ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಯಲ್ಲಿ ಹಣಬಲ ನಿಯಂತ್ರಿಸಲು ದೃಢ ವ್ಯವಸ್ಥೆ ಜಾರಿ

ಸುಪ್ರೀಂ ಕೋರ್ಟ್‌ಗೆ ಚುನಾವಣಾ ಆಯೋಗದ ಲಿಖಿತ ಉತ್ತರ
Last Updated 12 ಜನವರಿ 2023, 19:30 IST
ಅಕ್ಷರ ಗಾತ್ರ

ನವದೆಹಲಿ: ‘ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲ್ಲಲು ಅಪಾರ ಹಣ ವ್ಯಯಿಸುವುದರ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಹಣ ಬಲವನ್ನು ಗಂಭೀರವಾಗಿ ಪರಿಗಣಿಸಿದ್ದು ಇದಕ್ಕೆ ಕಡಿವಾಣ ಹಾಕುವುದಕ್ಕಾಗಿ ಈಗಾಗಲೇ ದೃಢ ಯಾಂತ್ರಿಕ ವ್ಯವಸ್ಥೆ ಜಾರಿಗೊಳಿಸಲಾಗಿದೆ’ ಎಂದು ಚುನಾವಣಾ ಆಯೋಗವು ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

‘ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಹಾಗೂ ಪಕ್ಷಗಳು ಮತದಾರರನ್ನು ಸೆಳೆಯಲು ಹಣದ ಹೊಳೆ ಹರಿಸುತ್ತಿದ್ದು, ಇದನ್ನು ನಿಯಂತ್ರಿಸಲು ಸಮಗ್ರ ಯೋಜನೆ ರೂಪಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಐಐಟಿ ಪದವೀಧರ ಪ್ರಭಾಕರ್‌ ದೇಶಪಾಂಡೆ ಎಂಬುವರು ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದರು. ಈ ಸಂಬಂಧ ಆಯೋಗವು ಗುರುವಾರ ನ್ಯಾಯಾಲಯಕ್ಕೆ ಲಿಖಿತ ಉತ್ತರ ಸಲ್ಲಿಸಿದೆ.

‘ಹಣ ಬಲಕ್ಕೆ ಕಡಿವಾಣ ಹಾಕಲು ಕಾಲ ಕಾಲಕ್ಕೆ ಅನುಗುಣವಾಗಿ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದೆಯೂ ಇದನ್ನು ಮುಂದುವರಿಸುತ್ತೇವೆ. 2010ರಲ್ಲಿ ಬಿಹಾರ ವಿಧಾನಸಭೆ ಚುನಾವಣೆ ನಡೆದಿತ್ತು. ಆಗಿನಿಂದಲೂ ಆಯೋಗವು ಚುನಾವಣಾ ವೆಚ್ಚ ನಿಗಾ ವ್ಯವಸ್ಥೆಯನ್ನು ಅತ್ಯಂತ ಪರಿಣಾಮಕಾರಿ ಹಾಗೂ ಯಶಸ್ವಿಯಾಗಿ ಜಾರಿಗೊಳಿಸಿಕೊಂಡು ಬಂದಿದೆ’ ಎಂದು ಆಯೋಗ ಹೇಳಿದೆ.

‘ಹಣ ಹಂಚಿಕೆ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ. ಹೀಗಾಗಿಯೇ ಚುನಾವಣೆ ಸಂದರ್ಭದಲ್ಲಿ ಅನಧಿಕೃತ ಹಣ ಜಪ್ತಿ ಮಾಡುವುದಕ್ಕೆ ಸಾಧ್ಯವಾಗಿದೆ. ಅಭ್ಯರ್ಥಿಗಳು ಚುನಾವಣೆ ವೇಳೆ ಪ್ರತ್ಯೇಕ ಬ್ಯಾಂಕ್‌ ಖಾತೆ ತೆರೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಪ್ರತಿದಿನವೂ ವೆಚ್ಚದ ಕುರಿತ ಮಾಹಿತಿಯನ್ನು ದಾಖಲೆ ಪುಸ್ತಕದಲ್ಲಿ ನಮೂದಿಸುವಂತೆಯೂ ಸೂಚಿಸಲಾಗಿದೆ’ ಎಂದೂ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT