ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಸಲಿಂಗ ಸಾಂಗತ್ಯಕ್ಕೆ ಮದುವೆಯ ಹಂಗು ಬೇಕೇ?

Last Updated 20 ಸೆಪ್ಟೆಂಬರ್ 2020, 4:24 IST
ಅಕ್ಷರ ಗಾತ್ರ

ಬಸವಕಲ್ಯಾಣದ, ಜತೆಯಲ್ಲಿ ಪಿಯುಸಿ ಓದಿದ್ದ ಇಬ್ಬರು ಯುವತಿಯರು ಒಟ್ಟಿಗೆ ಬದುಕಬೇಕು ಎಂದು ತೀರ್ಮಾನಿಸಿ ಬೆಂಗಳೂರಿಗೆ ಬಂದಿದ್ದರು. ಪೋಷಕರು ನೀಡಿದ ದೂರಿನಂತೆ ಅವರಿಬ್ಬರನ್ನೂ ಪತ್ತೆ ಮಾಡಿದ ಪೊಲೀಸರು, ಅವರ ಮನವೊಲಿಸಿ, ಬೇರ್ಪಡಿಸಿದ್ದಾರೆ ಎಂಬುದು ಇತ್ತೀಚೆಗೆ ವರದಿಯಾಗಿತ್ತು.

ಮದುವೆ ಮತ್ತು ಕುಟುಂಬ ಎಂಬುದು ಆದಿ ಮಾನವನ ಕಾಲದ ಪರಿಕಲ್ಪನೆಯೇನೂ ಅಲ್ಲ. ಮನುಷ್ಯನ ವಿಕಾಸದ ಹಾದಿಯ ಯಾವುದೋ ಹಂತದಲ್ಲಿ ಅದು ಸೇರಿಕೊಂಡಿತು. ಆಸ್ತಿಯು ಯಾರದೋ ಪಾಲಾಗಬಾರದು ಎಂಬ ಅರ್ಥಶಾಸ್ತ್ರೀಯವಾದ ಒಂದು ಆಯಾಮ ಈ ವ್ಯವಸ್ಥೆಗೆ ಇದೆ. ಜತೆಗೆ, ವಂಶವನ್ನು ಉಳಿಸುವುದು, ಬೆಳೆಸುವುದು ಎಂಬ ಪುರುಷ ಪ್ರಧಾನ ಮನಸ್ಥಿತಿಯ ಆಯಾಮವೂ ಇದೆ.

ಮದುವೆ ಮತ್ತು ಕುಟುಂಬ ವ್ಯವಸ್ಥೆ ನಿಂತ ನೀರೇನೂ ಅಲ್ಲ. ವರ್ಷಗಳು ಉರುಳಿದಂತೆ ಈ ವ್ಯವಸ್ಥೆಯಲ್ಲಿಯೂ ಪಲ್ಲಟಗಳು ಕಾಣಿಸಿಕೊಂಡಿವೆ. ಅವಿಭಕ್ತ ಕುಟುಂಬವು ವಿಭಕ್ತವಾಗಿ, ಅಣುವಾಗಿ, ಸಹಬಾಳ್ವೆಯಾಗಿ ಬದಲಾಗಿದೆ. ಆದರೆ, ಆಶಯದಲ್ಲಿ, ಜನರ ಧೋರಣೆಯಲ್ಲಿ ದೊಡ್ಡ ಬದಲಾವಣೆಯನ್ನೇನೂ ಇದು ಮಾಡಿಲ್ಲ ಎಂಬುದು ನಿಜ. ಬದುಕು ಎಂಬ ವಿಚಾರದಲ್ಲಿ ಬೇರೊಂದು ಸ್ತರದ ವ್ಯತ್ಯಾಸವೂ ಕಾಣಿಸಿಕೊಂಡಿದೆ. ಅದು, ಹೆಣ್ಣು–ಹೆಣ್ಣು, ಗಂಡು–ಗಂಡು ಜತೆಯಾಗಿ ಬದುಕುವುದು. ಯುರೋಪ್‌ ಮತ್ತು ಅಮೆರಿಕಾ ಖಂಡದ ಹಲವು ದೇಶಗಳಲ್ಲಿ ಸಲಿಂಗ ಮದುವೆಗೆ ಕಾನೂನಿನ ಮಾನ್ಯತೆಯೂ ದೊರಕಿದೆ. ಏಷ್ಯಾದ ದೇಶಗಳಲ್ಲಿ ಇದು ಇನ್ನೂ ಶೈಶವಾವಸ್ಥೆಯಲ್ಲಿಯೇ ಇದೆ. ಇಂತಹ ಮದುವೆಗೆ ಕಾಯ್ದೆಯ ಮುದ್ರೆ ಒತ್ತಿರುವ ಏಷ್ಯಾದ ಮೊದಲ ದೇಶ ತೈವಾನ್‌.ಏಕಪೋಷಕತ್ವ ಎಂಬ ವ್ಯವಸ್ಥೆಗೂ ನಮ್ಮ ಸಮಾಜ ತೆರೆದುಕೊಂಡಿದೆ. ಗಂಡು ಅಥವಾ ಹೆಣ್ಣು, ವಿವಿಧ ವಿಧಾನಗಳ ಮೂಲಕ ಮಗುವನ್ನು ಪಡೆದು, ಆ ಮಗುವನ್ನು ತಾಯಿಯೂ ತಂದೆಯೂ ಆಗಿ ಸಾಕುತ್ತಿರುವ ನಿದರ್ಶನಗಳು ನಮ್ಮ ಮುಂದೆ ಬಹಳ ಇವೆ.

ಪರಸ್ಪರ ಒಪ್ಪಿಗೆಯ ಸಲಿಂಗ ಲೈಂಗಿಕತೆಯು ಅಪರಾಧವಲ್ಲ, ಅಸಹಜವಲ್ಲ ಎಂದು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು 2018ರಲ್ಲಿ ತೀರ್ಪು ಕೊಟ್ಟಿದೆ. ಈ ಮೂಲಕ, ವಸಾಹತುಶಾಹಿ ಕಾಲದ ಕಾನೂನು ಒಂದನ್ನು ಸುಪ್ರೀಂ ಕೋರ್ಟ್‌ ಬದಲಾಯಿಸಿದೆ. ಈಗ, ಸಲಿಂಗ ಮದುವೆಯನ್ನು ಕಾನೂನು ಸಮ್ಮತಗೊಳಿಸಬೇಕು ಎಂದು ಕೋರಿ ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿದೆ. ಅದರ ವಿಚಾರಣೆಯೂ ನಡೆಯುತ್ತಿದೆ. ‘ಇಂತಹ ಮದುವೆ ನಮ್ಮ ಮೌಲ್ಯಕ್ಕೆ ವಿರುದ್ಧ, ಅದಕ್ಕೆ ಕಾನೂನಿನ ಮಾನ್ಯತೆ ಇಲ್ಲ, ಸಮಾಜವೂ ಇದನ್ನು ಒಪ್ಪುವುದಿಲ್ಲ’ ಎಂದು ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಹೇಳಿಕೆ ಕೊಟ್ಟಿದೆ.

‘ಹಿಂದೂ ವಿವಾಹ ಕಾಯ್ದೆಯಲ್ಲಿ ಗಂಡ ಮತ್ತು ಹೆಂಡತಿಯ ಉಲ್ಲೇಖ ಇದೆ. ಸಲಿಂಗ ಮದುವೆಯಲ್ಲಿ ಗಂಡ ಯಾರು, ಹೆಂಡತಿ ಯಾರು ಎಂಬುದನ್ನು ಯಾರು ನಿರ್ಧರಿಸಬೇಕು’ ಎಂದು ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಪ್ರಶ್ನಿಸಿದ್ದಾರೆ. ಪರಸ್ಪರ ಇಷ್ಟಪಟ್ಟು ಜತೆಗೆ ಬದುಕು ಕಟ್ಟಿಕೊಳ್ಳಲು ತೀರ್ಮಾನಿಸಿದವರಿಗೆ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಕಷ್ಟವಾಗಲಿಕ್ಕಿಲ್ಲ ಅನಿಸುತ್ತದೆ.

ಬದಲಾವಣೆಯೇ ಜಗದ ನಿಯಮ ಎಂದು ಮನುಷ್ಯ ಹೇಳುತ್ತಲೇ ಇರುತ್ತಾನೆ. ಆದರೆ, ಸಣ್ಣ ವ್ಯತ್ಯಾಸಕ್ಕೂ ಭಾರಿ ಜಡತ್ವ ತೋರುವುದು ನಮ್ಮ ಸಮಾಜದ ಲಕ್ಷಣ. ಬದಲಾವಣೆ ಆಗುವುದೇ ಇಲ್ಲ ಎಂದಲ್ಲ. ಅದರ ನಿಧಾನವು ಬದಲಾವಣೆ ಬಯಸುವವರ ಸಹನೆಗೆ ಸವಾಲು ಒಡ್ಡುತ್ತಲೇ ಇರುತ್ತದೆ. ಈಗ, ಸಲಿಂಗ ಲೈಂಗಿಕತೆ ಎಂದರೆ ಹೌಹಾರುವವರು, ಅದೇನೋ ಅಸಹಜ, ಅನೈತಿಕ ಎನ್ನುವವರ ಸಂಖ್ಯೆ ಬಹಳ ಇಲ್ಲ ಎಂಬುದೂ ನಿಜ.

ಪ್ರೀತಿ ಮತ್ತು ಮದುವೆ ಒಂದೇ ನಾಣ್ಯದ ಎರಡು ಮುಖಗಳು ಎಂಬುದನ್ನು ನಮ್ಮ ಸಮಾಜ ಒಪ್ಪುತ್ತದೆ (ಅದು ನಿಜವೇ ಎಂಬುದು ಬೇರೆ ಮಾತು, ಬಿಡಿ). ಪರಸ್ಪರ ಪ್ರೀತಿಸಿದವರು ಮದುವೆಯಾಗಬೇಕು ಎಂಬ ಅರ್ಥವೂ ಇದಕ್ಕೆ ಇಲ್ಲವೇ? ಪರಸ್ಪರ ಪ್ರೀತಿಸಿದ ಇಬ್ಬರು ಯುವತಿಯರು ಅಥವಾ ಇಬ್ಬರು ಪುರುಷರು ಮದುವೆಯಾಗದಂತೆ ತಡೆಯುವುದು ಅಸಹಜ, ಅನೈತಿಕ ಮತ್ತು ಅಧರ್ಮ ಅನಿಸಿಕೊಳ್ಳದೇ? ನೈತಿಕತೆ ಮತ್ತು ಧರ್ಮ ಸದಾ ತರ್ಕಬದ್ಧವಾಗಿಯೇ ಇರಬೇಕು ಎಂದು ಬಯಸಬಾರದೇನೋ.

ಮದುವೆ ಮತ್ತು ಕುಟುಂಬ ವ್ಯವಸ್ಥೆಯು ಸಾಮಾಜಿಕ ಎಂಬ ವಾದ ಇದೆ. ಆದರೆ, ಮದುವೆ ಎನ್ನುವುದು ಇಬ್ಬರು ವ್ಯಕ್ತಿಗಳ ಅತ್ಯಂತ ಖಾಸಾ ವಿಷಯವೂ ಹೌದು. ಇಲ್ಲಿ, ಅವರ ಆಯ್ಕೆಗೆ ಇರುವಷ್ಟು ಮಹತ್ವ ಬೇರೆ ಯಾವುದಕ್ಕೂ ಇಲ್ಲ. ಅದು ವ್ಯಕ್ತಿಯ ಸ್ವಾತಂತ್ರ್ಯ ಕೂಡ. ಹಾಗಿರುವಾಗ, ಮದುವೆಯಂತಹ ವಿಚಾರದಲ್ಲಿ ಸರ್ಕಾರವೊಂದು ಮೂಗು ತೂರಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ಬಗ್ಗೆ ಚರ್ಚೆ ನಡೆಯಬೇಕು ಅನಿಸುತ್ತದೆ.

ಒಟ್ಟಿಗೆ ಬದುಕುವುದಕ್ಕೆ ಮದುವೆ ಎಂಬ ಹಣೆಪಟ್ಟಿಯ ಅಗತ್ಯ ನಮಗೇನೂ ಇಲ್ಲ ಎಂದು ಸಲಿಂಗ ವಿವಾಹವಾಗಲು ಬಯಸುವ ಜೋಡಿಗಳು ತೀರ್ಮಾನಿಸಿದರೆ ಅದು ಧರ್ಮ, ಕಾನೂನಿನ ಉಲ್ಲಂಘನೆ ಆಗುವುದಕ್ಕೆ ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT