ಶನಿವಾರ, ಜುಲೈ 2, 2022
22 °C

ರಾಜಸ್ಥಾನದಿಂದ ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆ ಕಡಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಚ್ಚಿ/ಜೈಪುರ: ಕೇಂದ್ರ ಸರ್ಕಾರ ಶನಿವಾರ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಎಕ್ಸೈಸ್‌ ಸುಂಕವನ್ನು ಕಡಿತಗೊಳಿಸಿದ ಬೆನ್ನಲ್ಲೇ ಕೇರಳ ಮತ್ತು ರಾಜಸ್ಥಾನ ಸರ್ಕಾರಗಳೂ ರಾಜ್ಯ ತೆರಿಗೆ ಮತ್ತು ವ್ಯಾಟ್‌ ತಗ್ಗಿಸಿವೆ.

ಕೇರಳ ಸರ್ಕಾರ ಲೀಟರ್‌ ಪೆಟ್ರೋಲ್‌ ಮೇಲಿನ ರಾಜ್ಯ ತೆರಿಗೆಯನ್ನು ₹2.41 ಮತ್ತು ಲೀಟರ್‌ ಡೀಸೆಲ್‌ ಮೇಲೆ ₹1.36 ಕಡಿತ ಮಾಡಿದೆ.

‘ಕೇಂದ್ರ ಸರ್ಕಾರ ಇಂಧನದ ಮೇಲೆ ಭಾರಿ ತೆರಿಗೆ ವಿಧಿಸುತ್ತದೆ. ಈಗ ಭಾಗಶಃ ಕಡಿತ ಮಾಡಿದೆ. ಆದರೂ, ಕೇಂದ್ರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ’ ಎಂದು ಕೇರಳ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್‌, ‘ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್‌ ಸುಂಕ ಕಡಿತಗೊಳಿಸಿರುವುದರಿಂದ, ರಾಜ್ಯ ಸರ್ಕಾರವು ಪೆಟ್ರೋಲ್ ಮೇಲೆ ಲೀಟರ್‌ಗೆ ₹2.48 ಮತ್ತು ಡೀಸೆಲ್‌ಗೆ ₹1.16ರಷ್ಟು ವ್ಯಾಟ್ ಕಡಿತಗೊಳಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಪೆಟ್ರೋಲ್ ₹10.48 ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ ₹7.16 ಅಗ್ಗವಾಗಲಿದೆ’ ಎಂದು ತಿಳಿಸಿದರು.

ಮಹಾರಾಷ್ಟ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಭಾನುವಾರ ಕಡಿತಗೊಳಿಸಿದೆ.

ಪ್ರತಿ ಲೀಟರ್‌ಗೆ ಪೆಟ್ರೋಲ್‌ಗೆ ₹ 2.08 ಮತ್ತು ಡೀಸೆಲ್‌ಗೆ ₹ 1.44 ಕಡಿತ ಮಾಡಿದೆ.

ಈ ನಿರ್ಧಾರದಿಂದ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ ₹ 2,500 ಕೋಟಿ ನಷ್ಟ ಉಂಟಾಗಲಿದೆ ಎಂದು ಮಹಾರಾಷ್ಟ್ರ ಸರ್ಕಾರ ಮಾಹಿತಿ ನೀಡಿದೆ.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು