ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಏರಿಕೆ: ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಲು ಸೂಚನೆ

Last Updated 1 ಜನವರಿ 2022, 18:13 IST
ಅಕ್ಷರ ಗಾತ್ರ

ನವದೆಹಲಿ : ದೇಶದಲ್ಲಿ ಕೋವಿಡ್–19 ಪ್ರಕರಣಗಳು ಭಾರಿ ಏರಿಕೆ ದಾಖಲಿಸಿವೆ. ಶನಿವಾರ ಬೆಳಿಗ್ಗೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 22,775 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಅಕ್ಟೋಬರ್ 6ರ ಬಳಿಕ ದಾಖಲಾದ ಅತ್ಯಧಿಕ ಸಂಖ್ಯೆಯಿದು.

ಕೋವಿಡ್ ಪ್ರಕರಣಗಳು ಕ್ಷಿಪ್ರವಾಗಿ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ, ತಾತ್ಕಾಲಿಕ ಆಸ್ಪತ್ರೆಗಳ ನಿರ್ಮಾಣ ಆರಂಭಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಶನಿವಾರ ನಿರ್ದೇಶನ ನೀಡಿದೆ. ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನು ತುರ್ತಾಗಿ ಮೇಲ್ದರ್ಜೆಗೆ ಏರಿಸಬೇಕಿರುವುದು ಸದ್ಯದ ಅಗತ್ಯ ಎಂದು ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಒತ್ತಿ ಹೇಳಿದ್ದಾರೆ. ಆಸ್ಪತ್ರೆಗಳನ್ನು ಶೀಘ್ರವಾಗಿ ನಿರ್ಮಿಸಲು ಡಿಆರ್‌ಡಿಒ, ಸಿಎಸ್‌ಐಆರ್, ಖಾಸಗಿಯವರು, ಎನ್‌ಜಿಒಗಳ ನೆರವು ಪಡೆಯಬೇಕು ಎಂದು ಸೂಚಿಸಿದ್ದಾರೆ.

ದೇಶದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳು 1 ಲಕ್ಷದ ಗಡಿಯನ್ನು ದಾಟಿವೆ. ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಅಂದರೆ 9,170 ಪ್ರಕರಣಗಳು ವರದಿಯಾಗಿವೆ. ದೆಹಲಿಯಲ್ಲಿ 2,716 ಸೋಂಕಿತರು ಕಂಡುಬಂದಿದ್ದು, ಕೋವಿಡ್ ದೃಢಪಡುವ ಪ್ರಮಾಣ ಶೇ 3.64ಕ್ಕೆ ಹೆಚ್ಚಳವಾಗಿದೆ. ಹಿಂದಿನ ದಿನಕ್ಕೆ ಹೋಲಿಸಿದರೆ ಪ್ರಕರಣಗಳ ಪ್ರಮಾಣ ಶೇ 51ರಷ್ಟು ಹೆಚ್ಚಳವಾಗಿದೆ.

24 ಗಂಟೆಗಳಲ್ಲಿ ದೇಶದ 161 ಜನರಲ್ಲಿ ಹೊಸದಾಗಿ ಓಮೈಕ್ರಾನ್ ಸೋಂಕು ಪತ್ತೆಯಾಗಿದ್ದು, ಒಟ್ಟು ಸಂಖ್ಯೆ 1,431ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರದ 10ಕ್ಕೂ ಹೆಚ್ಚು ಸಚಿವರು ಮತ್ತು 20 ಶಾಸಕರಿಗೆ ಕೋವಿಡ್-19 ದೃಢಪಟ್ಟಿದೆ ಎಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ ಶನಿವಾರ ತಿಳಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳ ಇದೇ ರೀತಿ ಮುಂದುವರಿದರೆ ಕಠಿಣ ನಿರ್ಬಂಧಗಳನ್ನು ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT