ಶನಿವಾರ, ಜನವರಿ 28, 2023
15 °C
ನ್ಯಾಯಮೂರ್ತಿಗಳ ಸ್ಥಾನಕ್ಕೆ ಶಿಫಾರಸು * ಸುಪ್ರೀಂ ಕೋರ್ಟ್‌ಗೆ ಕೇಂದ್ರದಿಂದ ವಸ್ತುಸ್ಥಿತಿ ವರದಿ

ಹೈಕೋರ್ಟ್‌ ನ್ಯಾಯಮೂರ್ತಿಗಳ ಆಯ್ಕೆ ‘ಸುಪ್ರೀಂ’ ಹಂತದಲ್ಲೇ ಶೇ 25ರಷ್ಟು ತಿರಸ್ಕೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ:‌‌ ‘ಹೈಕೋರ್ಟ್‌ ನ್ಯಾಯಮೂರ್ತಿಗಳ ಸ್ಥಾನಕ್ಕೆ ಶಿಫಾರಸು ಮಾಡಲಾಗಿರುವ ಹೆಸರುಗಳಲ್ಲಿ ಶೇ 25ರಷ್ಟು ಸುಪ್ರೀಂ ಕೋರ್ಟ್ ಹಂತದಲ್ಲಿಯೇ ತಿರಸ್ಕೃತಗೊಳ್ಳುತ್ತಿವೆ. ಈ ಪ್ರಮಾಣವು ಅತ್ಯಧಿಕವಾಗಿದೆ’ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 

‘ಹೈಕೋರ್ಟ್‌ಗಳಿಂದ ಪ್ರಸ್ತುತ ನ್ಯಾಯಮೂರ್ತಿಗಳ ಸ್ಥಾನಕ್ಕಾಗಿ 146 ಹೆಸರುಗಳು ಶಿಫಾರಸು ಮಾಡಲಾಗಿದ್ದು, ಪರಿಶೀಲನೆ ಹಂತದಲ್ಲಿದೆ’ ಎಂದು ಗುರುವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ವಸ್ತುಸ್ಥಿತಿ ವರದಿಯಲ್ಲಿ ಕೇಂದ್ರ ಹೇಳಿದೆ. 

ನವೆಂಬರ್ 30, 2022ರಲ್ಲಿ ಇದ್ದಂತೆ ಮಂಜೂರಾಗಿರುವ ಹೈಕೋರ್ಟ್ ನ್ಯಾಯಮೂರ್ತಿಗಳ ಹುದ್ದೆಗಳು 1,108. ಸದ್ಯ 776 ಸ್ಥಾನಗಳು ಭರ್ತಿಯಾಗಿವೆ. 332 ಸ್ಥಾನಗಳು ಖಾಲಿ ಇವೆ. ಈ ಪೈಕಿ ಶೇ 56 ಸ್ಥಾನಗಳಿಗೆ ಅಂದರೆ ಒಟ್ಟು 186 ನ್ಯಾಯಮೂರ್ತಿಗಳ ಸ್ಥಾನಗಳಿಗೆ ಹೈಕೋರ್ಟ್‌ಗಳು ಶಿಫಾರಸು ಮಾಡಬೇಕಾಗಿದೆ ಎಂದು ಹೇಳಿದೆ.

146 ಪ್ರಸ್ತಾವಗಳಲ್ಲಿ 92 (ವಕೀಲರ ಸಂಘದ ಕೋಟಾದಲ್ಲಿ ಖಾಲಿ ಇರುವುದು) ಮತ್ತು 54 (ಸೇವಾವಧಿ ಕೋಟಾದಲ್ಲಿ ಖಾಲಿ ಇರುವುದು) ಪ್ರಸ್ತಾವಗಳು ಸರ್ಕಾರ (118) ಮತ್ತು ಸುಪ್ರೀಂ ಕೋರ್ಟ್ (28) ಹಂತದಲ್ಲಿ ಪರಿಶೀಲನೆಯಲ್ಲಿವೆ ಎಂದು ಹೇಳಿದರು.

‘ಸರ್ಕಾರದ ಮುಂದಿರುವ ಪ್ರಸ್ತಾವಗಳಲ್ಲಿ ಎಂಟನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಮೊದಲ ಬಾರಿಗೆ ಶಿಫಾರಸು ಮಾಡಿದೆ. 50 ಅನ್ನು ತಿರಸ್ಕರಿಸಿ ಹೈಕೋರ್ಟ್‌ಗಳಿಗೆ ಹಿಂದಿರುಗಿಸಿದೆ. ಹೈಕೋರ್ಟ್ ಕೊಲಿಜಿಯಂಗಳ 80 ಪ್ರಸ್ತಾವಗಳಿವೆ. 25 ಅನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಕೊಲಿಜಿಯಂ ತಿಳಿಸಿದ್ದು, ಮೂರು ಅನ್ನು ಮುಂದೂಡಿದೆ ಎಂದು ವಿವರಿಸಿದೆ.

ಡಿಸೆಂಬರ್ 1, 2022 ರಿಂದ ಮೇ 31, 2023ರ ಅವಧಿಯಲ್ಲಿ ಹೈಕೋರ್ಟ್‌ಗಳ 43 ನ್ಯಾಯಮೂರ್ತಿಗಳು ನಿವೃತ್ತರಾಗುತ್ತಿದ್ದಾರೆ. ಪ್ರಕ್ರಿಯೆಯಂತೆ ಕನಿಷ್ಠ 6 ತಿಂಗಳು ಮೊದಲು ಶಿಫಾರಸು ಮಾಡಬೇಕು. ಡಿ. 1,2022ರಲ್ಲಿ ಇದ್ದಂತೆ ಹೈಕೋರ್ಟ್‌ಗಳು 229 ಸ್ಥಾನಗಳಿಗೆ ಹೆಸರು ಶಿಫಾರಸು ಮಾಡಬೇಕಿತ್ತು. ಆದರೆ, ಈವರೆಗೆ ಬಂದಿಲ್ಲ ಎಂದು ತಿಳಿಸಿದೆ.

‘ನ್ಯಾಯಮೂರ್ತಿಗಳ ತಾತ್ಕಾಲಿಕ ನೇಮಕ; ಪ್ರಕ್ರಿಯೆ ಸರಳವಾಗಿರಲಿ’  

ನವದೆಹಲಿ (ಪಿಟಿಐ): ‘ಹೈಕೋರ್ಟ್‌ಗಳಿಗೆ ತಾತ್ಕಾಲಿಕವಾಗಿ ನ್ಯಾಯಮೂರ್ತಿಗಳನ್ನು ನೇಮಿಸಲು ಕೇಂದ್ರ ಸರ್ಕಾರ ಸೂಚಿಸಿರುವ ಒಪ್ಪಂದ ಪ್ರಕ್ರಿಯೆಯು ‘ತುಂಬಾ ತೊಡಕಿನದಾಗಿದೆ’. ನೇಮಕಕ್ಕೆ ಸರಳವಾದ ಪ್ರಕ್ರಿಯೆ ಅಳವಡಿಸಿಕೊಳ್ಳಬೇಕು’ ಎಂದು ಸುಪ್ರಿಂ ಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿತು.

ಸಂವಿಧಾನದ ವಿಧಿ 224ಎ ಅನ್ವಯ ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಸಲಹೆಯನ್ನು ಅಳವಡಿಸಿಕೊಂಡರೆ, ಅಂತಹ ಪರಿಸ್ಥಿತಿಯಲ್ಲಿ ಯಾರೊಬ್ಬರೂ ಕೆಲಸ ಮಾಡಲು ಬಯಸುವುದಿಲ್ಲ ಎಂದು ಹೇಳಿತು. ನ್ಯಾಯಮೂರ್ತಿಗಳಾದ ಸಂಜಯ್‌ ಕೃಷ್ಣನ್‌ ಕೌಲ್‌ ಮತ್ತು ಅಭಯ್‌ ಎಸ್.ಓಕಾ, ವಿಕ್ರಂನಾಥ್‌ ಅವರಿದ್ದ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿತು.

ಸಂವಿಧಾನದ ವಿಧಿ 224ಎ ಅನ್ವಯ ಹೈಕೋರ್ಟ್‌ಗಳಿಗೆ ಅಡ್ ಹಾಕ್‌ ನ್ಯಾಯಮೂರ್ತಿಗಳ ನೇಮಿಸಲು ಅವಕಾಶವಿದೆ. ಅದರಂತೆ, ಯಾವುದೇ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿ ಅವರು ಯಾವುದೇ ಸಂದರ್ಭದಲ್ಲಿ ರಾಷ್ಟ್ರಪತಿಗಳ ಪೂರ್ವಾನುಮತಿ ಆಧರಿಸಿ ಯಾವುದೇ ವ್ಯಕ್ತಿಗೆ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಲು ಕೋರಬಹುದಾಗಿದೆ.

ಅಡ್‌ ಹಾಕ್‌ ನ್ಯಾಯಮೂರ್ತಿಗಳಾಗಿ ನೇಮಕಗೊಳ್ಳುವವರು ನಿವೃತ್ತರೇ ಆಗಿರುತ್ತಾರೆ. ನ್ಯಾಯಮೂರ್ತಿಗಳ ನೇಮಕ ಮಾಡುತ್ತಿದ್ದೇವೆ ಎಂಬುದನ್ನು ಮರೆತುಬಿಡಿ. ನೀವು ಅಡ್ ಹಾಕ್‌ ನ್ಯಾಯಮೂರ್ತಿಗಳನ್ನು ನೇಮಿಸುತ್ತಿದ್ದೀರಿ. ಶಿಫಾರಸು ಮಾಡಿದ ನಂತರ ನೇಮಕಾತಿ 2–3 ದಿನದಲ್ಲಿ ಆಗಬೇಕು. ಸುದೀರ್ಘ ಕಾಲ ಬಾಕಿ ಉಳಿಸಬಾರದು’ ಎಂದು ಹೇಳಿತು.

 

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು