ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲಿಬಾನಿಗಳ ಜೊತೆಗಿನ ಸಚಿವ ಜೈಶಂಕರ್‌ ಭೇಟಿ ಸುಳ್ಳು: ಸರ್ಕಾರದ ಮೂಲಗಳ ಸ್ಪಷ್ಟನೆ

Last Updated 29 ಜೂನ್ 2021, 14:20 IST
ಅಕ್ಷರ ಗಾತ್ರ

ನವದೆಹಲಿ: ವಿದೇಶಾಂಗ ಸಚಿವ ಜೈಶಂಕರ್ ಅವರು ಅಫ್ಗಾನಿಸ್ತಾನದ ಕೆಲವು ತಾಲಿಬಾನಿ ನಾಯಕರನ್ನು ಭೇಟಿಯಾಗಿದ್ದಾರೆ ಎಂಬ ವರದಿಗಳು ‘ಸಂಪೂರ್ಣ ಸುಳ್ಳು, ಆಧಾರರಹಿತ ಮತ್ತು ಕುಚೇಷ್ಟೆತನದ್ದು’ ಎಂದು ಸರ್ಕಾರದ ಮೂಲಗಳು ಮಂಗಳವಾರ ತಿಳಿಸಿವೆ.

ಜೈಶಂಕರ್‌ ಅವರು ತಾಲಿಬಾನಿ ನಾಯಕರನ್ನು ಭೇಟಿಯಾಗಿದ್ದಾರೆ ಎಂದೂ, ತಾಲಿಬಾನಿ ಸಂಘಟನೆಯ ಭಾರತದೊಂದಿಗಿನ ಸಂಬಂಧವು ಮುಂದಿನ ದಿನಗಳಲ್ಲಿ ಪಾಕಿಸ್ತಾನದ ದೃಷ್ಟಿಕೋನ ಮತ್ತು ಆಶಯವನ್ನು ಹೊಂದಿರುವುದಿಲ್ಲ ಎಂದೂ ಉಲ್ಲೇಖಿಸಲಾಗಿರುವ ವರದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರದಾಡುತ್ತಿವೆ. ಇದೇ ಹಿನ್ನೆಲೆಯಲ್ಲಿ ಸರ್ಕಾರದ ಮೂಲಗಳು ಸ್ಪಷ್ಟನೆ ನೀಡಿವೆ.

‘ವಿದೇಶಾಂಗ ಸಚಿವ ಜೈಶಂಕರ್‌ ಕೆಲವು ತಾಲಿಬಾನ್ ನಾಯಕರನ್ನು ಭೇಟಿ ಮಾಡಿದ್ದಾರೆ ಎಂಬ ವರದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಗಮನಿಸಿದ್ದೇವೆ. ಅಂತಹ ವರದಿಗಳು ಸಂಪೂರ್ಣ ಸುಳ್ಳು, ಆಧಾರರಹಿತ ಮತ್ತು ಕುಚೇಷ್ಟೆಯಾದ್ದಾಗಿವೆ,’ ಎಂದು ಮೂಲವೊಂದು ತಿಳಿಸಿದೆ.

ಯುದ್ಧದಿಂದ ಹಾನಿಗೊಳಗಾದ ಅಫ್ಗಾನಿಸ್ತಾನದಲ್ಲಿ ಸುಮಾರು ಎರಡು ದಶಕಗಳಿಂದ ಬೀಡು ಬಿಟ್ಟದ್ದ ಅಮೆರಿಕ ಸೇನಾ ಪಡೆಗಳು, ದೇಶದಲ್ಲಿ ತಮ್ಮ ಉಪಸ್ಥಿತಿಯನ್ನು ಅಂತ್ಯಗೊಳಿಸುತ್ತಿವೆ. ಸೆಪ್ಟೆಂಬರ್ 11ರ ಒಳಗೆ ಅಫ್ಗಾನಿಸ್ತಾನದಿಂದ ತನ್ನ ಸೇನಾ ಪಡೆಗಳನ್ನು ಹಿಂತೆಗೆದುಕೊಳ್ಳುವುದನ್ನು ಪೂರ್ಣಗೊಳಿಸಲು ಅಮೆರಿಕ ನಿರ್ಧರಿಸಿದೆ. ಇದರ ಹಿನ್ನೆಲೆಯಲ್ಲಿ ಜೈಶಂಕರ್‌ ಅವರ ಕುರಿತ ಸುಳ್ಳು ವರದಿಗಳು ಹೊರಹೊಮ್ಮಿವೆ.

ಅಫ್ಗನ್‌ ಶಾಂತಿ ಪ್ರಕ್ರಿಯೆಗೆ ಸಂಬಂಧಿಸಿದ ತ್ವರಿತಗತಿಯ ಬೆಳವಣಿಗೆಗಳ ಮಧ್ಯೆಯೇ ಇತ್ತೀಚೆಗೆ ವಾಷಿಂಗ್ಟನ್ ಡಿಸಿಯಲ್ಲಿ ‘ಅರಬ್ ಸೆಂಟರ್‘ ವೆಬಿನಾರ್‌ ಒಂದನ್ನು ಆಯೋಜಿಸಿತ್ತು. ಇದರಲ್ಲಿ ಭಾಗವಹಿಸಿದ್ದ ಕತಾರಿ ರಾಜತಾಂತ್ರಿಕರೊಬ್ಬರು, ‘ಭವಿಷ್ಯದಲ್ಲಿ ತಾಲಿಬಾನಿ ಗುಂಪುಗಳು ಅಫ್ಗಾನಿಸ್ತಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ಭಾರತವು ತಾಲಿಬಾನ್‌ ಜೊತೆಗೆ ಮಾತುಕತೆಯಲ್ಲಿ ತೊಡಗಿದೆ ಎಂದು ಅನಿಸುತ್ತಿದೆ,’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT