ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನಲ್ಲಿ ಹುತಾತ್ಮ ಯೋಧರ ವಿಧವೆಯರ ಪ್ರತಿಭಟನೆ: ಕಾಂಗ್ರೆಸ್‌, ಬಿಜೆಪಿ ಘರ್ಷಣೆ

Last Updated 11 ಮಾರ್ಚ್ 2023, 18:43 IST
ಅಕ್ಷರ ಗಾತ್ರ

ಜೈಪುರ: ಪುಲ್ವಾಮಾದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ವಿಧವೆಯರನ್ನು ರಾಜಸ್ಥಾನ ಸರ್ಕಾರವು ಸಂವೇದನೆರಹಿತವಾಗಿ ನಡೆಸಿಕೊಂಡಿದೆ ಮತ್ತು ಸಂಸದರಾದ ಕಿರೋರಿ ಮೀನಾ ಮತ್ತು ರಂಜಿತಾ ಕೋಲಿ ಅವರನ್ನು ಥಳಿಸಲಾಗಿದೆ ಎಂದು ಆರೋಪಿಸಿ ಬಿಜೆ‍ಪಿಯ ಹಲವು ಮುಖಂಡರು ಮತ್ತು ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದ್ದಾರೆ. ಅವರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದಾರೆ.

ಪುಲ್ವಾಮಾದಲ್ಲಿ 2019ರಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಹುತಾತ್ಮರಾದ ಮೂವರು ಸೈನಿಕರ ವಿಧವೆಯರು ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಫೆಬ್ರುವರಿ 28ರಿಂದ ‍ಪ್ರತಿಭಟನೆ ನಡೆಸುತ್ತಿದ್ದರು. ಅವರನ್ನು ಶುಕ್ರವಾರವೇ ಪೊಲೀಸರು ತೆರವು ಮಾಡಿದ್ದು, ಅವರವರ ಊರಿನ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ. ಕಾಂಗ್ರೆಸ್ ಮುಖಂಡ ಸಚಿನ್‌ ಪೈಲಟ್‌ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದರು.

ಈ ಮಹಿಳೆಯರನ್ನು ಭೇಟಿಯಾಗಲು ಪೊಲೀಸರು ಅವಕಾಶ ಕೊಟ್ಟಿಲ್ಲ ಮತ್ತು ತಮ್ಮೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಾರೆ ಎಂದು ಮೀನಾ ಮತ್ತು ಕೋಲಿ ಅವರು ಆರೋ‍ಪಿಸಿದ್ದಾರೆ.

ಮೂವರು ವಿಧವೆಯರು ಆರು ದಿನಗಳ ಹಿಂದೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಅನುಕಂಪದ ಆಧಾರದಲ್ಲಿ ನೀಡುವ ಉದ್ಯೋಗವು ಹುತಾತ್ಮ ಯೋಧರ ಮಕ್ಕಳಿಗೆ ಮಾತ್ರವಲ್ಲ ಸಂಬಂಧಿಕರಿಗೂ ಅನ್ವಯ ಆಗಬೇಕು ಎಂಬುದು ಈ ಮಹಿಳೆಯರ ಮುಖ್ಯ ಬೇಡಿಕೆಯಾಗಿದೆ.

ಬಿಜೆಪಿ ಕಾರ್ಯಕರ್ತರು ಈ ಮಹಿಳೆಯರ ಪರವಾಗಿ ಜೈಪುರ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಜೈಪುರದಲ್ಲಿ ಬ್ಯಾರಿಕೇಡ್‌ಗಳನ್ನು ಮುರಿದರು. ಪ್ರತಿಭಟನಕಾರರು ಹಿಂಸಾಚಾರ ನಡೆಸಿ, ಮುಖ್ಯಮಂತ್ರಿ ಅಶೋಕ್‌ ಗೆಹಲೋತ್ ಮನೆಯತ್ತ ಸಾಗತೊಡಗಿದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿ ಚದುರಿಸಿದರು.

ಹುತಾತ್ಮ ಯೋಧರ ವಿಧವೆಯರನ್ನು ರಾಜಸ್ಥಾನ ಸರ್ಕಾರವು ಅವಮಾನಿಸಿದೆ. ಇದರ ವಿರುದ್ಧ ರಾಜ್ಯದಾದ್ಯಂತ ಭಾರಿ ಅಭಿಯಾನ ನಡೆಸಲಾಗುವುದು ಮತ್ತು ಜನರಿಗೆ ಸಂಬಂಧಿಸಿದ ವಿಚಾರಗಳನ್ನು ಈ ಅಭಿಯಾನದ ಮೂಲಕ ಮುನ್ನೆಲೆಗೆ ತರಲಾಗುವುದು ಎಂದು ರಾಜಸ್ಥಾನ ಬಿಜೆಪಿ ಘಟಕದ ಅಧ್ಯಕ್ಷ ಸತೀಶ್‌ ಪೂನಿಯಾ ಹೇಳಿದ್ದಾರೆ.

ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಅವರು ವಿಧವೆಯರ ಬೇಡಿಕೆಗಳ ಕುರಿತು ಗುರುವಾರ ಮಾತನಾಡಿದ್ದರು. ಹುತಾತ್ಮ ಯೋಧರ ಮಕ್ಕಳ ಬದಲಿಗೆ ಇತರ ಸಂಬಂಧಿಕರಿಗೆ ಉದ್ಯೋಗ ನೀಡುವುದು ಸರಿಯಾದ ಕ್ರಮವೇ ಎಂದು ಅವರು ಪ್ರಶ್ನಿಸಿದ್ದರು.

ರಾಜಸ್ಥಾನದ ವಿವಿಧ ಭಾಗಗಳಿಂದ ಬಂದ ಹುತಾತ್ಮ ಯೋಧರ ವಿಧವೆಯರ ನಿಯೋಗವೊಂದು ಅಶೋಕ್‌ ಗೆಹಲೋತ್ ಅವರನ್ನು ಶನಿವಾರ ಭೇಟಿಯಾಗಿದೆ. ಈಗ ರಾಜ್ಯ ಸರ್ಕಾರವು ಹುತಾತ್ಮ ಯೋಧರ ಕುಟುಂಬಕ್ಕೆ ಸಂಬಂಧಿಸಿ ಅನುಸರಿಸುತ್ತಿರುವ ನೀತಿಯನ್ನು ನಿಯೋಗವು ಬೆಂಬಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT