರು ಶುಕ್ರವಾರ ತೀರ್ಪನ್ನು ಬರೆಯಿಸಲು ಆರಂಭಿಸಿದ್ದರೂ, ಸಮಯಾಭಾವದಿಂದ ಅದನ್ನು ಪೂರ್ತಿಗೊಳಿಸಲಾಗಲಿಲ್ಲ. ಕೊನೆಗೆ ತೀರ್ಪನ್ನು ಸೋಮವಾರ ಪ್ರಕಟಿಸುವುದಾಗಿ ಹೇಳಿದರು.

ರಾಜಸ್ಥಾನ ವಿಧಾನಸಭೆ: ಸಂಖ್ಯಾ ಬಲಆಡಳಿತರೂಢ ಪಕ್ಷ
ಕಾಂಗ್ರೆಸ್ -107 (ಪೈಲಟ್ ಬೆಂಬಲಿಗರು-19, ಬಿಎಸ್‌ಪಿ- 6)
ಆರ್‌ಎಲ್‌ಡಿ -1
ಸ್ವತಂತ್ರರು- 13
ಬಿಟಿಪಿ-2
ಎಡಪಕ್ಷ- 2

ವಿರೋಧಪಕ್ಷದಲ್ಲಿರುವವರು
ಬಿಜೆಪಿ-72
ಆರ್‌ಎಲ್‌ಪಿ-3

ಇನ್ನಷ್ಟು ಓದು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT