ಶುಕ್ರವಾರ, ಆಗಸ್ಟ್ 19, 2022
27 °C

ರಾಜ್ಯಸಭೆ ಉಪ ಸಭಾಪತಿಯಾಗಿ ಹರಿವಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಜ್ಯಸಭೆಯ ಉಪ ಸಭಾಪತಿಯಾಗಿ ಜೆಡಿಯುನ ಹರಿವಂಶ ಸಿಂಗ್‌ ಅವರು ಸೋಮವಾರ ಆಯ್ಕೆ ಆಗಿದ್ದಾರೆ. ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಆರ್‌ಜೆಡಿಯ ಮನೋಜ್‌ ಕೆ. ಝಾ ಅವರು ಕಣದಲ್ಲಿದ್ದರು. ಎನ್‌ಡಿಎ ಅಭ್ಯರ್ಥಿಯ ವಿರುದ್ಧ ಗೆಲ್ಲುವಷ್ಟು ಮತಗಳು ಇಲ್ಲದ ಕಾರಣ ಮತ ವಿಭಜನೆಗೆ ವಿರೋಧ ಪಕ್ಷಗಳು ಕೋರಲಿಲ್ಲ. ಹಾಗಾಗಿ, ಹರಿವಂಶ ಅವರು ಧ್ವನಿಮತದಿಂದ ಆಯ್ಕೆ ಆಗಿದ್ದಾರೆ ಎಂದು ಘೋಷಿಸಲಾಯಿತು. 

ಹರಿವಂಶ ಅವರು 2018ರ ಆಗಸ್ಟ್‌ 8ರಂದು ರಾಜ್ಯಸಭೆಯ ಉಪಸಭಾಪತಿಯಾಗಿ ಮೊದಲ ಬಾರಿಗೆ ಆಯ್ಕೆ ಆಗಿದ್ದರು. ಈ ವರ್ಷದ ಆರಂಭದಲ್ಲಿ ರಾಜ್ಯಸಭೆ ಸದಸ್ಯತ್ವದ ಅವಧಿ ಪೂರ್ಣಗೊಳ್ಳುವವರೆಗೆ ಈ ಸ್ಥಾನದಲ್ಲಿ ಅವರು ಇದ್ದರು. ಈಚೆಗೆ, ಅವರು ರಾಜ್ಯಸಭೆಗೆ ಪುನರಾಯ್ಕೆ ಆಗಿದ್ದಾರೆ. 

ನೂತನ ಉಪಸಭಾಪತಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದರು. ರಾಜಕಾರಣ ಮತ್ತು ಪತ್ರಿಕೋದ್ಯಮ ಎರಡೂ ಕ್ಷೇತ್ರಗಳಲ್ಲಿ ಅವರು ಪ್ರಾಮಾಣಿಕ ವ್ಯಕ್ತಿ ಎಂದು ಮೋದಿ ಬಣ್ಣಿಸಿದರು. ರಾಜಕೀಯ ಪ್ರವೇಶಕ್ಕೆ ಮುನ್ನ ಅವರು ಪತ್ರಕರ್ತರಾಗಿದ್ದರು. 

‘ಸದನ ನಡೆಸುವಲ್ಲಿ ಆಟಗಾರರಗಿಂತ (ಸಂಸದರು) ಅಂಪೈರ್‌ಗೆ (ಸಭಾಪತಿ) ಸವಾಲು ಹೆಚ್ಚು. ಸಂಸದರು ನಿಯಮಗಳಿಗೆ ಬದ್ಧರಾಗಿ ಇರುವಂತೆ ನೋಡಿಕೊಳ್ಳುವುದು ಸವಾಲು. ಅವರು ಮೊದಲ ಬಾರಿ ಆಯ್ಕೆಯಾದಾಗ ಕೆಲವರಿಗೆ ಅನುಮಾನ ಇತ್ತು. ಆದರೆ, ಸದನವನ್ನು ನಿಷ್ಪಕ್ಷಪಾತವಾಗಿ ನಡೆಸುವ ಮೂಲಕ ಎಲ್ಲರ ವಿಶ್ವಾಸವನ್ನು ಅವರು ಗಳಿಸಿದ್ದಾರೆ’ ಎಂದು ಮೋದಿ ಹೇಳಿದ್ದಾರೆ. 

‘ಉಪಸಭಾಪತಿ ಸ್ಥಾನಕ್ಕೆ ಇಬ್ಬರ ನಡುವೆ ನಡೆದ ಸ್ಪರ್ಧೆಯು ವ್ಯಕ್ತಿಗಳ ನಡುವಣ ಹೋರಾಟ ಅಲ್ಲ, ಅದು ವಿಚಾರಗಳ ಸಂಘರ್ಷ. ನಾವು ಮಧ್ಯಮ ಹಾದಿಯನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಇದು ನಮ್ಮ ಪ್ರಜಾಪ್ರಭುತ್ವದ ಚೆಲುವು’ ಎಂದು ಹರಿವಂಶ ಅವರಿಗೆ ಅಭಿನಂದನೆ ಸಲ್ಲಿಸುತ್ತಾ ಝಾ ಅವರು ಹೇಳಿದರು. 

ಇಬ್ಬರು ಒಳ್ಳೆಯ ವ್ಯಕ್ತಿಗಳು ಅಭ್ಯರ್ಥಿಗಳಾಗಿದ್ದರು. ಆದರೆ, ಒಬ್ಬರಿಗೆ ಮಾತ್ರ ಗೆಲುವು ಸಾಧ್ಯ ಎಂದು ಸಭಾಪತಿ ವೆಂಕಯ್ಯ ನಾಯ್ಡು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು