ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಇನ್ನೂ ಕನಿಷ್ಟ ಬೆಂಬಲ ಬೆಲೆಯ ದೊಡ್ಡ ಸಮಸ್ಯೆ ಮುಂದುವರಿದಿದೆ: ಟಿಕಾಯತ್

Last Updated 17 ಡಿಸೆಂಬರ್ 2021, 2:42 IST
ಅಕ್ಷರ ಗಾತ್ರ

ನೋಯ್ಡಾ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿ ಮಾಡುವ ದೊಡ್ಡ ಸಮಸ್ಯೆಯು ಬಾಕಿ ಉಳಿದಿದೆ ಎಂದಿರುವ ರೈತ ಮುಖಂಡ ರಾಕೇಶ್ ಟಿಕಾಯತ್, ಕೇಂದ್ರ ಸರ್ಕಾರದ ಉದ್ದೇಶ ಮತ್ತು ನೀತಿಗಳನ್ನು ಪ್ರಶ್ನಿಸಿದ್ದಾರೆ.

ಮುಜಾಫರ್‌ನಗರದಲ್ಲಿ ಗುರುವಾರ ಮಾತನಾಡಿದ ಭಾರತೀಯ ಕಿಸಾನ್‌ ಒಕ್ಕೂಟದ (ಬಿಕೆಯು) ವಕ್ತಾರ ಟಿಕಾಯತ್, ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ಮುಂದುವರಿಸಿದ್ದು, 'ದೇಶದಲ್ಲಿ ಇನ್ನು ಎಂಎಸ್‌ಪಿಯ ದೊಡ್ಡ ಸಮಸ್ಯೆ ಮುಂದುವರಿದಿದೆ. ಒಂದು ವೇಳೆ ಎಂಎಸ್‌ಪಿಯನ್ನು ನೀಡಿದ್ದೇ ಆದಲ್ಲಿ ಅದರಿಂದ ಹೆಚ್ಚಿನ ಪರಿಹಾರ ಸಿಕ್ಕಂತಾಗುತ್ತದೆ' ಎಂದರು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿತ್ತು. ಅವುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಸಂಯುಕ್ತ ಕಿಸಾನ್‌ ಒಕ್ಕೂಟದ ಅಡಿಯಲ್ಲಿ ರೈತರು ಒಂದು ವರ್ಷಕ್ಕೂ ಹೆಚ್ಚು ಕಾಲ ದೆಹಲಿಯ ಗಡಿ ಭಾಗಗಳಲ್ಲಿ ಪ್ರತಿಭಟನೆ ನಡೆಸಿದ್ದರು.

ಈ ವರ್ಷ ನವೆಂಬರ್‌ 29ರಂದು ಕೇಂದ್ರ ಸರ್ಕಾರವು ಕೃಷಿ ಕಾಯ್ದೆಗಳನ್ನು ಹಿಂಪಡೆಯಿತು. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಗೆ ಸಂಬಂಧಿಸಿದಂತೆ ಸಮಿತಿ ರಚಿಸುವುದಾಗಿ ಸರ್ಕಾರವು ಪತ್ರ ಮುಖೇನ ರೈತರಿಗೆ ಭರವಸೆ ನೀಡಿದೆ. ಹೀಗಾಗಿ ರೈತರು ಪ್ರತಿಭಟನೆ ಕೈಬಿಟ್ಟು ದೆಹಲಿಯ ಸಿಂಘು, ಗಾಜೀಪುರ ಹಾಗೂ ಟಿಕ್ರಿ ಗಡಿ ಭಾಗಗಳಿಂದ ತಮ್ಮ ರಾಜ್ಯಗಳಿಗೆ ತೆರಳಿದ್ದಾರೆ.

'ಬೆಳೆ ಅಥವಾ ಕೃಷಿ ಮಾಡಲು ಯಾವುದೇ ತೊಂದರೆ ಇಲ್ಲ. ನೀವು (ರೈತರು) ಬೆಳೆಗಳನ್ನು ಬೆಳೆಯಲು ಜಮೀನಿನಲ್ಲಿ ಕಷ್ಟಪಟ್ಟು ಶ್ರಮಿಸುತ್ತೀರಿ, ಹಾಗಾಗಿ ನಿಮ್ಮ ಕಡೆಯಿಂದ ಯಾವುದೇ ಕೊರತೆಯಿಲ್ಲ. ಏನಾದರೂ ಲೋಪವಾಗಿದ್ದರೆ ಅದು ಸರ್ಕಾರಗಳ ಕಡೆಯಿಂದ ಮಾತ್ರ. ಇದನ್ನು ದೇಶದ ರೈತರು ಮತ್ತು ಯುವಕರು ಈಗ ಅರ್ಥಮಾಡಿಕೊಂಡಿದ್ದಾರೆ' ಎಂದರು.

'ಏನಾದರೂ ಸಮಸ್ಯೆ ಇದ್ದದ್ದೇ ಆದರೆ, ಅದು ದೆಹಲಿಯಲ್ಲಿ ನೀತಿ ರೂಪಿಸುವವರಿಂದ ಮಾತ್ರ. ರೈತರು ತಮ್ಮ ಜವಾಬ್ದಾರಿಯನ್ನು ಸರಿಯಾಗಿಯೇ ನಿಭಾಯಿಸುತ್ತಿದ್ದಾರೆ' ಎಂದು ಹೇಳಿದರು.

383 ದಿನಗಳ ನಂತರ ಬುಧವಾರ ತಡರಾತ್ರಿ ಮುಜಾಫರ್‌ನಗರಕ್ಕೆ ವಾಪಸಾದ ಟಿಕಾಯತ್, 'ಜಮೀನ್ ಮತ್ತು ಜಮೀರ್' (ಭೂಮಿ ಮತ್ತು ಹೃದಯ) ಹೋರಾಟ ಮುಂದುವರಿದಿರುವುದರಿಂದ 'ಯುದ್ಧಕ್ಕೆ ಸಿದ್ದರಾಗಿರಿ' ಎಂದು ಯುವಕರಿಗೆ ಕರೆ ನೀಡಿದರು.

ಇದಲ್ಲದೆ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅವರು, ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಎರಡು ದಿನ ರಾಷ್ಟ್ರಾದ್ಯಂತ ಮುಷ್ಕರಕ್ಕೆ ಕರೆ ನೀಡಿರುವ ಬ್ಯಾಂಕ್‌ ಉದ್ಯೋಗಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. 'ಬ್ಯಾಂಕಿಂಗ್ ವೃತ್ತಿಪರರು ಕರೆ ನೀಡಿರುವ ಎರಡು ದಿನಗಳ ಮುಷ್ಕರಕ್ಕೆ ಸಂಪೂರ್ಣವಾಗಿ ಬೆಂಬಲ ನೀಡುತ್ತಿದ್ದೇನೆ. ಅಲ್ಲದೆ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ನಡೆಯುತ್ತಿರುವ ಈ ಮುಷ್ಕರದಲ್ಲಿ ದೇಶದ ಜನರು ಭಾಗಿಯಾಗಬೇಕೆಂದು ಮನವಿ ಮಾಡುತ್ತೇನೆ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT