ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಠಾಣೆ ಗುರಿಯಾಗಿಸಿ ಗ್ರೆನೇಡ್‌ ದಾಳಿ

ಪಾಕ್‌ನಲ್ಲಿ ನೆಲೆಯುಳ್ಳ ದುಷ್ಕರ್ಮಿಗಳ ಕೈವಾಡ ಶಂಕೆ * ತನಿಖೆ ಚುರುಕು
Last Updated 10 ಡಿಸೆಂಬರ್ 2022, 13:04 IST
ಅಕ್ಷರ ಗಾತ್ರ

ಟರ್ನ್ ತರನ್‌: ಪಂಜಾಬ್‌ನ ಗಡಿ ಜಿಲ್ಲೆ ಟರ್ನ್‌ ತರನ್‌ನ ಪೊಲೀಸ್‌ ಠಾಣೆಯನ್ನು ಗುರಿಯಾಗಿಸಿ ಶನಿವಾರ ದುಷ್ಕರ್ಮಿಗಳು ರಾಕೆಟ್‌ ಬಳಸಿ ಗ್ರೆನೇಡ್‌ (ಆರ್‌ಪಿಜಿ) ದಾಳಿ ನಡೆಸಿದ್ದಾರೆ. ಅದೃಷ್ಟವಶಾತ್‌ ಪ್ರಾಣಹಾನಿ ಸಂಭವಿಸಿಲ್ಲ.

‘ಗ್ರೆನೇಡ್‌ ಸೇನೆ ದರ್ಜೆಯದು. ಗಡಿಯಾಚೆಯಿಂದ ಕಳ್ಳಸಾಗಣೆ ಆಗಿರುವ ಸಾಧ್ಯತೆಗಳಿವೆ. ನೆರೆ ದೇಶವು ಭಾರತದಲ್ಲಿ ಅಶಾಂತಿ ಮೂಡಿಸಲು ಸಂಚು ನಡೆಸಿರುವುದಕ್ಕೆ ಇದು ನಿದರ್ಶನ’ ಎಂದು ಡಿಜಿಪಿ ಗೌರವ್ ಯಾದವ್ ತಿಳಿಸಿದ್ದಾರೆ.

ಅಮೃತಸರ ಹೆದ್ದಾರಿಯಲ್ಲಿ ಶುಕ್ರವಾರ ರಾತ್ರಿ ಗಡಿ ಭಾಗದಲ್ಲಿರುವ ಸರ್ಹಾಲಿ ಠಾಣೆ ಮತ್ತು ಅದಕ್ಕೆ ಹೊಂದಿಕೊಂಡಂತಿರುವ ಸುವಿಧಾ ಕೇಂದ್ರವನ್ನು ಗುರಿಯಾಗಿಸಿ ದಾಳಿ ನಡೆದಿದೆ.ಯುಎಪಿಎ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

‘ರಾಕೆಟ್ ಉಡಾವಣಾ ವಾಹಕ ವಶಕ್ಕೆ ಪಡೆಯಲಾಗಿದೆ. ತಾಂತ್ರಿಕ ಅಂಶಗಳ ಕುರಿತು ತನಿಖೆ ನಡೆದಿದೆ. ಕೃತ್ಯದ ಸ್ವರೂಪ ಅಂದಾಜಿಸಲು ಅಪರಾಧದ ಮರುಸೃಷ್ಟಿ ಮಾಡಿದ್ದು, ಸಾಕ್ಷ್ಯಗಳ ಸಂಗ್ರಹ ನಡೆದಿದೆ’ ಎಂದು ಹೇಳಿದರು.

ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸ್‌ ಗುಪ್ತದಳದ ಮುಖ್ಯ ಕಚೇರಿಯನ್ನು ಗುರಿಯಾಗಿಸಿ ಮೇ ತಿಂಗಳಲ್ಲಿ ನಡೆದಿದ್ದ ಆರ್‌ಪಿಜಿ ದಾಳಿಗೂ ಇದಕ್ಕೂ ಸಾಮ್ಯತೆ ಇದೆ. ಪ್ರಯೋಗಾಲಯದ ವರದಿ ನಿರೀಕ್ಷಿಸಲಾಗುತ್ತಿದೆ ಎಂದು ತಿಳಿಸಿದರು.

ಗ್ರೆನೇಡ್‌ ಮೊದಲು ಪೊಲೀಸ್‌ ಠಾಣೆ ಗೇಟ್‌ಗೆ ಬಡಿದು, ಬಳಿಕ ಸುವಿಧಾ ಕೇಂದ್ರದ ಮೇಲೆ ಅಪ್ಪಳಿಸಿದೆ. ಕೇಂದ್ರದ ಕಿಟಕಿ ಗಾಜುಗಳು ಜಖಂಗೊಂಡಿವೆ. ದಾಳಿ ನಡೆದಾಗ ಠಾಣೆಯಲ್ಲಿ ಕೆಲ ಸಿಬ್ಬಂದಿ ಇದ್ದರು ಎಂದು ತಿಳಿಸಿದರು.

ಸುವಿಧಾ ಕೇಂದ್ರದಿಂದ ಎಫ್‌ಐಆರ್ ಪ್ರತಿ ನೀಡುವುದು, ಪಾಸ್‌ಪೋರ್ಟ್‌ ಪರಿಶೀಲನೆ, ನಿರಾಕ್ಷೇಪಣಾ ಪತ್ರ ನೀಡುವುದು ಇತ್ಯಾದಿ ಸೇವೆ ನೀಡಲಾಗುತ್ತಿತ್ತು. ಈ ಕೃತ್ಯ ಕುರಿತಂತೆ ಗಡಿಭದ್ರತಾ ಪಡೆ ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ಸಹಯೋಗದಲ್ಲಿ ರಾಜ್ಯ ಪೊಲೀಸರು ತನಿಖೆ ನಡೆಸುವರು ಎಂದು ಹೇಳಿದರು.

ಹೇಡಿತನದ ಕೃತ್ಯ –ಡಿಜಿಪಿ
ಟರ್ನ್‌ ತರನ್‌:
ಇದು ಹೇಡಿತನದ ಕೃತ್ಯ. ಡ್ರೋನ್ ಬಳಸಿ ಸಾಗಿಸುತ್ತಿದ್ದ ದೊಡ್ಡ ಪ್ರಮಾಣದಲ್ಲಿ ಮಾದಕ ವಸ್ತು, ಶಸ್ತ್ರಾಸ್ತ್ರಗಳ ಜಪ್ತಿ ಬಳಿಕ ಶತ್ರು ದೇಶವು ನಲುಗಿದೆ ಎಂದು ಡಿಜಿಪಿ ಗೌರವ್‌ ಯಾದವ್‌ ಹೇಳಿದರು.

ಕಳೆದ ಒಂದು ತಿಂಗಳಲ್ಲಿಯೇ ಗಡಿ ದಾಟಿ 200ಕ್ಕೂ ಹೆಚ್ಚು ಡ್ರೋನ್‌ಗಳು ಬಂದಿವೆ. ಹಲವು ಡ್ರೋನ್‌ಗಳಿಂದ ಮಾದಕವಸ್ತು, ಶಸ್ತ್ರಾಸ್ತ್ರ, ಸ್ಫೋಟಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅವರ ಹೇಳಿದರು.

ಪಾಕಿಸ್ತಾನದಲ್ಲಿ ನೆಲೆಯೂರಿರುವ ಅಥವಾ ಯೂರೋಪ್‌ ಮತ್ತು ಉತ್ತರ ಅಮೆರಿಕದ ಜೊತೆಗೆ ಸಂಪರ್ಕವುಳ್ಳ ದುಷ್ಕರ್ಮಿಗಳ ಪಾತ್ರ ಕುರಿತು ತನಿಖೆ ನಡೆದಿದೆ. ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ನೀಡಲಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT