ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ವೈಫಲ್ಯ ಮುಚ್ಚಿಹಾಕಲು ಆರೆಸ್ಸೆಸ್‌ ಮತಾಂತರ ವಿಚಾರ ಕೆದಕುತ್ತಿದೆ: ಮಾಯಾವತಿ

Last Updated 22 ಅಕ್ಟೋಬರ್ 2022, 11:00 IST
ಅಕ್ಷರ ಗಾತ್ರ

ಲಖನೌ: ಬಿಜೆಪಿ ವೈಫಲ್ಯವನ್ನು ಮುಚ್ಚಿಹಾಕಲು ಮತಾಂತರ ಮತ್ತು ಜನಸಂಖ್ಯಾ ನೀತಿಗೆ ಸಂಬಂಧಿಸಿದ ವಿಚಾರಗಳನ್ನು ಆರ್‌ಎಸ್‌ಎಸ್‌ ಕೆದಕುತ್ತಿದೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಆರೋಪಿಸಿದ್ದಾರೆ. ಈ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶಗೊಂಡಿರುವ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ನಡೆದಿದೆ ಎಂದಿದ್ದಾರೆ.

ರಾಷ್ಟ್ರದ ಇಂದಿನ ಪರಿಸ್ಥಿತಿ ಬಗ್ಗೆ ಆರ್‌ಎಸ್‌ಎಸ್‌ ಮೌನ ವಹಿಸಿರುವುದು ಅತ್ಯಂತ ಕಳವಳಕಾರಿ ವಿಚಾರ ಎಂದೂ ಮಾಯಾವತಿ ಹೇಳಿದ್ದಾರೆ.

ಹಣದುಬ್ಬರ, ನಿರುದ್ಯೋಗ, ಹಿಂಸಾಕೃತ್ಯಗಳು ಮತ್ತು ಸಾಮಾಜಿಕ ಶಾಂತಿಭಂಗಗಳಂತಹ ಗಂಭೀರ ಸಮಸ್ಯೆಗಳು ರಾಷ್ಟ್ರದಲ್ಲಿ ಶಾಪವಾಗಿ ಪರಿಣಮಿಸಿವೆ. ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಆರ್‌ಎಸ್‌ಎಸ್‌ ಮತಾಂತರ ಮತ್ತು ಜನಸಂಖ್ಯಾ ನೀತಿ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದೆ. ಬಿಜೆಪಿ ಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕಲು ಹೆಣೆದಿರುವ ಯೋಜಿತ ಕುತಂತ್ರ ಇದಾಗಿದೆ ಎಂದು ಮಾಯಾವತಿ ಗಂಭೀರ ಆರೋಪ ಮಾಡಿದ್ದಾರೆ.

2024ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಆರ್‌ಎಸ್‌ಎಸ್‌ ಈ ವಿಚಾರಗಳನ್ನು ಮುನ್ನೆಲೆಗೆ ತಂದಿದೆ. ಇದು ಬಿಜೆಪಿ ಸರ್ಕಾರವನ್ನು ಉಳಿಸಲು ಹೆಣೆದಿರುವ ಯೋಜಿತ ಕುತಂತ್ರ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಮಾಯಾವತಿ ಒತ್ತಿ ಹೇಳಿದ್ದಾರೆ.

ಬಿಜೆಪಿ ವಿಚಾರವಾಗಿ ಆರ್‌ಎಸ್‌ಎಸ್‌ ಬೆಂಬಲಿಗರು ಸದಾ ಕಣ್ಮುಚ್ಚಿ ಕುಳಿತಿರುತ್ತಾರೆ. ಅವರ ಸರ್ಕಾರದ ವೈಫಲ್ಯಗಳನ್ನು ಮತ್ತು ಸಮಾಜ ವಿರೋಧಿ ನೀತಿಗಳನ್ನು ಎಂದಿಗೂ ಸಾರ್ವಜನಿಕವಾಗಿ ಆರ್‌ಎಸ್‌ಎಸ್‌ ವಿರೋಧಿಸಿಲ್ಲ. ರಾಷ್ಟ್ರದಲ್ಲಿ ಇಂದು ಸಂಭವಿಸುತ್ತಿರುವ ಘಟನೆಗಳ ಕುರಿತು ಆರ್‌ಎಸ್‌ಎಸ್‌ ಮೌನಗೊಂಡಿರುವುದು ವಿಷಾದಕರ ಮಾತ್ರವಲ್ಲ, ಅಪಾಯಕಾರಿಯೂ ಆಗಿದೆ ಎಂದು ಮಾಯಾವತಿ ತಿಳಿಸಿದ್ದಾರೆ.

ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಇತ್ತೀಚೆಗೆ, ರಾಷ್ಟ್ರದಲ್ಲಿ ಜನಸಂಖ್ಯೆ ಅಸಮತೋಲನಕ್ಕೆ ಮತಾಂತರ ಮತ್ತು ಬಾಂಗ್ಲಾದೇಶದ ಅಕ್ರಮ ಒಳನುಸುಳುಕೋರರು ಪ್ರಮುಖ ಕಾರಣ ಎಂದಿದ್ದರು. ಈ ಹೇಳಿಕೆಗೆ ಸಂಬಂಧಿಸಿ ಮಾಯಾವತಿ ಅವರು ಶನಿವಾರ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT