ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ–ಪುಟಿನ್‌ ಮಾತುಕತೆ: ಭಾರತೀಯರ ಸ್ಥಳಾಂತರಕ್ಕೆ ರಷ್ಯಾದಿಂದ ನೆರವಿನ ಭರವಸೆ

Last Updated 7 ಮಾರ್ಚ್ 2022, 16:12 IST
ಅಕ್ಷರ ಗಾತ್ರ

ಮಾಸ್ಕೊ: ಯುದ್ಧ ಪೀಡಿತ ಪೂರ್ವ ಉಕ್ರೇನ್‌ನ ಸುಮಿ ನಗರದಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು, ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ನಮ್ಮ ಪಡೆಗಳು ಸಕಲ ರೀತಿಯಲ್ಲೂ ಪ್ರಯತ್ನಿಸುತ್ತಿವೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭರವಸೆ ನೀಡಿದ್ದಾರೆ.

ಈ ಬಗ್ಗೆ ರಷ್ಯಾ ಅಧ್ಯಕ್ಷರ ಕಚೇರಿಯು ಮಾಧ್ಯಮ ಪ್ರಕಟಣೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ವ್ಲಾಡಿಮಿರ್‌ ಪುಟಿನ್‌ ಅವರ ನಡುವೆ ಸೋಮವಾರ 50 ನಿಮಿಷಗಳ ದೂರವಾಣಿ ಸಂಭಾಷಣೆ ನಡೆಯಿತು. ಸುಮಿ ನಗರದಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಮೋದಿ ಆತಂಕ ವ್ಯಕ್ತಪಡಿಸಿದರು. ಅವರನ್ನು ಶೀಘ್ರವಾಗಿ ಸ್ಥಳಾಂತರಿಸಲು ನೆರವು ನೀಡುವಂತೆ ಮನವಿ ಮಾಡಿದರು.

ಸುಮಾರು 700 ಭಾರತೀಯ ವಿದ್ಯಾರ್ಥಿಗಳು ಸುಮಿಯಲ್ಲಿ ಸಿಲುಕಿಕೊಂಡಿದ್ದಾರೆ ಮತ್ತು ಅವರ ಸುರಕ್ಷಿತ ಸ್ಥಳಾಂತರಕ್ಕಾಗಿ ‘ಮಾನವೀಯ ಕಾರಿಡಾರ್’ ಅನ್ನು ರಚಿಸುವಂತೆ ಭಾರತವು ಎರಡೂ ಕಡೆಯವರನ್ನು ಒತ್ತಾಯಿಸುತ್ತಿದೆ.

‘ಸುಮಿಯಿಂದ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ರಷ್ಯಾದ ಮಿಲಿಟರಿ ಸಕಲ ಪ್ರಯತ್ನ ಮಾಡುತ್ತಿರುವುದಾಗಿ ಪುಟಿನ್‌ ಅವರು ಪ್ರಧಾನಿ ಮೋದಿಯವರಿಗೆ ತಿಳಿಸಿದ್ದಾರೆ‘ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

‘ಹಾರ್ಕೋವ್‌ನಲ್ಲಿ ತೀವ್ರಗಾಮಿಗಳು ಭಾರತೀಯ ವಿದ್ಯಾರ್ಥಿಗಳನ್ನು ವಶದಲ್ಲಿಟ್ಟುಕೊಂಡಿದ್ದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಉಂಟಾದ ಪರಿಣಾಮವಾಗಿ ಅವರನ್ನು ಮುಕ್ತಗೊಳಿಸಲಾಯಿತು. ಸುಮಿಯಲ್ಲಿರುವ ಭಾರತೀಯ ವಿದ್ಯಾರ್ಥಿಗಳು, ನಾಗರಿಕರನ್ನು ಸ್ಥಳಾಂತರ ಮಾಡಲು ರಷ್ಯಾ ಮಿಲಿಟರಿ ಶ್ರಮಿಸುತ್ತಿದೆ’ ಎಂದೂ ಹೇಳಿದೆ.

‘ಭಾರತೀಯರು ತಾಯ್ನಾಡಿಗೆ ಮರಳುವುದನ್ನು ಖಾತ್ರಿಪಡಿಸುವ ಕ್ರಮಗಳನ್ನು ಕೈಗೊಂಡಿರುವುದಕ್ಕಾಗಿ ಮೋದಿ ರಷ್ಯಾಕ್ಕೆ ಧನ್ಯವಾದ ಅರ್ಪಿಸಿದ್ದಾರೆ ಎಂದೂ ಕ್ರೆಮ್ಲಿನ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT