ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆ ಪ್ರಕರಣ ತೆಗೆದರೆ, ರಾಣೆ ಕುಂಡಲಿ ಬಿಚ್ಚಿಡುತ್ತೇವೆ: ಸಂಜಯ್ ರಾವುತ್

Last Updated 28 ಆಗಸ್ಟ್ 2021, 12:59 IST
ಅಕ್ಷರ ಗಾತ್ರ

ಮುಂಬೈ, ನಾಸಿಕ್: ‘ಕೇಂದ್ರ ಸಚಿವ ನಾರಾಯಣ ರಾಣೆ ಅವರ ಅಹಂ ಮತ್ತು ಪ್ರತೀಕಾರ ತೀರಿಸಿಕೊಳ್ಳುವ ಮನೋಭಾವದಿಂದಾಗಿ ಬಿಜೆಪಿಯು ಹಿನ್ನೆಡೆ ಅನುಭವಿಸುವಂತಾಗಿದ್ದು, ಕೇಂದ್ರದ ಸಾಧನೆ ಪ್ರಚಾರದ ‘ಜನ ಆಶೀರ್ವಾದ ಯಾತ್ರೆ’ ಕುರಿತು ಪ್ರಧಾನಿ ನರೇಂದ್ರ ಮೋದಿ ನೀಡಿರುವ ನಿರ್ದೇಶನಗಳನ್ನು ರಾಣೆ ಪಾಲಿಸುತ್ತಿಲ್ಲ’ ಎಂದು ಶಿವಸೇನಾದ ಸಂಸದ ಸಂಜಯ್ ರಾವುತ್ ಶನಿವಾರ ಆರೋ‍ಪಿಸಿದ್ದಾರೆ.

ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾವುತ್, ‘ರಾಣೆ ಅವರು ಹಳೆಯ ಪ್ರಕರಣಗಳನ್ನು ಬಯಲಿಗೆಳೆಯುತ್ತೇನೆ ಎಂದಿದ್ದಾರೆ. ಆದರೆ, ಶಿವಸೇನಾದ ಬಳಿ ರಾಣೆ ಅವರ ಕುಂಡಲಿಯೇ ಇದೆ. ನಾವೂ ‘ಸಂದೂಕ’ವನ್ನು ಬಿಚ್ಚಿಡುತ್ತೇವೆ’ ಎಂದು ತಿರುಗೇಟು ನೀಡಿದರು.

‘ರಾಣೆ ಅವರ ಮಾನಸಿಕ ಆರೋಗ್ಯ ಸರಿಯಲ್ಲ. ಅವರು ಯೋಗಾಭ್ಯಾಸ ಮಾಡುವುದು ಒಳಿತು’ ಎಂದು ಸಲಹೆ ನೀಡಿದ ರಾವತ್, ಈ ನಿಟ್ಟಿನಲ್ಲಿ ಶಿವಸೇನಾ ಕಾರ್ಯಕರ್ತರು ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುವರು’ ಎಂದರು.

‘ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕೆನ್ನೆಗೆ ಬಾರಿಸುತ್ತೇನೆ’ ಎಂದು ಹೇಳಿಕೆ ನೀಡಿದ್ದ ರಾಣೆ ಅವರನ್ನು ಮಂಗಳವಾರ ತಡರಾತ್ರಿ ಬಂಧಿಸಿ ನಂತರ ಬಿಡುಗಡೆ ಮಾಡಲಾಗಿತ್ತು. ನಂತರ ರಾಣೆ ಜೊತೆಗೆ ಕೇಂದ್ರದ ಸಚಿವರಾದ ಭಾರತಿ ಪವಾರ್, ಕಪಿಲ್ ಪಾಟೀಲ್, ಭಗವತ್ ಕರದ್ ಜನಾಶೀರ್ವಾದ ಯಾತ್ರೆಯ ಭಾಗವಾಗಿ ವಿವಿಧೆಡೆ ಪ್ರವಾಸ ಮಾಡುತ್ತಿದ್ದಾರೆ.

‘ಈ ಸಂದರ್ಭದಲ್ಲಿ ರಾಣೆ ಪ್ರಧಾನಿ ಅವರ ನಿರ್ದೇಶನದಂತೆ ಕೇಂದ್ರದ ಸಾಧನೆಗಳನ್ನು ಪ್ರಚಾರ ಮಾಡುವುದು ಬಿಟ್ಟು, ಶಿವಸೇನಾ, ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದಾರೆ. ಶೀಘ್ರದಲ್ಲೇ ಬಿಜೆಪಿಗೆ ತನ್ನ ತಪ್ಪು ಅರಿವಾಗಲಿದೆ’ ಎಂದೂ ರಾವತ್ ಹೇಳಿದ್ದಾರೆ.

‘ನಾವು ಬಿಜೆಪಿಯೊಂದಿಗೆ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದೇವೆ. ರಾಣೆ ಅವರ ಭುಜದ ಮೇಲೆ ಬಂದೂಕಿಟ್ಟು ಗುಂಡು ಹಾರಿಸಲು ಬಿಜೆಪಿ ಬಯಸಿದರೆ, ನಾವು ಸಿದ್ಧರಿದ್ದೇವೆ. ನಾವು (ಎನ್‌ಸಿಪಿ ಮುಖ್ಯಸ್ಥ) ಶರದ್ ಪವಾರ್ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದೇವೆ ಆದರೆ ಇಂದು ನಾವು ಒಟ್ಟಿಗೆ ಇದ್ದೇವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT