ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಿ: ನಿಗದಿಯಂತೇ ರಥಯಾತ್ರೆ, ಸೀಮಿತ ಭಕ್ತರಿಗೆ ಪ್ರವೇಶಾವಕಾಶ

Last Updated 10 ಜೂನ್ 2021, 11:48 IST
ಅಕ್ಷರ ಗಾತ್ರ

ಭುವನೇಶ್ವರ: ಒಡಿಶಾದ ಪುರಿ ಪಟ್ಟಣದಲ್ಲಿ ಹೆಸರಾಂತ ಜಗನ್ನಾಥ ರಥಯಾತ್ರೆ ಈ ವರ್ಷವೂ ಭಕ್ತರ ಅನುಪಸ್ಥಿತಿಯಲ್ಲಿ ನಿಗದಿಯಂತೆ ಜುಲೈ 12ರಂದು ನಡೆಯಲಿದೆ ಎಂದು ರಾಜ್ಯ ಸರ್ಕಾರ ಗುರುವಾರ ಪ್ರಕಟಿಸಿದೆ.

ಕೋವಿಡ್‌ ಮಾರ್ಗಸೂಚಿ ನಿಯಮಗಳ ಅನುಸಾರ ರಥಯಾತ್ರೆ ನಡೆಯಲಿದೆ. ಭಕ್ತರಿಗೆ ಪ್ರವೇಶ ಇರುವುದಿಲ್ಲ ಎಂದು ಸರ್ಕಾರ ಪ್ರಕಟಿಸಿದೆ. ಕೋವಿಡ್‌ ಕಾರಣದಿಂದ ಕಳೆದ ವರ್ಷವೂ ಭಕ್ತರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

ವಿಶೇಷ ಆಯುಕ್ತ (ಎಸ್‌ಆರ್‌ಸಿ) ಪಿ.ಕೆ.ಜೆನಾ ಅವರು, ಕಳೆದ ವರ್ಷ ಸುಪ್ರೀಂ ಕೋರ್ಟ್‌ ನೀಡಿದ್ದ ಎಲ್ಲ ಮಾರ್ಗಸೂಚಿಗಳ ಪರಿಧಿಯಲ್ಲಿಯೇ ಧಾರ್ಮಿಕ ವಿಧಿವಿಧಾನಗಳನ್ನು ಆಚರಿಸಲಿದ್ದೇವೆ ಎಂದು ತಿಳಿಸಿದರು.

ರಥಯಾತ್ರೆ ಅವಧಿಯಲ್ಲಿ ಕೋವಿಡ್ ನೆಗೆಟಿವ್‌ ಇರುವ, ಪೂರ್ಣವಾಗಿ ಲಸಿಕೆ ಪಡೆದಿರುವ ಆಯ್ದ ಕೆಲವರಿಗೆ ‘ಸ್ನಾನ ಪೂರ್ಣಿಮಾ’ ಹಾಗೂ ಇತರೆ ಆಚರಣೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ರಥಯಾತ್ರೆಯ ದಿನ ಪುರಿ ನಗರದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗುತ್ತದೆ. ಭಕ್ತರ ವೀಕ್ಷಣೆಗೆ ಅನುವಾಗುವಂತೆ ಟೆಲಿವಿಷನ್‌ ಮತ್ತು ವೆಬ್‌ಕಾಸ್ಟ್‌ ಮೂಲಕ ಪ್ರಸಾರಕ್ಕೆ ಕ್ರಮವಹಿಸಲಾಗುವುದು. ಒಂಭತ್ತು ದಿನ ನಡೆಯುವ ರಥ ಎಳೆಯುವ ಜಾತ್ರೆಗೆ ಕೇವಲ 500 ಜನರಿಗಷ್ಟೇ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಸಮರ್ಥ್ ವರ್ಮಾ ಅವರ ಪ್ರಕಾರ, ಪುರಿ ನಗರದಲ್ಲಿ ಸದ್ಯ ನಿತ್ಯ ಸರಾಸರಿ 300 ಕೋವಿಡ್‌ ಪ್ರಕರಣಗಳು ದಾಖಲಾಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT