ಸೋಮವಾರ, ಸೆಪ್ಟೆಂಬರ್ 26, 2022
24 °C

ದಲಿತ ಬಾಲಕ ಸಾವು: ತಮ್ಮದೇ ಸರ್ಕಾರದ ವಿರುದ್ಧ ಸಚಿನ್ ಪೈಲಟ್ ಆಕ್ರೋಶ

ಐಎಎನ್‌ಎಸ್ Updated:

ಅಕ್ಷರ ಗಾತ್ರ : | |

ಜೈಪುರ: ಶಿಕ್ಷಕನ ಹಲ್ಲೆಯಿಂದ ದಲಿತ ಬಾಲಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಸ್ವ ಪಕ್ಷದ ಸರ್ಕಾರದ ವಿರುದ್ಧವೇ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಕಾರ್ಯವೈಖರಿಯನ್ನು ಪ್ರಶ್ನಿಸಿರುವ ಅವರು, ಜಾಲೋರ್‌ನ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟರು ಮತ್ತು ಡಿಎಸ್‌ಪಿ ಅವರನ್ನು ಹುದ್ದೆಯಿಂದ ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ. ಸಂತ್ರಸ್ತನ ಕುಟುಂಬದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿ ಅವರ ಫೋನ್‌ ಅನ್ನು ಕಿತ್ತುಕೊಂಡಿದ್ದರು ಎಂಬ ಆರೋಪವಿದೆ.

ಮಂಗಳವಾರ ಸುರಾನಗೆ ಭೇಟಿ ನೀಡಿದ್ದ ಪೈಲಟ್, ಮೃತ ಬಾಲಕನ ಸಂಬಂಧಿಕರನ್ನು ಭೇಟಿ ಮಾಡಿದ್ದರು.

‘ಇಂಥ ಘಟನೆಗಳು ಬೇರೆ ರಾಜ್ಯಗಳಲ್ಲಿಯೂ ನಡೆಯುತ್ತದೆ ಎಂದಷ್ಟೇ ಹೇಳಿದರೆ ಸಾಕಾಗುವುದಿಲ್ಲ. ಆದಿವಾಸಿಗಳ, ದಲಿತರ ಮೇಲೆ ಇಂಥ ಕೃತ್ಯಗಳು ನಡೆದಾಗ ಸಹಿಸುವುದಕ್ಕೆ ಸಾಧ್ಯವೇ ಇಲ್ಲ’ ಎಂದು ಅವರು ಹೇಳಿದ್ದಾರೆ.

‘ದೀನ–ದಲಿತರ ಮೇಲೆ ದೌರ್ಜನ್ಯ ಎಸಗುವ ಮನಸ್ಥಿತಿಯನ್ನು ಹತ್ತಿಕ್ಕಲು ಕ್ರಮಗಳನ್ನು ಕೈಗೊಳ್ಳಬೇಕಿದೆ. ದೌರ್ಜನ್ಯ ಎಸಗಿದವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ನಂಬಿಕೆಯನ್ನು ದೀನ–ದಲಿತರ ಮನಸ್ಸಿನಲ್ಲಿ ಮೂಡಿಸಬೇಕಿದೆ’ ಎಂದು ಪೈಲಟ್ ಹೇಳಿದ್ದಾರೆ.

‘ಯಾರಿಗೇ ಆಗಲಿ ಇಂಥ ಅನ್ಯಾಯವಾದಾಗ ನಾವು ನ್ಯಾಯದ ಪರ ದನಿಯೆತ್ತಬೇಕು. ಈಗ ನಮ್ಮದೇ ಸರ್ಕಾರವಿದೆ. ನಾವು ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ’ ಎಂದು ಅವರು ಹೇಳಿದ್ದಾರೆ.

ಕುಡಿಯುವ ನೀರಿನ ಮಡಕೆ ಮುಟ್ಟಿದ್ದಕ್ಕೆ ಖಾಸಗಿ ಶಾಲಾ ಶಿಕ್ಷಕರೊಬ್ಬರು 9 ವರ್ಷದ ಪರಿಶಿಷ್ಟ ಜಾತಿಯ ಬಾಲಕ ಇಂದ್ರ ಮೇಘವಾಲ್‌ ಎಂಬುವನನ್ನು ಥಳಿಸಿದ್ದರು. ಶಿಕ್ಷಕರ ದೌರ್ಜನ್ಯಕ್ಕೆ ತುತ್ತಾದ ಬಾಲಕ ಕಳೆದ ಶನಿವಾರ ಮೃತಪಟ್ಟಿದ್ದ.

ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ದಲಿತ ಬಾಲಕನ ಸಾವು ಖಂಡಿಸಿ ರಾಜಸ್ಥಾನದ ಬಾರಾನ್ ನಗರಸಭೆಯ 12 ಮಂದಿ ಕಾಂಗ್ರೆಸ್ ಸದಸ್ಯರು ರಾಜೀನಾಮೆ ಸಲ್ಲಿಸಿದ್ದರು. ಶಾಸಕ ಪನಾ ಚಂದ್ ಮೇಘವಾಲ್ ರಾಜೀನಾಮೆ ಬೆನ್ನಲ್ಲೇ ನಗರಸಭೆ ಸದಸ್ಯರೂ ಸಹ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು