ಭಾನುವಾರ, ಮೇ 22, 2022
21 °C

ಅಸ್ಸಾಂ ಚುನಾವಣೆಯಲ್ಲಿ ಸ್ಪರ್ಧಿಸಲು ಆರ್‌ಜೆಡಿ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುವಾಹಟಿ: ಬಿಹಾರದ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಪಕ್ಷವು ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ.

ಅಸ್ಸಾಂನಲ್ಲಿ ಬಿಜೆಪಿ ಹಾಗೂ ಅದರ ಮೈತ್ರಿ ಪಕ್ಷಗಳನ್ನು ನೆಲ ಕಚ್ಚಿಸುವ ಗುರಿ ಹೊಂದಿರುವ ಆರ್‌ಜೆಡಿ, ಈ ಬಗ್ಗೆ ಕಾಂಗ್ರೆಸ್‌ ನೇತೃತ್ವದ ವಿರೋಧ ಪಕ್ಷಗಳ ’ಮಹಾಮೈತ್ರಿ‘ ನಾಯಕರ ಜೊತೆ ಮಾತುಕತೆ ನಡೆಸಿದೆ.

ಆರ್‌ಜೆಡಿ ಮುಖ್ಯಸ್ಥ ಹಾಗೂ ಬಿಹಾರದ ವಿರೋಧ ಪಕ್ಷದ ನಾಯಕ ತೇಜಸ್ವಿ ಪ್ರಸಾದ್‌ ಯಾದವ್‌ ಅವರು ಗುವಾಹಟಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ’ಅಸ್ಸಾಂನಲ್ಲಿ ಹಿಂದಿ ಮಾತನಾಡುವ ಮತದಾರರನ್ನು ಪಕ್ಷ ಗುರಿಯಾಗಿಸಿಕೊಳ್ಳುತ್ತದೆ. ಅಲ್ಲಿ ಹಿಂದಿ ಮಾತನಾಡುವವರ ಸಂಖ್ಯೆ ಶೇಕಡ 5ರಷ್ಟು.  ಅದರಲ್ಲಿ ಬಹುತೇಕರ ಮೂಲ ಬಿಹಾರ, ಉತ್ತರಪ್ರದೇಶ ಹಾಗೂ ಜಾರ್ಖಂಡ್‌ ಆಗಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಂತಹ ವಿಭಜಕ ಶಕ್ತಿಗಳ ಬೆದರಿಕೆ ವಿರುದ್ಧ ಅವರನ್ನು ಒಟ್ಟುಗೂಡಿಸುತ್ತೇವೆ.  ರಾಜ್ಯದ ಬಿಜೆಪಿ ಹಾಗೂ ಅದರ ಮೈತ್ರಿ ಪಕ್ಷಗಳ ವಿರುದ್ಧವಿರುವ ಪಕ್ಷಗಳ ನೆರವನ್ನು ಆರ್‌ಜೆಡಿ ಪಡೆದುಕೊಳ್ಳುತ್ತದೆ‘ ಎಂದು ಹೇಳಿದ್ದಾರೆ.

’ಕಾಂಗ್ರೆಸ್‌ ಯಾವಾಗಲೂ ನಮ್ಮ ಮಿತ್ರ. ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್‌– ಆರ್‌ಜೆಡಿ ಜೊತೆಗೆ ಸ್ಪರ್ಧಿಸಿದೆ. ಕೇಂದ್ರದ ಯುಪಿಎ ಮೈತ್ರಿಕೂಟದಲ್ಲೂ ಜೊತೆಗಿದ್ದೇವೆ. ಅಸ್ಸಾಂ ಚುನಾವಣೆ ಬಗ್ಗೆ ಕಾಂಗ್ರೆಸ್‌ ಹಾಗೂ ಆಲ್‌ ಇಂಡಿಯಾ ಯುನೈಟೆಡ್‌ ಡೆಮಾಕ್ರಟಿಕ್‌ ಫ್ರಂಟ್‌ ನಾಯಕ ಬದ್ರುದ್ದೀನ್‌ ಅಜ್ಮಲ್‌ ಜೊತೆಗೂ ಮಾತುಕತೆ ನಡೆಸಿದ್ದೇವೆ. ಮೈತ್ರಿ ಅಥವಾ ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಬೇಕು ಎಂಬ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳುತ್ತೇವೆ‘ ಎಂದು ಅವರು ಹೇಳಿದ್ದಾರೆ.

ಅಸ್ಸಾಂ ವಿಧಾನಸಭೆ ಚುನಾವಣೆಯು ಮೂರು ಹಂತಗಳಲ್ಲಿ ಮಾರ್ಚ್‌ 27, ಏಪ್ರಿಲ್‌ 1 ಹಾಗೂ ಏಪ್ರಿಲ್‌ 6ರಂದು ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು