ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವದ ಉಳಿವಿಗೆ ಕಾಂಗ್ರೆಸ್‌ ಪುನಶ್ಚೇತನ ಅಗತ್ಯ: ಸೋನಿಯಾ ಅಭಿಮತ

ಕಾಂಗ್ರೆಸ್‌ ಸಂಸದೀಯ ಪಕ್ಷದ ಸಭೆಯಲ್ಲಿ ಸೋನಿಯಾ ಅಭಿಮತ
Last Updated 5 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಕಾಂಗ್ರೆಸ್‌ ಪಕ್ಷದ ಮುಂದೆ, ಎಂದೂ ಇರದಂತಹ ದೊಡ್ಡ ಸವಾಲುಗಳಿವೆ. ಪಕ್ಷಕ್ಕಾಗಿ ಮಾತ್ರವಲ್ಲ, ದೇಶದ ಪ್ರಜಾಪ್ರಭುತ್ವದ ಉಳಿವಿಗಾಗಿ ಕಾಂಗ್ರೆಸ್‌ನ ಪುನಶ್ಚೇತನ ಅನಿವಾರ್ಯ’ ಎಂದು ಕಾಂಗ್ರಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹೇಳಿದ್ದಾರೆ.

ಕಾಂಗ್ರೆಸ್‌ ಸಂಸದೀಯ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಯಲ್ಲಿ ಪಕ್ಷವು ಕಳಪೆ ಸಾಧನೆ ಮಾಡಿದೆ. ಆ ಫಲಿತಾಂಶಗಳು ಆಘಾತಕಾರಿಯಾಗಿದ್ದವು ಮತ್ತು ತೀವ್ರ ನೋವನ್ನುಂಟು ಮಾಡಿದವು. ಇದರಿಂದ ನೀವು ತೀವ್ರ ಅಸಮಾಧಾನಕ್ಕೆ ಒಳಗಾಗಿದ್ದೀರಿ ಎಂಬ ಅರಿವು ನನಗೆ ಇದೆ. ಇಂತಹ ಸಂದರ್ಭದಲ್ಲಿ ಈ ರೀತಿಯ ಸಭೆಗಳ ಅನಿವಾರ್ಯ ಇದೆ. ನಮ್ಮ ಮುಂದೆ ಇರುವ ಸವಾಲುಗಳನ್ನು ಎದುರಿಸುವಲ್ಲಿ ಪಕ್ಷದ ಎಲ್ಲಾ ಮಟ್ಟದ ಕಾರ್ಯಕರ್ತರು ಏನು ಹೇಳುತ್ತಾರೆ ಎಂಬುದನ್ನು ಕೇಳಲು ಇಲ್ಲಿ ಅವಕಾಶ ಸಿಗುತ್ತದೆ’ ಎಂದು ಹೇಳಿದ್ದಾರೆ.

ಐದು ರಾಜ್ಯಗಳ ಚುನಾವಣೆಯ ನಂತರ ನಡೆದ ಕಾಂಗ್ರೆಸ್‌ ಸಂಸದೀಯ ಪಕ್ಷದ ಮೊದಲ ಸಭೆ ಇದಾಗಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ರಾಹುಲ್ ಗಾಂಧಿ ಮತ್ತು ಸಂಸತ್ತಿನ ಉಭಯ ಸದನಗಳಲ್ಲಿನ ಪಕ್ಷದ ಸಂಸದರು ಸಭೆಯಲ್ಲಿ ಭಾಗಿಯಾಗಿದ್ದರು.

‘ಎಲ್ಲಾ ರಾಜ್ಯಗಳಲ್ಲೂ ಬಿಜೆಪಿ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದೆ. ಆಡಳಿತ ಪಕ್ಷ ಮತ್ತು ಅದರ ನಾಯಕರ ಈ ನೀತಿಯನ್ನು ಸಾಮಾನ್ಯ ಎಂಬಂತೆ ಬಳಸುತ್ತಿದ್ದಾರೆ. ಜನರನ್ನು ವಿಭಜಿಸಲು ಬಿಜೆಪಿ ಇತಿಹಾಸವನ್ನು ತಿರುಚುತ್ತಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಇದರ ವಿರುದ್ಧ ನಾವು ಎದ್ದು ನಿಲ್ಲಬೇಕಿದೆ. ದೇಶದ ಜನರ ನಡುವಣ ಬಾಂಧವ್ಯ ಮತ್ತು ಸಾಮರಸ್ಯವನ್ನು ಈ ಜನರು ಹಾಳು ಮಾಡಲು ನಾವು ಅವಕಾಶ ಮಾಡಿಕೊಡಬಾರದು’ ಎಂದು ಅವರು ಕರೆ ನೀಡಿದ್ದಾರೆ.

‘ನಮ್ಮ ನೇತೃತ್ವದ ಯುಪಿಎ ಸರ್ಕಾರದ ಎಲ್ಲಾ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಟೀಕಿಸುತ್ತಿದ್ದರು. ಆದರೆ, ನಾವು ಜಾರಿಗೆ ತಂದಿದ್ದ ಆಹಾರ ಭದ್ರತಾ ಕಾಯ್ದೆ ಮತ್ತು ನರೇಗಾ ಯೋಜನೆಗಳೇ ಕೋವಿಡ್‌ ಕಾಲದಲ್ಲಿ ಜನರನ್ನು ಕಾಪಾಡಿದವು’ ಎಂದು ಅವರು ಹೇಳಿದ್ದಾರೆ. ‘ದೇಶದಲ್ಲಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರ ವಿರುದ್ಧ ಕಾಂಗ್ರೆಸ್‌ ಆರಂಭಿಸಿರುವ ಹೋರಾಟವು ಮುಂದುವರಿಯಬೇಕು’ ಎಂದು ಅವರು ಕರೆ ನೀಡಿದ್ದಾರೆ.

***

ಪಕ್ಷದ ಪುನರುತ್ಥಾನ ಹೇಗಾಗಬೇಕು ಎಂಬುದನ್ನು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿತ್ತು. ಅವುಗಳನ್ನು ಅನುಷ್ಠಾನಕ್ಕೆ ತರಲು ಸಿದ್ಧತೆ ನಡೆಸಲಾಗಿದೆ.

–ಸೋನಿಯಾ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT