ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರ ಪ್ರದೇಶ: ವಿಧಾನಸಭೆಯಲ್ಲಿ ಟಿಡಿಪಿ, ವೈಎಸ್‌ಆರ್‌ಸಿಪಿ ಗದ್ದಲ

ತಮ್ಮ ಪಕ್ಷದ ದಲಿತ ಶಾಸಕರ ಮೇಲೆ ಹಲ್ಲೆ ನಡೆದಿದೆ ಎಂದು ಉಭಯ ಪಕ್ಷಗಳ ಆರೋಪ
Last Updated 20 ಮಾರ್ಚ್ 2023, 19:21 IST
ಅಕ್ಷರ ಗಾತ್ರ

ಹೈದರಾಬಾದ್‌: ಆಂಧ್ರ ಪ್ರದೇಶದ ವಿಧಾನಸಭೆಯಲ್ಲಿ ಸೋಮವಾರ ಬಜೆಟ್‌ ಅಧಿವೇಶನದ ವೇಳೆ ವಿರೋಧ ಪಕ್ಷ ಟಿಡಿಪಿ ಮತ್ತು ಆಡಳಿತಾರೂಢ ವೈಎಸ್‌ಆರ್‌ಪಿಸಿ ಶಾಸಕರ ನಡುವೆ ಗದ್ದಲ ಉಂಟಾಗಿ, ಕೋಲಾಹಲ ಸೃಷ್ಟಿಯಾಯಿತು. ಎರಡೂ ಪಕ್ಷಗಳ ಶಾಸಕರು ಪರಸ್ಪರರ ವಿರುದ್ಧ ಹಲ್ಲೆಯ ಆರೋಪಗಳನ್ನು ಮಾಡಿದ್ದಾರೆ.

ತಮ್ಮ ಪಕ್ಷದ ಶಾಸಕರ ಮೇಲಿನ ದಾಳಿಯನ್ನು ಖಂಡಿಸಿರುವ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು, ‘ಇದು ಆಂಧ್ರ ಪ್ರದೇಶ ವಿಧಾನಸಭೆಯ ಇತಿಹಾಸದಲ್ಲಿ ಕರಾಳ ದಿನ’ ಎಂದು ಬಣ್ಣಿಸಿದ್ದಾರೆ.

ಇದಕ್ಕೆ ತೀವ್ರವಾಗಿಯೇ ಪ್ರತಿಕ್ರಿಯಿಸಿರುವ ವೈಎಸ್‌ಆರ್‌ಪಿಸಿ, ‘ಟಿಡಿಪಿ ಶಾಸಕರು ಸಭಾಪತಿ ಪೀಠ ಮತ್ತು ದಲಿತ ಶಾಸಕರ ಮೇಲೆ ಸದನದಲ್ಲಿ ದಾಳಿ ನಡೆಸಿದ್ದಾರೆ’ ಎಂದು ಆರೋಪಿಸಿದೆ. ಅಲ್ಲದೆ ಇದನ್ನು ‘ಪ್ರಜಾಪ್ರಭುತ್ವದ ಕರಾಳ ದಿನ’ ಎಂದು ಬಣ್ಣಿಸಿರುವ ವೈಎಸ್‌ಆರ್‌ಸಿಪಿ, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳವಂತೆ ಆಗ್ರಹಿಸಿದೆ.

ವಿಧಾನ ಪರಿಷತ್ತಿನ ಪದವೀಧರರ ಕ್ಷೇತ್ರದ ಫಲಿತಾಂಶ ಶನಿವಾರವಷ್ಟೇ ಪ್ರಕಟವಾಗಿದ್ದು, ಮೂರೂ ಕ್ಷೇತ್ರಗಳಲ್ಲಿ ಟಿಡಿಪಿ ಜಯ ಸಾಧಿಸಿದೆ. ಈ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ. ಇದರ ಬೆನ್ನಲೇ ವಿಧಾನಸಭೆಯಲ್ಲಿ ಎರಡೂ ಪಕ್ಷಗಳ ಶಾಸಕರ ನಡುವೆ ಕಲಹ ನಡೆದಿದೆ.

ರಾಜ್ಯದಾದ್ಯಂತ ಹೆದ್ದಾರಿ, ಪುರಸಭೆ ಮತ್ತು ಪಂಚಾಯತ್‌ ವ್ಯಾಪ್ತಿಯ ರಸ್ತೆಗಳಲ್ಲಿ ಸಾರ್ವಜನಿಕ ಸಭೆಗಳು ಮತ್ತು ರ್‍ಯಾಲಿಗಳನ್ನು ನಿಷೇಧಿಸಿ ವೈ.ಎಸ್‌. ಜಗನ್‌ ಮೋಹ್‌ ರೆಡ್ಡಿ ಸರ್ಕಾರ ಜನವರಿಯಲ್ಲಿ ಹೊರಡಿಸಿದ್ದ ವಿವಾದಾತ್ಮಕ ಆದೇಶವನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಟಿಡಿಪಿ ಶಾಸಕರು ಸೋಮವಾರ ಸದನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಸ್ಪೀಕರ್‌ ತಮ್ಮಿನೇನಿ ಸೀತಾರಾಂ ಅವರ ಪೀಠವನ್ನು ಸುತ್ತುವರಿದು ಘೋಷಣೆಗಳನ್ನು ಕೂಗಿದರು.

ವಿರೋಧ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರು ಕಂದುಕೂರ್‌ ಮತ್ತು ಗುಂಟೂರಿನಲ್ಲಿ ನಡೆಸಿದ ಕಾರ್ಯಕ್ರಮಗಳ ವೇಳೆ ಕಾಲ್ತುಳಿತಕ್ಕೆ ಸಿಲುಕಿ 11 ಮಂದಿ ಬಲಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಹೆದ್ದಾರಿ, ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕ ಸಭೆ, ರ್‍ಯಾಲಿಗಳನ್ನು ನಿಷೇಧಿಸಿ ಆದೇಶಿಸಿತ್ತು.

ಸರ್ಕಾರದ ಈ ಆದೇಶವನ್ನು ವಿರೋಧಿಸಿ ಟಿಡಿಪಿ ಸದಸ್ಯರು ಭಿತ್ತಿಪತ್ರಗಳನ್ನು ಹಿಡಿದು, ಘೋಷಣೆ ಕೂಗಿದರು. ಅಲ್ಲದೆ ಕೆಲ ಕಾಗದಗಳನ್ನು ಹರಿದು ಪೀಠದತ್ತ ಎಸೆದರು. ಈ ವೇಳೆ ವೈಎಸ್‌ಆರ್‌ಸಿಪಿ ಸದಸ್ಯರೂ ಪೀಠದ ಬಳಿ ಜಮಾಯಿಸಿದರು. ಆಗ ಎರಡೂ ಪಕ್ಷಗಳ ಶಾಸಕರು ಕೈ ಕೈ ಮಿಲಾಯಿಸಿ, ಹೊಡೆದಾಡಿಕೊಂಡ ಘಟನೆ ನಡೆಯಿತು.

ದಲಿತ ಸಮುದಾಯಕ್ಕೆ ಸೇರಿದ ತಮ್ಮ ಶಾಸಕ ಡೋಲಾ ಬಾಲ ವೀರಾಂಜನೇಯ ಸ್ವಾಮಿ ಅವರ ಮೇಲೆ ವೈಎಸ್‌ಆರ್‌ಸಿಪಿ ಶಾಸಕರು ಹಲ್ಲೆ ನಡೆಸಿದ್ದಾರೆ ಎಂದು ಟಿಡಿಪಿ ದೂರಿದೆ. ಇದಕ್ಕೆ ಪ್ರತಿಯಾಗಿ ತಮ್ಮ ಪಕ್ಷದ ದಲಿತ ಸಮುದಾಯದ ಶಾಸಕ ಸುಧಾಕರ್‌ ಬಾಬು ಅವರ ಮೇಲೆ ಟಿಡಿಪಿ ಶಾಸಕರು ಹಲ್ಲೆ ಮಾಡಿದ್ದಾರೆ ಎಂದು ವೈಎಸ್‌ಆರ್‌ಸಿಪಿ ಆಕ್ರೋಶ ವ್ಯಕ್ತಪಡಿಸಿದೆ.

ವಿಧಾನಸಭಾ ಕಲಾಪದಿಂದ ದೂರ ಉಳದಿರುವ ಚಂದ್ರಬಾಬು ನಾಯ್ಡು ಅವರು, ‘ಸ್ವಾಮಿ ಅವರ ಮೇಲಿನ ಹಲ್ಲೆಯು ಪೂರ್ವ ಯೋಜಿತವಾಗಿದ್ದು, ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿಯ ಕುಮ್ಮಕ್ಕಿನಿಂದ ಇದು ನಡೆದಿದೆ’ ಎಂದು ಆರೋಪಿಸಿದ್ದಾರೆ.

‘ಜಗನ್‌ ಅವರು ಶಾಸಕಾಂಗದ ಘನತೆಯನ್ನು ಹಾಳುಗೆಡವಿ, ಅದನ್ನು ಕೌರವ ಸಭೆಯನ್ನಾಗಿ ಮಾಡಿದ್ದಾರೆ. ವಿಧಾನ ಪರಿಷತ್ತಿನ ಪದವೀಧರ ಕ್ಷೇತ್ರಗಳ ಫಲಿತಾಂಶ ಮುಖ್ಯಮಂತ್ರಿಯ ತಲೆಕೆಡಿಸಿದೆ’ ಎಂದು ನಾಯ್ಡು ದೂರಿದ್ದಾರೆ.

ಇದಕ್ಕೆ ಪ್ರತಿಯಾಗಿ ಪ್ರತಿಕ್ರಿಯಿಸಿರುವ ವೈಎಸ್‌ಆರ್‌ಸಿಪಿ ಶಾಸಕರು, ‘ಚಂದ್ರಬಾಬು ನಾಯ್ಡು ಅವರ ನಿರ್ದೇಶನದ ಮೇರೆಗೆ ಟಿಡಿಪಿ ಶಾಸಕರು ಸ್ಪೀಕರ್‌ ಮೇಲೆ ದಾಳಿ ಮಾಡಿ, ದಲಿತ ಶಾಸಕರ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT