ನವದೆಹಲಿ: ‘ಭಾರತವು ಪಾಕಿಸ್ತಾನದ ರಕ್ಷಣೆಗೆ ಧಾವಿಸಬೇಕು ಮತ್ತು ಪಾಕಿಸ್ತಾನವೂ ಭಾರತದ ನೆರವು ಯಾಚಿಸಬೇಕಿತ್ತು’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್ಎಸ್) ಸಹಕಾರ್ಯವಾಹ ಕೃಷ್ಣ ಗೋಪಾಲ್ ಅವರು ಹೇಳಿದ್ಧಾರೆ.
ಖಾಸಗಿ ಸುದ್ದಿವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಗೋಪಾಲ್, ‘ಸರ್ವೇ ಭವಂತು ಸುಖಿನಃ’ ಎನ್ನುವ ತತ್ವವನ್ನ ಭಾರತವು ಅನುಸರಿಸಬೇಕು. ನಮ್ಮ ನೆರೆಹೊರೆಯವರು ಸೇರಿದಂತೆ ಯಾರೂ ಹಸಿವಿನಿಂದ ಮಲಗಬಾರದು. ಭಾರತವು ಪಾಕಿಸ್ತಾನಕ್ಕೆ ಗೋಧಿಯನ್ನು ಕಳುಹಿಸುತ್ತಿದ್ದರೆ, ನೆರೆಯ ದೇಶವಾಗಿ ಅದು ಭಾರತದ ಮೇಲಿನ ದಾಳಿಯನ್ನು ಮುಂದುವರಿಸಿದೆ’ ಎಂದರು.
‘ಎಲ್ಲರೂ ಸಂತೋಷವಾಗಿರಬೇಕು. ಜಗತ್ತಿನಲ್ಲಿ ಯಾರೂ ಹಸಿವಿನಿಂದ ಮಲಗಬಾರದು. ಪಾಕಿಸ್ತಾನವು ಇಂದು ಸಂಕಷ್ಟದಲ್ಲಿದೆ. ಆದರೂ ಅದು ಭಾರತದ ಮೇಲಿನ ದಾಳಿಯನ್ನು ನಿಲ್ಲಿಸಿಲ್ಲ. ಒಂದು ವೇಳೆ ಪಾಕಿಸ್ತಾನವು ಭಾರತಕ್ಕೆ ನೆರವು ಕೇಳಿದರೆ, ನಾವು ಯಾವುದೇ ಪ್ರಶ್ನೆಗಳಿಲ್ಲದೇ ಅದರ ನೆರವಿಗೆ ಧಾವಿಸುತ್ತೇವೆ. ಇದು ಭಾರತದ ಸನಾತನ ಸಂಪ್ರದಾಯ. ಕೋವಿಡ್ ಸಂದರ್ಭದಲ್ಲಿ ಆ ದೇಶಕ್ಕೆ ತುರ್ತಾಗಿ ಬೇಕಾಗಿದ್ದ ಔಷಧಿಗಳು ಮತ್ತು ಲಸಿಕೆಗಳನ್ನು ನಾವು ತಲುಪಿಸಿದ್ದೆವು. ಅಂತೆಯೇ ಗೋಧಿಯನ್ನೂ ತಲುಪಿಸಿದ್ದೇವೆ. ಭಾರತವು ಹೆಚ್ಚುವರಿ ಪ್ರಮಾಣದಲ್ಲಿ ಗೋಧಿ ಹೊಂದಿದೆ. ಆದರೂ ಪಾಕಿಸ್ತಾನ ತನ್ನ ಮೊಂಡುತನ ಬಿಡಲು ಸಿದ್ಧವಿಲ್ಲ. ಅದು ಅವರ ಸಮಸ್ಯೆ’ ಎಂದು ಗೋಪಾಲ್ ಹೇಳಿದ್ದಾರೆ.
ಪಾಕಿಸ್ತಾನ ಕೇಳದಿದ್ದರೂ ಭಾರತವು ಆ ದೇಶಕ್ಕೆ ಸಹಾಯ ಮಾಡುತ್ತದೆಯೇ ಎನ್ನುವ ಪ್ರಶ್ನೆಗೆ, ‘ಭಾರತವು 1.5 ಲಕ್ಷ ಟನ್‌ಗಳಷ್ಟು ಹೆಚ್ಚುವರಿ ಗೋಧಿಯನ್ನು ಉತ್ಪಾದಿಸುತ್ತದೆ ಮತ್ತು ಪಾಕಿಸ್ತಾನಕ್ಕೆ ಗೋಧಿಯನ್ನು ನೀಡಬಹುದು, ಅಲ್ಲಿ ಅದನ್ನು ಪ್ರಸ್ತುತ ಒಂದು ಕಿಲೋಗೆ ₹ 250 ಗೆ ಮಾರಾಟ ಮಾಡಲಾಗುತ್ತಿದೆ’ ಎಂದು ಉತ್ತರಿಸಿದರು.
‘ಪಾಕಿಸ್ತಾನವು ತನ್ನ ಮಾರ್ಗವನ್ನು ಸರಿಪಡಿಸಿಕೊಳ್ಳಬೇಕು ಮತ್ತು ನಂಬಿಕೆ ದ್ರೋಹದ ಆಧಾರದ ಮೇಲೆ ಪಾಕಿಸ್ತಾನವು ರಚನೆಯಾಗಿದೆ ಎಂಬುದಾಗಿ ಆರ್‌ಎಸ್‌ಎಸ್ ನಂಬುತ್ತದೆ. ಇಲ್ಲಿ ಹಿಂದೂಗಳೊಂದಿಗೆ ಇರಲು ಸಾಧ್ಯವಿಲ್ಲ ಎಂದು ಜಿನ್ನಾ ಹೇಳಿದ್ದರು. ಆದರೆ, ಅವರ ತಪ್ಪು ಕಲ್ಪನೆ. ಏಕೆಂದರೆ ವಿಭಜನೆಯ ನಂತರವೂ ಭಾರತದಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ನೆಮ್ಮದಿಯಿಂದ ಬದುಕುತ್ತಿದ್ದಾರೆ, ವಿಭಜನೆಯಾದಾಗ ಭಾರತದಲ್ಲಿ 3.5 ಕೋಟಿ ಮುಸ್ಲಿಮರಿದ್ದರೆ, ಈಗ 14 ಕೋಟಿಗೂ ಹೆಚ್ಚು ಜನರಿದ್ದಾರೆ. ಆದರೆ ಪಾಕಿಸ್ತಾನದಲ್ಲಿ, ಆಗ ಹಿಂದೂಗಳು ಶೇ 11ರಷ್ಟಿದ್ದರು. ಈಗ ಅವರ ಸಂಖ್ಯೆ ಶೇ 1ಕ್ಕಿಂತಲೂ ಕಡಿಮೆಯಾಗಿದೆ’ ಎಂದೂ ಗೋಪಾಲ್ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.