ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿ ಜೋಡಣೆಯ ವಿನ್ಯಾಸ ಬದಲಿಸಿ: ಸಮರ್ಪಕ ನೀರು ಹಂಚಿಕೆಗೆ ಕರ್ನಾಟಕದ ಪ್ರತಿಪಾದನೆ

Last Updated 18 ಫೆಬ್ರುವರಿ 2022, 20:00 IST
ಅಕ್ಷರ ಗಾತ್ರ

ನವದೆಹಲಿ: ಪ್ರಸ್ತಾವಿತ ನದಿ ಜೋಡಣೆ ಯೋಜನೆ ಕೈಗೆತ್ತಿಕೊಳ್ಳುವ ಮೊದಲು ಆಯಾ ರಾಜ್ಯಗಳಿಗೆ ಸಮರ್ಪಕವಾಗಿ ನೀರನ್ನು ಹಂಚಿಕೆ ಮಾಡಬೇಕು ಎಂದು ಕರ್ನಾಟಕ ಪ್ರತಿಪಾದಿಸಿದೆ.

ಗೋದಾವರಿ– ಕೃಷ್ಣಾ, ಕೃಷ್ಣಾ– ಪೆನ್ನಾರ್ ಹಾಗೂ ಪೆನ್ನಾರ್‌– ಕಾವೇರಿ ನದಿಗಳ ಜೋಡಣೆ ಯೋಜನೆ ಕುರಿತು ಕಣಿವೆ ವ್ಯಾಪ್ತಿಯ ರಾಜ್ಯಗಳೊಂದಿಗೆ ಚರ್ಚಿಸಲು ಕೇಂದ್ರದ ಜಲಶಕ್ತಿ ಸಚಿವಾಲಯ ಶುಕ್ರವಾರ ಮಧ್ಯಾಹ್ನ ಆಯೋಜಿಸಿದ್ದ ಸಭೆಯಲ್ಲಿ ರಾಜ್ಯ ಸರ್ಕಾರ ಈ ಬೇಡಿಕೆ ಇರಿಸಿದೆ.

ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ ಪಂಕಜ್‌ ಕುಮಾರ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಂಧ್ರ
ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳ ಅಧಿಕಾರಿಗಳು, ರಾಷ್ಟ್ರೀಯ ಜಲ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ಭಾಗವಹಿಸಿದ್ದರು.

ಕೃಷ್ಣಾ– ಪೆನ್ನಾರ್ ಮತ್ತು ಪೆನ್ನಾರ್– ಕಾವೇರಿ ಜೋಡಣೆ ಯೋಜನೆ ಅಡಿ ಲಭ್ಯ ನೀರಿನಲ್ಲಿ ರಾಜ್ಯದ ಬರಪೀಡಿತ ಪ್ರದೇಶಗಳ ಜನರ ಕುಡಿಯುವ ನೀರಿನ ಅಗತ್ಯವನ್ನು ಗಣನೆಗೆ ತೆಗೆದುಕೊಂಡು, ಮುಂಚಿತವಾಗಿಯೇ ನೀರು ಹಂಚಿಕೆ ಮಾಡಬೇಕು ಎಂದು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಜಯಪ್ರಕಾಶ್ ಮನವಿ ಸಲ್ಲಿಸಿದರು.

ಗೋದಾವರಿ– ಕೃಷ್ಣಾ ಜೋಡಣೆ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ತೆಲಂಗಾಣ, ಗೋದಾವರಿ ನದಿಯಲ್ಲಿ ಕಳೆದ 50 ವರ್ಷ ಲಭ್ಯವಾಗಿರುವ ನೀರಿನ ಕುರಿತು ಅಧ್ಯಯನ ನಡೆಸಿ ಯೋಜನೆ ಕೈಗೆತ್ತಿಕೊಳ್ಳಬೇಕು. ಗೋದಾವರಿ ತಿರುವಿನಿಂದ ಲಭ್ಯವಾಗುವ ಶೇ 50ರಷ್ಟು ನೀರನ್ನು ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ರಾಜ್ಯಕ್ಕೆ ನೀರನ್ನು ಹಂಚಿಕೆ ಮಾಡಬೇಕು ಎಂಬ ಬೇಡಿಕೆ ಇರಿಸಿತು.

ಗೋದಾವರಿ ಮತ್ತು ಕೃಷ್ಣಾ ಕಣಿವೆಯ ಕೆಳಹಂತದ ರಾಜ್ಯಕ್ಕೆ ಅಗತ್ಯ ಪ್ರಮಾಣದ ನೀರನ್ನು ಹಂಚಿಕೆ ಮಾಡುವಂತೆ ಆಂದ್ರಪ್ರದೇಶ ಆಗ್ರಹಿಸಿದರೆ, ನದಿ ಜೋಡಣೆಯಿಂದ ಲಭ್ಯವಾಗುವ 247 ಟಿಎಂಸಿ ಅಡಿ ನೀರಿನ ಪೈಕಿ 200 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡುವಂತೆ ತಮಿಳುನಾಡು
ಕೋರಿತು.

‘ಕೇಂದ್ರ ಬಜೆಟ್‌ನಲ್ಲಿ ಘೋಷಿಸಿರುವ ಈ ಪ್ರಸ್ತಾವಿತ ಯೋಜನೆ ಜಾರಿಗೆ ಮುನ್ನ ಕಣಿವೆ ವ್ಯಾಪ್ತಿಯ ಎಲ್ಲ ರಾಜ್ಯಗಳ ಒಪ್ಪಿಗೆ ಪಡೆಯುವ ಅಗತ್ಯವಿದೆ. ಮೊದಲ ಬಾರಿ ನಡೆದ ಔಪಚಾರಿಕ ಸಭೆಯಲ್ಲಿ ಆಯಾ ರಾಜ್ಯ ಸರ್ಕಾರ
ಗಳು ತಮ್ಮ ಬೇಡಿಕೆಯ ಕುರಿತು ಪ್ರಸ್ತಾಪಿಸಿವೆ. ಈ ಸಂಬಂಧ ಪರಿಶೀಲನೆ ನಡೆಸಲಾಗುತ್ತದೆ ಎಂದು ಜಲಶಕ್ತಿ ಸಚಿವಾಲಯದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೃಷ್ಣಾ: ಪೀಠ ರಚನೆಗೆ ‘ಸುಪ್ರೀಂ’ಗೆ ಮನವಿ

ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಶೀಘ್ರವೇ ಪೀಠ ರಚಿಸುವಂತೆ ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ಮನವಿ ಸಲ್ಲಿಸಲಾಗಿದೆ.

ಕೃಷ್ಣಾ ಜಲವಿವಾದ ನ್ಯಾಯಮಂಡಳಿ ನೀಡಿರುವ ಐ ತೀರ್ಪಿನ ವಿರುದ್ಧ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆ ಬಾಕಿ ಇದ್ದು, ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್‌ ಹಾಗೂ ಎ.ಎಸ್‌. ಬೋಪಣ್ಣ ಅವರು ಜನವರಿಯಲ್ಲಿ ವಿಚಾರಣೆಯಿಂದ ಹಿಂದಕ್ಕೆ ಸರಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT