ಗುರುವಾರ , ಜುಲೈ 7, 2022
20 °C

ರಷ್ಯಾ–ಉಕ್ರೇನ್ ಬಿಕ್ಕಟ್ಟು ಮಾತುಕತೆ ಮೂಲಕ ಬಗೆಹರಿಯಲಿ: ರಾಜನಾಥ್ ಸಿಂಗ್

ಪಿಟಿಐ Updated:

ಅಕ್ಷರ ಗಾತ್ರ : | |

ಬಲಿಯಾ: ರಷ್ಯಾ ಹಾಗೂ ಉಕ್ರೇನ್ ಮಧ್ಯೆ ಸಂಭವಿಸಿರುವ ಬಿಕ್ಕಟ್ಟು ಮಾತುಕತೆ ಮೂಲಕ ಬಗೆಹರಿಯಲಿ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಶಿಸಿದ್ದಾರೆ. ಭಾರತವು ಶಾಂತಿಗೆ ಒತ್ತು ನೀಡುತ್ತದೆ ಎಂದು ಅವರು ಹೇಳಿದ್ದಾರೆ.

ಉತ್ತರ ಪ್ರದೇಶದ ಬಾನ್ಶಿ ಬಜಾರ್‌ನಲ್ಲಿ ಚುನಾವಣಾ ಸಭೆಯ ಬಳಿಕ ಮಾತನಾಡಿದ ಅವರು, ನಮಗೆ ದೊರೆತಿರುವ ಮಾಹಿತಿ ಪ್ರಕಾರ ರಷ್ಯಾ ಅಧ್ಯಕ್ಷರ ಜತೆಗೆ ಮಾತುಕತೆಗೆ ಸಿದ್ಧರಿದ್ದೇವೆ ಎಂದು ಅಮೆರಿಕದ ಅಧ್ಯಕ್ಷರು ಹೇಳಿದ್ದಾರೆ ಎಂದರು.

‘ಅಮೆರಿಕದ ಅಧ್ಯಕ್ಷರು ಅವರ ಕಡೆಯಿಂದ ಕೆಲವು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಯಾವುದೇ ರೀತಿಯಲ್ಲಾದರೂ ಸರಿ, ಶಾಂತಿ ನೆಲೆಸಬೇಕು ಎಂದು ಭಾರತವೂ ಬಯಸುತ್ತಿದೆ. ಮಾತುಕತೆಗಳು ನಡೆದಾಗ ಯಾವುದಾದರೂ ಪರಿಹಾರ ದೊರೆಯಬಹುದು ಎಂಬ ಬಗ್ಗೆ ನಮಗೆ ಖಾತರಿಯಿದೆ’ ಎಂದು ಅವರು ಹೇಳಿದ್ದಾರೆ.

ಉಭಯ ದೇಶಗಳ ನಡುವಣ ಬಿಕ್ಕಟ್ಟಿನ ಬಗ್ಗೆ ಭಾರತದ ನಿಲುವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಾವು ಶಾಂತಿ ಬಯಸುತ್ತೇವೆ. ನಾವು ಯಾವಾಗಲೂ ವಿಶ್ವ ಶಾಂತಿಯ ಪರವಾಗಿದ್ದೇವೆ ಎಂದು ಹೇಳಿದ್ದಾರೆ.

ರಷ್ಯಾ ಬಂಡುಕೋರರ ಹಿಡಿತದಲ್ಲಿರುವ ಪೂರ್ವ ಉಕ್ರೇನ್‌ನ ಎರಡು ಪ್ರದೇಶಗಳನ್ನು ಸ್ವತಂತ್ರ ಎಂದು ಘೋಷಿಸಲು ಮುಂದಾಗಿರುವ ರಷ್ಯಾ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೊಸ ನಿರ್ಬಂಧಗಳನ್ನು ವಿಧಿಸಲು ನಿರ್ಧರಿಸಿದ್ದಾರೆ ಎಂದು ಶ್ವೇತಭವನ ಹೇಳಿತ್ತು. ಈ ಮಧ್ಯೆ, ಉಕ್ರೇನ್‌ನಲ್ಲಿ ಪ್ರತ್ಯೇಕತಾವಾದಿಗಳ ವಶದಲ್ಲಿರುವ ಎರಡು ಪ್ರದೇಶಗಳಿಗೆ ಯುದ್ಧ ಸನ್ನದ್ಧತೆಗೆ ಪುಟಿನ್‌ ಆದೇಶ ನೀಡಿದ ಕೂಡಲೇ ನಾವು ರಷ್ಯಾದ ಮೇಲೆ ತೀವ್ರ ಆರ್ಥಿಕ ದಿಗ್ಬಂಧನ ಹೇರುತ್ತೇವೆ ಎಂದು ಬ್ರಿಟನ್‌ನ ಪ್ರಧಾನಿ ಬೋರಿಸ್‌ ಜಾನ್ಸನ್‌ ಕೂಡ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು