ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆ: 2 ಮಸೂದೆಗೆ ಒಪ್ಪಿಗೆ, ಬೆಲೆ ಏರಿಕೆ: ಚರ್ಚೆ ಇಂದು

Last Updated 1 ಆಗಸ್ಟ್ 2022, 21:00 IST
ಅಕ್ಷರ ಗಾತ್ರ

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದ ಎರಡು ವಾರಗಳ ಕಲಾಪವು ಸಂಪೂರ್ಣವಾಗಿ ವ್ಯರ್ಥವಾದ ಬಳಿಕ, ರಾಜ್ಯಸಭೆಯಲ್ಲಿ ಎರಡು ಮಸೂದೆಗಳಿಗೆ ಸೋಮವಾರ ಅನುಮೋದನೆ ಸಿಕ್ಕಿದೆ. ಸಮೂಹ ನಾಶದ ಶಸ್ತ್ರಾಸ್ತ್ರಗಳಿಗೆ ಹಣ ನೀಡಿಕೆ ನಿಷೇಧ ಮತ್ತು ಅಂಟಾರ್ಕ್ಟಿಕ್‌ ಮಸೂದೆಗೆ ಒಪ್ಪಿಗೆ ಕೊಡಲಾಗಿದೆ. ಅಂಟಾರ್ಕ್ಟಿಕ್‌ ಪ್ರದೇಶದಲ್ಲಿರುವ ಭಾರತದ ಸಂಶೋಧನಾ ಸಂಸ್ಥೆಗಳ ಪ್ರದೇಶಕ್ಕೆ ಭಾರತದ ಕಾನೂನು ಅನ್ವಯಿಸುವುದಕ್ಕಾಗಿ ಅಂಟಾರ್ಕ್ಟಿಕ್‌ ಮಸೂದೆ ರೂಪಿಸಲಾಗಿದೆ.

ಲೋಕಸಭೆಯಲ್ಲಿ ಈ ಮಸೂದೆಗಳು ಈಗಾಗಲೇ ಅಂಗೀಕಾರ ಆಗಿವೆ.

ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದವು. ಆದರೆ, ಕಲಾಪಕ್ಕೆ ಸಂಪೂರ್ಣವಾಗಿ ಅಡ್ಡಿಪಡಿಸದಿರಲು ವಿರೋಧ ಪಕ್ಷಗಳು ನಿರ್ಧರಿಸಿದ ಕಾರಣ ಎರಡು ಮಸೂದೆಗಳು ಅಂಗೀಕಾರ ಆದವು.

ಬೆಲೆ ಏರಿಕೆಯ ಕುರಿತು ಚರ್ಚೆ ಆಗಲೇಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದ ಕಾರಣ ಮೊದಲ ಎರಡು ವಾರಗಳ ಕಲಾಪವು ವ್ಯರ್ಥವಾಗಿದೆ. ಎರಡು ವಾರಗಳಲ್ಲಿ 11.08 ತಾಸು ಮಾತ್ರ ಕಲಾಪ ನಡೆದಿದೆ. ಈ ಅವಧಿಯಲ್ಲಿ ಒಂದು ಮಸೂದೆಯೂ ಅಂಗೀಕಾರ ಆಗಿಲ್ಲ.

ಬೆಲೆ ಏರಿಕೆ, ಅಗ್ನಿಪಥ ಯೋಜನೆ, ರಾಜ್ಯಸಭಾ ಸದಸ್ಯ ಸಂಜಯ ರಾವುತ್‌ ಬಂಧನಕ್ಕೆ ಸಂಬಂಧಿಸಿ, ಬೆಳಿಗ್ಗೆ ಕಲಾಪ ಆರಂಭವಾದಾಗ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದವು. ಹೀಗಾಗಿ, ಶೂನ್ಯವೇಳೆಯನ್ನು 50 ನಿಮಿಷಗಳಲ್ಲಿ ನಿಲ್ಲಿಸಬೇಕಾಯಿತು.

ಮಧ್ಯಾಹ್ನ ನಂತರವೂ ವಿರೋಧ ಪಕ್ಷಗಳ ಪ್ರತಿಭಟನೆ ಮುಂದುವರಿಯಿತು. ಆದರೆ ಎರಡು ಮಸೂದೆಗಳನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು.

ಬೆಲೆ ಏರಿಕೆ: ಚರ್ಚೆ ಇಂದು

ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತಂತೆ ರಾಜ್ಯಸಭೆಯಲ್ಲಿ ಮಂಗಳವಾರ ಚರ್ಚೆ ನಡೆಸಲು ಸರ್ಕಾರ ಸಮ್ಮತಿಸಿದೆ.

ವಿರೋಧ ಪಕ್ಷದ ಸದಸ್ಯರು ರಾಜ್ಯಸಭೆಯಲ್ಲಿ ಸೋಮವಾರವೂ ಗದ್ದಲ ನಡೆಸಿದರು. ಆಗ ಸಭಾಪತಿ ಪೀಠದಲ್ಲಿದ್ದ ಭುವನೇಶ್ವರ ಕಾಲಿತಾ ಅವರು ಶಾಂತರಾಗುವಂತೆ ಸದಸ್ಯರನ್ನು ಕೋರಿದರು. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಈ ಸಂದರ್ಭದಲ್ಲಿ ಎದ್ದು ನಿಂತು, ವಿವಿಧ ವಿಚಾರಗಳ ಕುರಿತ ಚರ್ಚೆಗೆ ಹಲವು ನೋಟಿಸ್‌ ನೀಡಿದ್ದರೂ ಸರ್ಕಾರ ಅದನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದರು.

ಮಧ್ಯಾಹ್ನ 12.40ಕ್ಕೆ ಕಲಾಪವನ್ನು ಮುಂದೂಡಿದಾಗ, ವಿರೋಧ ಪಕ್ಷದ ನಾಯಕರ ಬೇಡಿಕೆಯಂತೆ, ಬೆಲೆ ಏರಿಕೆ ಕುರಿತು ಚರ್ಚೆಗೆ ಸರ್ಕಾರ ಒಪ್ಪಿದೆ ಎಂದು ಸದನದಲ್ಲಿ ಆಡಳಿತ ಪಕ್ಷದ ನಾಯಕ ಪೀಯೂಷ್‌ ಗೋಯಲ್‌ ತಿಳಿಸಿದ್ದಾರೆ ಎಂದು ಸಭಾಪತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT