ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈ’ ಗೆಲುವು ತಡೆಗೆ ‘ಕಮಲ’ ತಂತ್ರ

ರಾಜ್ಯಸಭೆ ಚುನಾವಣೆ: ಬಿಜೆಪಿಯಿಂದ ಹೆಚ್ಚುವರಿ ಅಭ್ಯರ್ಥಿಗಳು ಕಣಕ್ಕೆ, ಪಕ್ಷೇತರರಿಗೆ ಬೆಂಬಲ
Last Updated 31 ಮೇ 2022, 19:30 IST
ಅಕ್ಷರ ಗಾತ್ರ

ನವದೆಹಲಿ: ವಿರೋಧ ಪಕ್ಷಗಳು ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್‌ಗೆ ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲುವ ಅವಕಾಶ ಕುಗ್ಗಿಸುವುದಕ್ಕಾಗಿ ಬಿಜೆಪಿ ವಿವಿಧ ಕಾರ್ಯತಂತ್ರಗಳನ್ನು ಅನುಸರಿಸಿದೆ. ಮಹಾರಾಷ್ಟ್ರ, ಕರ್ನಾಟಕದಲ್ಲಿ ಹೆಚ್ಚುವರಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಹರಿಯಾಣ ಮತ್ತು ರಾಜಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿಗಳಿಗೆ ಬೆಂಬಲ ನೀಡಿದೆ. ಜೂನ್‌ 10ರಂದು ಮತದಾನ ನಡೆಯಲಿದೆ. ಈ ಚುನಾವಣೆಯಲ್ಲಿ ಶಾಸಕರನ್ನು ಖರೀದಿಸಲು ಬಿಜೆಪಿ ಮುಂದಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಈ ರಾಜ್ಯಗಳಲ್ಲಿ ತನಗೆ ಗೆಲ್ಲುವ ಅವಕಾಶ ಇರುವುದಕ್ಕಿಂತ ಹೆಚ್ಚಿನ ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಈ ಸ್ಥಾನಗಳನ್ನು ಗೆಲ್ಲುವ ಅವಕಾಶ ವಿರೋಧ ಪಕ್ಷಗಳಿಗೆ ಇದೆ. ಆದರೆ, ರಾಜಕೀಯ ತಂತ್ರಗಾರಿಕೆ ಮೂಲಕ ವಿರೋಧ ಪಕ್ಷಗಳ ಗೆಲುವನ್ನು ತಡೆಯಬಹುದು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ.

ಒಟ್ಟು 55 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬಿಜೆಪಿ 21 ಮತ್ತು ಕಾಂಗ್ರೆಸ್‌ 10 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ.

ಕಾಂಗ್ರೆಸ್‌ನ ಮಾಜಿ ಮುಖಂಡ ವಿನೋದ್‌ ಶರ್ಮಾ ಅವರ ಮಗ, ಐಟಿವಿ ನೆಟ್‌ವರ್ಕ್‌ನ ವ್ಯವಸ್ಥಾಪಕ ನಿರ್ದೇಶಕ ಕಾರ್ತಿಕೇಯ ಶರ್ಮಾ ಅವರನ್ನು ಹರಿಯಾಣದಿಂದ ಕಣಕ್ಕೆ ಇಳಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಹಾಗೆಯೇ, ಝೀ ಸಮೂಹದ ಮುಖ್ಯಸ್ಥ ಸುಭಾಷ್‌ ಚಂದ್ರ ಅವರನ್ನು ಹರಿಯಾಣದ ಬದಲು ರಾಜಸ್ಥಾನದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಮಾಡಲಾಗಿದೆ. ಇವರಿಬ್ಬರಿಗೂ ಬಿಜೆಪಿ ಬೆಂಬಲ ಇದೆ. ಇದು ಕಾಂಗ್ರೆಸ್‌ನ ಗೆಲುವನ್ನು ತಡೆಯುವ ಯತ್ನ ಎನ್ನಲಾಗಿದೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಅಜಯ ಮಾಕನ್‌ ಅವರನ್ನು ಹರಿಯಾಣದಿಂದ ಕಣಕ್ಕೆ ಇಳಿಸಲಾಗಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಕಿಶನ್‌ ಲಾಲ್‌ ಪನ್ವರ್‌. ಶರ್ಮಾ ಅವರು ಪಕ್ಷೇತರ ಅಭ್ಯರ್ಥಿ. ಗೆಲ್ಲುವ ಅಭ್ಯರ್ಥಿಗೆ 31 ಮತಗಳ ಅಗತ್ಯ ಇದೆ.

ಹರಿಯಾಣದಲ್ಲಿ ಇರುವ ಕಾಂಗ್ರೆಸ್‌ ಶಾಸಕರ ಸಂಖ್ಯೆ 31. ಆದರೆ, ಶಾಸಕ ಕುಲದೀಪ್‌ ಬಿಷ್ಣೋಯಿ ಅವರು ಅಸಮಾಧಾನಗೊಂಡಿದ್ದಾರೆ. ಅವರಿಗೆ 10ಕ್ಕೂ ಹೆಚ್ಚು ಶಾಸಕರ ಬೆಂಬಲ ಇದೆ ಎನ್ನಲಾಗಿದೆ. ಹೀಗಾಗಿ, ಕಾಂಗ್ರೆಸ್‌ ಸಂಕಷ್ಟಕ್ಕೆ ಒಳಗಾಗಬಹುದು. ಬಿಷ್ಣೋಯಿ ಅವರು ಮುಖ್ಯಮಂತ್ರಿ ಮನೋಹರ ಲಾಲ್‌ ಕಟ್ಟರ್‌ ಅವರನ್ನು ಕಳೆದ ವಾರ ಭೇಟಿಯಾಗಿದ್ದರು.

ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ತಮ್ಮಲ್ಲಿರುವ ಹೆಚ್ಚುವರಿ ಮತಗಳನ್ನು ಶರ್ಮಾ ಅವರಿಗೆ ವರ್ಗಾಯಿಸಬಹುದು. ಅದರ ಬಳಿಕವೂ ಶರ್ಮಾ ಅವರಿಗೆ ಐದು ಮತಗಳ ಅಗತ್ಯ ಇದೆ.

2014ರಲ್ಲಿ ಕಾಂಗ್ರೆಸ್‌ನಿಂದ ಉಚ್ಚಾಟನೆಗೊಂಡ ವಿನೋದ್ ಶರ್ಮಾ ಅವರಿಗೆ ಎಲ್ಲ ಪಕ್ಷಗಳಲ್ಲಿಯೂ ಹಿತೈಷಿಗಳಿದ್ದಾರೆ. ಅವರ ರಾಜಕೀಯ ಅನು
ಭವವು ಕಾರ್ತಿಕೇಯ ಅವರ ಗೆಲುವಿಗೆ ನೆರವಾದೀತು ಎನ್ನಲಾಗುತ್ತಿದೆ.

ರಣದೀಪ್ ಸಿಂಗ್ ಸುರ್ಜೇವಾಲಾ, ಮುಕುಲ್ ವಾಸ್ನಿಕ್ ಮತ್ತು ಪ್ರಮೋದ್ ತಿವಾರಿ ಅವರನ್ನು ಕಾಂಗ್ರೆಸ್‌, ರಾಜಸ್ಥಾನದಿಂದ ಕಣಕ್ಕೆ ಇಳಿಸಿದೆ. ಬಿಜೆಪಿ ಈ ರಾಜ್ಯದಲ್ಲಿ ತನ್ನ ಒಬ್ಬ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ ಮತ್ತು ಪಕ್ಷೇತರ ಅಭ್ಯರ್ಥಿ ಸುಭಾಷ್ ಚಂದ್ರ ಅವರಿಗೆ ಬೆಂಬಲ ಘೋಷಿಸಿದೆ. ಆಯ್ಕೆಯಾಗಬೇಕಾದರೆ ಒಬ್ಬ ಅಭ್ಯರ್ಥಿ 41 ಮತಗಳನ್ನು ಪಡೆಯಬೇಕು. 126 ಬಿಜೆಪಿಯೇತರ ಶಾಸಕರು ಇರುವ ಕಾರಣ ಮೂವರು ಅಭ್ಯರ್ಥಿಗಳನ್ನು ಸುಲಭವಾಗಿ ರಾಜ್ಯಸಭೆಗೆ ಕಳುಹಿ
ಸಬಹುದು ಎಂದು ಕಾಂಗ್ರೆಸ್‌ ಭಾವಿಸಿದೆ.

ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿ, ಉಳಿಯುವ ತನ್ನ ಹೆಚ್ಚುವರಿ 30 ಮತಗಳನ್ನು ಬಿಜೆಪಿಯು ಸುಭಾಷ್ ಚಂದ್ರ ಅವರಿಗೆ ನೀಡಬಹುದು. ಅಂತಹ ಸಂದರ್ಭ ಎದುರಾದರೆ, ಸುಭಾಷ್‌ ಚಂದ್ರ ಅವರು ಆಯ್ಕೆಯಾಗಲು ಇನ್ನೂ 11 ಮತಗಳ ಅಗತ್ಯ ಬೀಳುತ್ತದೆ. ಪಕ್ಷೇತರ ಮತ್ತು ಸಣ್ಣ–ಪುಟ್ಟ ಪಕ್ಷಗಳ 13 ಶಾಸಕರು ಸದನದಲ್ಲಿ ಇದ್ದು, ಅವರನ್ನು ಸೆಳೆಯಬಹುದು ಎಂದು ಬಿಜೆಪಿ ಯೋಜಿಸಿದೆ.

ಕಾಂಗ್ರೆಸ್‌ ಕಣಕ್ಕೆ ಇಳಿಸಿರುವ ಮೂವರು ಅಭ್ಯರ್ಥಿಗಳೂ ಹೊರರಾಜ್ಯದವರು. ಇದು ಕಾಂಗ್ರೆಸ್‌ಗೆ ಮುಳುವಾಗುವ ಸಾಧ್ಯತೆ ಇದೆ.

ಮಹಾರಾಷ್ಟ್ರದಿಂದ ಇಬ್ಬರನ್ನು ರಾಜ್ಯಸಭೆಗೆ ಕಳುಹಿಸಲು ಬೇಕಾದಷ್ಟು ಮತಗಳು ಬಿಜೆಪಿ ಬಳಿ ಇವೆ. ಆದರೆ, ಮೂವರು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಆಡಳಿತಾರೂಢ ಶಿವಸೇನಾವು ಒಬ್ಬ ಅಭ್ಯರ್ಥಿಯನ್ನು ರಾಜ್ಯಸಭೆಗೆ ಕಳುಹಿಸಬಹುದು ಮತ್ತು ಎರಡನೇ ಅಭ್ಯರ್ಥಿಯನ್ನು ಕಳುಹಿಸಲು ಅದಕ್ಕೆ ಮಿತ್ರಪಕ್ಷಗಳ ಬೆಂಬಲದ ಅವಶ್ಯಕತೆ ಇದೆ. ಆದರೆ ಬಿಜೆಪಿಯು, ಆಡಳಿತ ಮೈತ್ರಿಕೂಟದ ಶಾಸಕರನ್ನು ತನ್ನತ್ತ ಸೆಳೆದುಕೊಳ್ಳಲು ಯತ್ನಿಸುತ್ತಿದೆ ಎಂದು ಶಿವಸೇನಾದ ಸಂಜಯ್ ರಾವುತ್ ಆರೋಪಿಸಿದ್ದಾರೆ.

‘ಮೂರು ಸ್ಥಾನ ಗೆದ್ದೇ ಗೆಲ್ಲುತ್ತೇವೆ’

‘ನಾವು ಮೂರು ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ’ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಬಿಜೆಪಿ ಇಂತಹ ಆಟವನ್ನೇಕೆ ಆಡುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. 15 ವರ್ಷಗಳ ಹಿಂದೆಯೂ ಬಿಜೆಪಿಯು, ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಘೋಷಿಸಿತ್ತು. ಆದರೆ ಪಕ್ಷೇತರ ಅಭ್ಯರ್ಥಿಗೆ ಒಂದೂ ಮತ ಬಾರದ ಕಾರಣ, ಬೆಂಬಲವನ್ನು ವಾಪಸ್ ಪಡೆದಿತ್ತು. ಈ ಬಾರಿ ಅವರು ಮತಗಳನ್ನು ಎಲ್ಲಿಂದ ತರುತ್ತಾರೆ? ಅವರು ಶಾಸಕರ ಖರೀದಿಯಲ್ಲಿ ತೊಡಗಿದ್ದಾರೆ. ಇದು ಒಳ್ಳೆಯ ಸಂಪ್ರದಾಯವಲ್ಲ’ ಎಂದು ಗೆಹಲೋತ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT