ಬುಧವಾರ, ಮಾರ್ಚ್ 29, 2023
28 °C
ಮುಖ್ಯಮಂತ್ರಿ ಹೇಮಂತ್ ಸೊರೆನ್‌ಗೆ ವರದಿ ಸಲ್ಲಿಸಿದ ತ್ರಿಸದಸ್ಯ ಸಮಿತಿ

ಜಾರ್ಖಂಡ್‌: ಬಡ್ತಿ ಹುದ್ದೆಗಳಲ್ಲಿ ಎಸ್‌ಸಿ, ಎಸ್‌ಟಿ ಪ್ರಾತಿನಿಧ್ಯ ಅಸಮರ್ಪಕ- ವರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಂಚಿ: ಜಾರ್ಖಂಡ್ ಸರ್ಕಾರದಲ್ಲಿ ಪ್ರತಿ ಹಂತದ ಬಡ್ತಿ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ನೌಕರರಿಗೆ ಅಸಮರ್ಪಕ ಪ್ರಾತಿನಿಧ್ಯವಿದೆ ಎಂದು ತ್ರಿಸದಸ್ಯ ಸಮಿತಿಯ ವರದಿ ಹೇಳಿದೆ.

ರಾಜ್ಯ ಸರ್ಕಾರದ ಸೇವೆಗಳು ಮತ್ತು ಹುದ್ದೆಗಳಿಗೆ ಕೆನೆಪದರದಲ್ಲಿ ಎಸ್‌ಸಿ ಮತ್ತು ಎಸ್‌ಟಿಗಳಿಗೆ ನೀಡಲಾದ ಬಡ್ತಿ, ಆಡಳಿತ ದಕ್ಷತೆ ಮತ್ತು ಪ್ರಾತಿನಿಧ್ಯ ಅಧ್ಯಯನ ಮಾಡಲು ಜಾರ್ಖಂಡ್‌ ಸರ್ಕಾರ ರಚಿಸಿದ ತ್ರಿಸದಸ್ಯ ಸಮಿತಿಯು ಬುಧವಾರ ಸಂಜೆ ತನ್ನ ವರದಿಯನ್ನು ಮುಖ್ಯಮಂತ್ರಿ ಹೇಮಂತ್ ಸೊರೆನ್‌ ಅವರಿಗೆ ಸಲ್ಲಿಸಿದೆ.

‘ರಾಜ್ಯದ ಸರ್ಕಾರದ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪ್ರಾತಿನಿಧ್ಯವು ಅಗತ್ಯ ಮಟ್ಟಕ್ಕಿಂತ ತೀರಾ ಕಡಿಮೆ ಇದೆ. ಬಡ್ತಿಯಲ್ಲಿ ಪ್ರಸ್ತುತ ಮೀಸಲಾತಿ ನೀತಿಯನ್ನು ಮುಂದುವರಿಸುವುದು ಅವಶ್ಯ’ ಎಂದು ಸಮಿತಿಯು ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.

‘ಸಮಿತಿ ನೀಡಿರುವ ವರದಿಯ ಪ್ರಕಾರ, ರಾಜ್ಯದಾದ್ಯಂತ ಮಂಜೂರಾದ ಬಡ್ತಿ ಹುದ್ದೆಗಳ ಪೈಕಿ ಬಡ್ತಿಯ ಆಧಾರದ ಮೇಲೆ ಹುದ್ದೆಗಳನ್ನು ಹೊಂದಿರುವ ಒಟ್ಟು ಉದ್ಯೋಗಿಗಳ ಸಂಖ್ಯೆಗೆ ಸಂಬಂಧಿಸಿದಂತೆ ಎಸ್‌ಸಿ ಮತ್ತು ಎಸ್‌ಟಿ ನೌಕರರ ಶೇಕಡವಾರು ಪ್ರಮಾಣವು ಕ್ರಮವಾಗಿ ಶೇ 4.45 ಮತ್ತು ಶೇ 10.04 ರಷ್ಟಿದೆ. ಇದು ಎಸ್‌ಸಿ ಮತ್ತು ಎಸ್‌ಟಿ ಜನಸಂಖ್ಯೆಯ ಅನುಪಾತಕ್ಕಿಂತ ಕಡಿಮೆ (ಕ್ರಮವಾಗಿ ಶೇ 12.08 ಮತ್ತು ಶೇ 26.20 ಇರಬೇಕಿತ್ತು)’ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

‘ದತ್ತಾಂಶದ ಪ್ರಕಾರ ರಾಜ್ಯದಲ್ಲಿ 31 ಪ್ರಮುಖ ಇಲಾಖೆಗಳಲ್ಲಿ 3.01 ಲಕ್ಷ ಮಂಜೂರಾದ ಹುದ್ದೆಗಳಿವೆ. ಈ ಪೈಕಿ 57,182 ಹುದ್ದೆಗಳನ್ನು ಬಡ್ತಿ ಆಧಾರದ ಮೇಲೆ ಭರ್ತಿ ಮಾಡಬೇಕಿದೆ. 2.44 ಲಕ್ಷ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗಿದೆ’ ಎಂದು ಮುಖ್ಯಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು