ಭಾನುವಾರ, ಮೇ 22, 2022
22 °C
ಕೃಷಿ ಕಾನೂನುಗಳ ರದ್ದುಪಡಿಸುವ ಪ್ರಧಾನಿ ನಿರ್ಧಾರ

ಅಧಿಕಾರದ ದುರಹಂಕಾರಕ್ಕಾದ ಸೋಲು: ಶಿವಸೇನಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಪ್ರಧಾನಿ ಘೋಷಣೆಯನ್ನು ‘ಅಧಿಕಾರದ ದುರಹಂಕಾರದ ಸೋಲು’ ಹಾಗೂ ರೈತರ ಒಗ್ಗಟ್ಟಿಗೆ ಸಂದ ಜಯ ಎಂದು ಶಿವಸೇನಾ ಶನಿವಾರ ಬಣ್ಣಿಸಿದೆ.

ಉತ್ತರ ಪ್ರದೇಶ ಮತ್ತು ಪಂಜಾಬ್‌ನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗುವ ಆತಂಕದಿಂದ ಈ ಕ್ರಮಕ್ಕೆ ಅದು ಮುಂದಾಗಿದೆ ಎಂದು ಶಿವಸೇನಾದ ಮುಖವಾಣಿಯಾದ ‘ಸಾಮ್ನಾ’ದ ಸಂಪಾದಕೀಯದಲ್ಲಿ ಬರೆಯಲಾಗಿದೆ.

ಇದನ್ನೂ ಓದಿ: 

ಇತ್ತೀಚೆಗೆ ನಡೆದ 13 ರಾಜ್ಯಗಳ ಉಪಚುನಾವಣೆಗಳಲ್ಲಿ ಬಿಜೆಪಿಗೆ ಎದುರಾದ ಹಿನ್ನಡೆಯಿಂದಾಗಿ ಪ್ರಧಾನಿ ಈ ‘ಬುದ್ಧಿವಂತಿಕೆ’ಯ ನಡೆ ಇಟ್ಟಿದ್ದಾರೆ ಎಂದು ಅದು ಹೇಳಿದೆ.

‘ಕೇಂದ್ರ ಸರ್ಕಾರವು ವಿರೋಧ ಪಕ್ಷದ ಧ್ವನಿಯನ್ನು ಹತ್ತಿಕ್ಕಿ, ಸಂಸತ್ತಿನಲ್ಲಿ ಮೂರು ಕೃಷಿ ಮಸೂದೆಗಳನ್ನು ಅಂಗೀಕರಿಸಿತ್ತು. ಅಲ್ಲದೆ ಕೇಂದ್ರವು ರೈತರ ಪ್ರತಿಭಟನೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತ್ತು. ಪ್ರತಿಭಟನಾ ಸ್ಥಳದಲ್ಲಿ ನೀರು ಮತ್ತು ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿತ್ತು. ಪ್ರತಿಭಟನನಿರತ ರೈತರಿಗೆ ಖಲಿಸ್ತಾನಿಗಳು, ಪಾಕಿಸ್ತಾನಿಗಳು ಮತ್ತು ಭಯೋತ್ಪಾದಕರು ಎಂದೆಲ್ಲ ಹಣೆಪಟ್ಟಿ ಕಟ್ಟಿತ್ತು’ ಎಂದು ಸೇನಾ ದೂರಿದೆ.

ಇಷ್ಟೆಲ್ಲ ಆದರೂ ರೈತರು ತಮ್ಮ ಬೇಡಿಕೆಯಿಂದ ಹಿಂದೆ ಸರಿಯಲಿಲ್ಲ. ಪ್ರತಿಭಟನೆಯಲ್ಲಿ ಸುಮಾರು 550 ರೈತರು ಮೃತಪಟ್ಟಿದ್ದಾರೆ. ಲಖಿಂಪುರ ಖೇರಿಯಲ್ಲಿ ಕೇಂದ್ರ ಸಚಿವರೊಬ್ಬರ ಪುತ್ರ ರೈತರನ್ನು ವಾಹನದಡಿ ಸಿಲುಕಿಸಿದ್ದರು. ಆದರೂ ಪ್ರಧಾನಿ ಮೋದಿ ಅವರು ರೈತರ ಸಾವಿಗೆ ಕಂಬನಿಯನ್ನೂ ಮಿಡಿಯಲಿಲ್ಲ ಎಂದು ಅದು ಹೇಳಿದೆ.

ಅಹಂಕಾರ ಅಂತಿಮವಾಗಿ ಮಣಿಯುತ್ತದೆ ಎಂಬುದನ್ನು ‘ಮಹಾಭಾರತ’ ಮತ್ತು ‘ರಾಮಾಯಣ’ವು ನಮಗೆ ಕಲಿಸುತ್ತದೆ. ಆದರೆ ನಕಲಿ ಹಿಂದುತ್ವವಾದಿಗಳು ಇದನ್ನು ಮರೆತು ರಾವಣನಂತೆ ಸತ್ಯ ಮತ್ತು ನ್ಯಾಯದ ಮೇಲೆ ದಾಳಿ ನಡೆಸಿದಂತೆ ತೋರುತ್ತಿದೆ ಎಂದು ಮಹಾರಾಷ್ಟ್ರದ ಆಡಳಿತ ಪಕ್ಷವಾದ ಶಿವಸೇನಾ ಕಿಡಿಕಾರಿದೆ.

ಕೇಂದ್ರ ಸರ್ಕಾರವು ಭವಿಷ್ಯದಲ್ಲಿ ಇಂಥ ಕಾನೂನುಗಳನ್ನು ತರುವ ಮೊದಲು ದುರಹಂಕಾರ ಬಿಡಬೇಕು. ದೇಶದ ಹಿತಕ್ಕಾಗಿ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿರುವ ಶಿವಸೇನಾ, ಅನ್ಯಾಯ ಮತ್ತು ನಿರಂಕುಶಾಧಿಕಾರದ ವಿರುದ್ಧ ಜನರು ಒಂದಾಗಿ ನಿಲ್ಲಬೇಕು ಎಂದು ಒತ್ತಾಯಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು