ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಹೋರಾಟಕ್ಕೆ ವಿಪಕ್ಷಗಳ ಬೆಂಬಲ: ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಒತ್ತಾಯ

ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಪ್ರಧಾನಿ ಮೋದಿಗೆ ಒತ್ತಾಯ
Last Updated 27 ಸೆಪ್ಟೆಂಬರ್ 2021, 17:23 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ರೈತಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‌ಗೆ ಬಿಜೆಪಿಯೇತರ ರಾಜಕೀಯ ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ. ಕಾಂಗ್ರೆಸ್‌, ಎಎಪಿ, ಟಿಎಂಸಿ, ಬಿಎಸ್‌ಪಿ, ಎಡಪಕ್ಷಗಳು ಮತ್ತು ಟಿಡಿಪಿ ಬೆಂಬಲ ವ್ಯಕ್ತಪಡಿಸಿವೆ. ಪಕ್ಷಗಳ ಕಾರ್ಯಕರ್ತರು ದೇಶದ ಹಲವೆಡೆ ರೈತರ ಭಾರತ್ ಬಂದ್‌ಗೆ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆನಿರತ ರೈತರ ಜತೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತುಕತೆ ನಡೆಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ‘ರೈತರನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಬದಲು, ಸರ್ಕಾರವು ಅವರಿಗೆ ವೈರಿಗಳ ಬಣ್ಣ ಬಳಿಯುತ್ತಿದೆ’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

‘ಈ ಕಾನೂನುಗಳ ಎದುರು ರೈತರು ಅಸಹಾಯಕರಾಗಿದ್ದಾರೆ. ಹೀಗಾಗಿ ಅವರು ಭಾರತ್ ಬಂದ್‌ ನಡೆಸುತ್ತಿದ್ದಾರೆ. ಆ ರೈತರ ಜತೆಗೆ ನಾವು ನಿಲ್ಲಬೇಕಿದೆ. ದೇಶವು ಈಗಾಗಲೇ ಹತ್ತಾರು ಪ್ರಧಾನಿಗಳನ್ನು ಖಂಡಿದೆ. ಮೋದಿ ಅವರ ನಂತರ ಇನ್ನೂ ಹಲವಾರು ಪ್ರಧಾನಿಗಳು ಬರಲಿದ್ದಾರೆ. ನೀವು ಪ್ರಧಾನಿ ಆಗಿರುವ ಕಾರಣಕ್ಕೆ ಇಷ್ಟು ದಾರ್ಷ್ಟ್ಯ ತೋರಿಸಬೇಕಿಲ್ಲ. ಹೋಗಿ ರೈತರೊಂದಿಗೆ ಮಾತನಾಡಿ’ ಎಂದು ಕಾಂಗ್ರೆಸ್‌ ವಕ್ತಾರ ಪವನ್ ಖೇರಾ ಆಗ್ರಹಿಸಿದ್ದಾರೆ.

‘ದೇಶದ ಜನರು ಏನು ಹೇಳುತ್ತಿದ್ದಾರೆ ಎಂಬುದನ್ನು ಕೇಳುವುದು ನಿಮ್ಮ ಕರ್ತವ್ಯ. ದೇಶದ ಶೇ 60ರಷ್ಟು ಜನರು ಈಗ ಮಾತನಾಡುತ್ತಿದ್ದಾರೆ. ದಯವಿಟ್ಟು ಅವರೊಂದಿಗೆ ಮಾತನಾಡಿ’ ಎಂದು ಪವನ್ ಒತ್ತಾಯಿಸಿದ್ದಾರೆ.

‘ನಿಮ್ಮ ಚುನಾವಣಾ ತಂತ್ರಗಳ ಬಗ್ಗೆ ನಿಮಗೆ ವಿಚಿತ್ರವಾದ ನಂಬಿಕೆ ಇದೆ. ಚುನಾವಣೆಗಳು ಬರುತ್ತವೆ, ನಾವು ಅದನ್ನು ಗೆಲ್ಲುತ್ತೇವೆ ಎಂದುಕೊಂಡಿದ್ದೇವೆ. ಪ್ರತಿ ಬಾರಿ ನಿಜವಾದ ಸಮಸ್ಯೆಗಳನ್ನು ಮರೆಮಾಚಿ ಗಮನ ಬೇರೆಡೆ ಸೆಳೆಯುತ್ತೀರಿ. ಇನ್ನು ಮುಂದೆ ಹಾಗಾಗಲು ನಾವು ಬಿಡುವುದಿಲ್ಲ’ ಎಂದು ಅವರು ಹೇಳಿದ್ದಾರೆ.

‘ಮೊದಲು ನೀವು ಕೃಷಿ ಸಲಕರಣೆಗಳ ಮೇಲೆ ಜಿಎಸ್‌ಟಿ ಹೇರಿದಿರಿ. ನಂತರ ಯಾರನ್ನೂ ಸಂಪರ್ಕಿಸದೆ, ಚರ್ಚಿಸದೆ ಏಕಪಕ್ಷೀಯವಾಗಿ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿದ್ದೀರಿ. ಅವುಗಳನ್ನು ರದ್ದುಪಡಿಸಿ ಎಂದು ರೈತರು ಕೇಳುತ್ತಿದ್ದಾರೆ. ಆದರೆ ಅದನ್ನು ಮಾಡುವುದನ್ನು ಬಿಟ್ಟು, ನೀವು ರೈತರನ್ನು ದೇಶದ್ರೋಹಿಗಳು ಎಂಬಂತೆ ಬಿಂಬಿಸುತ್ತಿದ್ದೀರಿ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತ್‌ ಬಂದ್‌ಗೆ ವೈಎಸ್‌ಆರ್‌ಸಿಪಿ ಬೆಂಬಲ; ಬಿಜೆಪಿ ಕಿಡಿ

ಹೈದರಾಬಾದ್‌: ಕಳೆದ ವರ್ಷ ಮೂರು ಕೃಷಿ ಕಾಯ್ದೆಗಳನ್ನು ಜಾರಿ ಮಾಡಲು ಕೇಂದ್ರ ಸರ್ಕಾರಕ್ಕೆ ಸಂಸತ್ತಿನಲ್ಲಿ ಬೆಂಬಲ ನೀಡಿದ್ದ ಆಂಧ್ರ ಪ್ರದೇಶದ ಆಡಳಿತಾರೂಢ ವೈಎಸ್‌ಆರ್‌ಸಿಪಿ ಪಕ್ಷ ಸೋಮವಾರ ಭಾರತ ಬಂದ್‌ಗೆ ಬೆಂಬಲ ಸೂಚಿಸಿ ಆಶ್ಚರ್ಯಕರವಾಗಿ ನಡೆದುಕೊಂಡಿದೆ.

ಸಂಯುಕ್ತ ಕಿಸಾನ್‌ ಮೋರ್ಚಾ ಕರೆ ನೀಡಿರುವ ಬಂದ್‌ಗೆ ಆಂಧ್ರ ಪ್ರದೇಶ ಸರ್ಕಾರ ಬೆಂಬಲ ನೀಡುವುದಾಗಿ ರಾಜ್ಯದ ಮಾಹಿತಿ ಮತ್ತು ಸಾರಿಗೆ ಸಚಿವ ಪೆರ್ನಿ ವೆಂಕಟರಾಮಯ್ಯ ಶನಿವಾರ ಘೋಷಿಸಿದ್ದರು. ಸರ್ಕಾರ ಮತ್ತು ವೈಎಸ್‌ಆರ್‌ಸಿಪಿ ರೈತರ ಹೋರಾಟವನ್ನು ಬೆಂಬಲಿಸುತ್ತದೆ. ಜೊತೆಗೆ, ವಿಶಾಖಪಟ್ಟಣದ ಉಕ್ಕು ಘಟಕವನ್ನು ಖಾಸಗೀಕರಣ ಮಾಡುವುದರ ವಿರುದ್ಧ ಹೋರಾಡುತ್ತಿರುವ ಕಾರ್ಮಿಕರಿಗೂ ಬೆಂಬಲ ನೀಡುತ್ತದೆ ಎಂದಿದ್ದರು.

ವೈಎಸ್‌ಆರ್‌ಸಿಪಿ ಬಂದ್‌ಗೆ ಬೆಂಬಲ ನೀಡಿರುವ ಕುರಿತು ಬಿಜೆಪಿ ಕಿಡಿಕಾರಿದೆ. ವೈಎಸ್‌ಆರ್‌ಸಿಪಿಯ ಸಂಸದ ವಿಜಯಸಾಯಿ ರೆಡ್ಡಿ ಅವರು ರಾಜ್ಯಸಭೆಯಲ್ಲಿ ಕೃಷಿ ಕಾಯ್ದೆಗಳನ್ನು ಬೆಂಬಲಿಸಿದ ವಿಡಿಯೋವನ್ನು ಆಂಧ್ರ ಪ್ರದೇಶ ರಾಜ್ಯ ಘಟಕದ ಅಧ್ಯಕ್ಷ ಸೋಮು ವೀರರಾಜು ಪೋಸ್ಟ್‌ ಮಾಡಿದ್ದಾರೆ. ಸಂಸತ್ತಿನಲ್ಲಿ ಕೃಷಿ ಕಾಯ್ದೆಗಳನ್ನು ಬೆಂಬಲಿಸಿದ್ದ ವೈಎಸ್‌ಆರ್‌ಸಿಪಿಗೆ ಭಾರತ ಬಂದ್‌ಗೆ ಬೆಂಬಲ ನೀಡಲು ಯಾವ ಅಧಿಕಾರ ಇದೆ ಎಂದು ಪ್ರಶ್ನಿಸಿದ್ದಾರೆ.

***

ನಾನು ರೈತರಿಂದ ಒಂದು ಫೋನ್‌ ಕರೆಯಷ್ಟು ದೂರ ಮಾತ್ರ ಇದ್ದೇನೆ ಎಂದು ಮೋದಿ ಅವರು ಜನವರಿಯಲ್ಲಿ ಹೇಳಿದ್ದರು. ರೈತರು ಇನ್ನೂ ಆ ಕರೆಗಾಗಿ ಕಾಯುತ್ತಿದ್ದಾರೆ
- ಪವನ್ ಖೇರಾ, ಕಾಂಗ್ರೆಸ್ ವಕ್ತಾರ

ರೈತರ ಹೋರಾಟವು ಅಹಿಂಸಾತ್ಮಕವಾದುದು ಮತ್ತು ದೃಢನಿಶ್ಚಯದ್ದು. ಆದರೆ ಕೇಂದ್ರದ ಶೋಷಕ ಸರ್ಕಾರಕ್ಕೆ ಇದು ಇಷ್ಟವಿಲ್ಲ. ಹೀಗಾಗಿ ಭಾರತ್ ಬಂದ್ ನಡೆಯುತ್ತಿದೆ
ರಾಹುಲ್ ಗಾಂಧಿ , ಕಾಂಗ್ರೆಸ್‌ ನಾಯಕ

ರೈತರ ಬೇಡಿಕೆ ನ್ಯಾಯಯುತವಾದುದು. ಅವರ ಬೇಡಿಕೆಗಳನ್ನು ಈಡೇರಿಸುವುದರಿಂದ ಪ್ರಧಾನಿ ಯಾರ ಮುಂದೆಯೂ ತಲೆಬಾಗಿದಂತೆ ಆಗುವುದಿಲ್ಲ.
ಅರವಿಂದ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ

ರೈತರ ಬಗ್ಗೆ ಸರ್ಕಾರ ಅನುಕಂಪ ತೋರಿಸಬೇಕು. ಅವರು 10 ತಿಂಗಳಿನಿಂದ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರವು ಆ ಮೂರೂ ಕಾಯ್ದೆಗಳನ್ನು ರದ್ದುಪಡಿಸಬೇಕು
ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT