ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರುಮದುವೆಯು ವಿಧವೆಗೆ ಪರಿಹಾರ ನಿರಾಕರಿಸಲು ಕಾರಣವಲ್ಲ: ಬಾಂಬೆ ಹೈಕೋರ್ಟ್

ಅಪಘಾತ ಪ್ರಕರಣ: ವಿಮಾ ಕಂಪನಿಯ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ
Last Updated 1 ಏಪ್ರಿಲ್ 2023, 11:34 IST
ಅಕ್ಷರ ಗಾತ್ರ

ಮುಂಬೈ: ‘ರಸ್ತೆ ಅಪಘಾತದಲ್ಲಿ ಪತಿ ಸಾವಿಗೀಡಾಗಿದ್ದು ಆತನ ಪತ್ನಿಯು ಮರುಮದುವೆಯಾಗಿರುವ ವಿಷಯವು ಆಕೆಗೆ ಮೋಟಾರು ವಾಹನ ಕಾಯ್ದೆಯಡಿ ಪರಿಹಾರ ನಿರಾಕರಿಸಲು ಕಾರಣವಲ್ಲ’ ಎಂದು ಬಾಂಬೆ ಹೈಕೋರ್ಟ್ ಹೇಳಿದ್ದು, ವಿಮಾ ಕಂಪನಿಯ ಅರ್ಜಿಯನ್ನು ವಜಾಗೊಳಿಸಿದೆ.

2010ರಲ್ಲಿ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದ ವ್ಯಕ್ತಿಯ ಪತ್ನಿಗೆ ಪರಿಹಾರ ನೀಡುವಂತೆ ಮೋಟಾರ್ ಅಪಘಾತ ಕ್ಲೈಮ್ ಟ್ರಿಬ್ಯೂನಲ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ, ಇಪ್ಕೊ ಟೋಕಿಯೊ ಜನರಲ್ ಇನ್ಷುರೆನ್ಸ್‌ ಕಂಪನಿಯು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ನ್ಯಾಯಮೂರ್ತಿ ಎಸ್.ಜಿ.ಡಿಗೆ ನೇತೃತ್ವದ ಏಕಸದಸ್ಯ ನ್ಯಾಯಪೀಠವು ಮಾರ್ಚ್ 3ರಂದು ವಿಮಾ ಕಂಪನಿಯ ಅರ್ಜಿಯನ್ನು ವಿಚಾರಣೆ ನಡೆಸಿತ್ತು. ಇದರ ಆದೇಶ ಪ್ರತಿ ಈಗ ಲಭ್ಯವಾಗಿದೆ.

‘ಪತಿಯ ಸಾವಿಗೆ ಪರಿಹಾರವನ್ನು ಪಡೆಯಲು ಆತನ ಪತ್ನಿಯು ಜೀವನಪರ್ಯಂತ ಅಥವಾ ಪರಿಹಾರ ಪಡೆಯುವವರೆಗೆ ಆಕೆಯು ವಿಧವೆಯಾಗಿ ಉಳಿಯಬೇಕು ಎಂಬುದನ್ನು ಯಾರೂ ನಿರೀಕ್ಷಿಸುವುದಿಲ್ಲ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಗಂಡನು ಸಾಯುವ ಸಮಯದಲ್ಲಿ ಆಕೆಗೆ 19 ವರ್ಷ ವಯಸ್ಸಾಗಿತ್ತು ಎಂಬುದು ದಾಖಲೆಯಿಂದ ತಿಳಿದುಬಂದಿದೆ ಎಂಬುದನ್ನು ಗಮನಿಸಿದ ನ್ಯಾಯಾಲಯವು, ‘ಆಕೆಯ ವಯಸ್ಸು ಮತ್ತು ಅಪಘಾತದಲ್ಲಿ ಸಮಯದಲ್ಲಿ ಆಕೆಯು ಆತನ ಹೆಂಡತಿಯಾಗಿದ್ದಳು ಎಂಬ ಅಂಶವನ್ನು ಪರಿಗಣಿಸಿದರೆ ಆಕೆ ಪರಿಹಾರ ಪಡೆಯಲು ಅರ್ಹಳಾಗಿದ್ದಾಳೆ. ಗಂಡನ ಮರಣದ ನಂತರ, ಪರಿಹಾರ ಪಡೆಯುವುದಕ್ಕಾಗಿಯೇ ಮರುಮದುವೆಯನ್ನು ನಿಷೇಧಿಸಲಾಗದು’ ಎಂದೂ ಹೇಳಿದೆ.

2010ರಲ್ಲಿ ಮುಂಬೈ– ಪುಣೆ ಹೆದ್ದಾರಿ ದಾಟಿ ಕಾಮ್‌ಶೆಟ್ ಕಡೆಗೆ ಹೋಗುತ್ತಿದ್ದಾಗ ಹಿಂದಿನಿಂದ ಆಟೋರಿಕ್ಷಾವು ಡಿಕ್ಕಿ ಹೊಡೆದಿದ್ದರಿಂದ ಈ ಮಹಿಳೆಯ ಪತಿ ಮೃತಪಟ್ಟಿದ್ದರು.

ಠಾಣೆ ಜಿಲ್ಲೆಯೊಳಗೆ ಮಾತ್ರ ಆಟೋರಿಕ್ಷಾ ಸಂಚರಿಸಲು ಅನುಮತಿ ನೀಡಿರುವುದರಿಂದ ಪರಿಹಾರವನ್ನು ಪಾವತಿಸಲು ತಾನು ಜವಾಬ್ದಾರನಾಗಿರುವುದಿಲ್ಲ ಎಂದು ವಿಮಾ ಸಂಸ್ಥೆಯು ವಾದಿಸಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಠಾಣೆ ಜಿಲ್ಲೆಯ ಅಧಿಕಾರ ವ್ಯಾಪ್ತಿಗೆ ಮೀರಿ ಆಟೋರಿಕ್ಷಾವನ್ನು ಚಲಾಯಿಸುವುದು ನಿಯಮಗಳ ಉಲ್ಲಂಘನೆಯಾಗಿದೆ ಎಂಬುದನ್ನು ಸಾಬೀತುಪಡಿಸಲು ‘ಮೇಲ್ಮನವಿದಾರರು ಯಾವುದೇ ಸಾಕ್ಷಿಯನ್ನು ನೀಡಿಲ್ಲ. ಇದು ವಿಮಾ ಪಾಲಿಸಿಯ ನಿಯಮ ಮತ್ತು ಷರತ್ತುಗಳ ಉಲ್ಲಂಘನೆಯಾಗಿದೆ’ ಎಂದು ಹೇಳಿ ವಿಮಾ ಕಂಪನಿಯ ಅರ್ಜಿಯನ್ನು ವಜಾಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT